ರಥಾವರ ಚಿತ್ರದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಇದೀಗ 'ಚೌಕಿದಾರ್' ಚಿತ್ರದ ಜೊತೆ ಮತ್ತೆ ಬರುತ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಮತ್ತು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚೌಕಿದಾರ್ ಬಹುಭಾಷೆಗಳಲ್ಲಿ ತಯಾರಾಗುತ್ತಿದೆ. ಶೀಘ್ರದಲ್ಲೇ ತೆರೆಗೆ ಬರಲಿದೆ. ತಂಡವು ಸದ್ಯ ರೀ-ರೆಕಾರ್ಡಿಂಗ್ ಕೆಲಸದಲ್ಲಿ ನಿರತವಾಗಿದ್ದು, ತೆಲುಗು ಚಿತ್ರರಂಗದ ಎಸ್ ಚಿನ್ನ ಚಿತ್ರತಂಡ ಸೇರಿಕೊಂಡಿದ್ದಾರೆ.
ಪ್ರಭಾಸ್ ಅಭಿನಯದ ರೆಬೆಲ್, ನಾಗಾರ್ಜುನ ಅವರ ಡಾನ್, ರವಿತೇಜ ಅವರ ಬೆಂಗಾಲ್ ಟೈಗರ್ ಮತ್ತು ಬಾಲಕೃಷ್ಣ ಅವರ ಸಿಂಹ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಎಸ್ ಚಿನ್ನ ಅವರು ನಿಖಿಲ್ ಕುಮಾರಸ್ವಾಮಿ ಅವರ ಚೊಚ್ಚಲ ಜಾಗ್ವಾರ್ ಚಿತ್ರದಲ್ಲೂ ಕೆಲಸ ಮಾಡಿದ್ದರು. ಹಲವು ವರ್ಷಗಳ ಬಳಿಕ ಇದೀಗ ಚಿನ್ನ ಚೌಕಿದಾರ್ ಮೂಲಕ ಕನ್ನಡಕ್ಕೆ ಮರಳಿದ್ದಾರೆ.
ಚಿತ್ರದಲ್ಲಿ ಪೃಥ್ವಿ ಅಂಬಾರ್, ಧನ್ಯ ರಾಮ್‌ಕುಮಾರ್ ಮತ್ತು ಚೈತ್ರದಾ ಪ್ರೇಮಾಂಜಲಿ ಚಿತ್ರದಲ್ಲಿ ನಟಿಸಿರುವ ಶ್ವೇತಾ, ಸಾಯಿ ಕುಮಾರ್ ಮತ್ತು ಸುಧಾ ರಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚೌಕಿದಾರ್ ಚಿತ್ರವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಿಸಿದ್ದು, ವಿದ್ಯಾದೇವಿ ಸಹ ನಿರ್ಮಾಪಕಿಯಾಗಿದ್ದಾರೆ. ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದು, ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಾಂಚನಹಳ್ಳಿ ಅವರ ಛಾಯಾಗ್ರಹಣವಿದೆ.