ಬೆಂಗಳೂರು: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ನಿರೀಕ್ಷಿತ 'ಕಾಂತಾರ: ಚಾಪ್ಟರ್ 1' ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ ಎಂದು ಚಿತ್ರತಂಡ ಸೋಮವಾರ ತಿಳಿಸಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಪ್ಯಾನ್-ಇಂಡಿಯಾ ಚಿತ್ರವು ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 2022ರ 'ಕಾಂತಾರ' ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ರಿಷಭ್ ಶೆಟ್ಟಿ ಅವರೇ ಬರೆದು ನಿರ್ದೇಶಿಸಿದ್ದಾರೆ.
ಪ್ರೊಡಕ್ಷನ್ ಹೌಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದು, ಮೇಕಿಂಗ್ ವಿಡಿಯೋವನ್ನು ಸಹ ಬಿಡುಗಡೆ ಮಾಡಿದೆ.
'ಚಿತ್ರೀಕರಣ ಪೂರ್ಣಗೊಂಡಿದೆ. #WorldOfKantara ~ ತಯಾರಿಕೆಯ ಒಂದು ನೋಟ. ಕಾಂತಾರ: ಚಾಪ್ಟರ್ 1 ಒಂದು ದೈವಿಕ ಪ್ರಯಾಣವಾಗಿದ್ದು, ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಅಚಲವಾದ ಸಮರ್ಪಣೆ, ನಿರಂತರ ಕಠಿಣ ಪರಿಶ್ರಮ ಮತ್ತು ಅದ್ಭುತ ತಂಡದ ಮನೋಭಾವದಿಂದ ಜೀವ ತುಂಬಲಾಗಿದೆ' ಎಂದು ಬರೆದಿದೆ.
'ಈ ಪೌರಾಣಿಕ ಕಥೆಯು ಪ್ರಪಂಚದಾದ್ಯಂತ ದೊಡ್ಡ ಪರದೆಗಳಲ್ಲಿ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದ್ದು, ಅಲ್ಲೀವರೆಗೂ ಕಾಯುವುದು ಕಷ್ಟದ ಕೆಲಸವಾಗಿದೆ' ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ.
'ಕಾಂತಾರ'ದ ಕಥೆಯು ಕರ್ನಾಟಕದ ಕರಾವಳಿ ಪ್ರದೇಶದ ಕಾಡುಬೆಟ್ಟುವಿನಲ್ಲಿ ವಾಸಿಸುವ ಒಂದು ಸಣ್ಣ ಸಮುದಾಯದ ಸುತ್ತ ಹೆಣೆಯಲ್ಪಟ್ಟಿತು. 16 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾದ ಕಾಂತಾರ ಚಿತ್ರವು ವಿಶ್ವದಾದ್ಯಂತ 400 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿತು.
ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು ಮತ್ತು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ರಿಷಭ್ ಶೆಟ್ಟಿ ಅವರಿಗೆ ಚೊಚ್ಚಲ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತು.