ನವದೆಹಲಿ: ತಮಿಳು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ನಟ ವಿಜಯ್ ಸೇತುಪತಿ ಅವರಿಗೆ ಸಿನಿಪ್ರಿಯರು ವಿಶೇಷ ಸ್ಥಾನವನ್ನು ನೀಡಿದ್ದಾರೆ. ಇದೀಗ ಅವರ ವಿರುದ್ಧ ಕೇಳಿಬಂದಿರುವ ಆರೋಪ ತೀವ್ರ ಚರ್ಚೆಗೆ ಗುರಿಯಾಗಿದೆ. ತಮ್ಮ ವಿರುದ್ಧ ಎಕ್ಸ್‌ನಲ್ಲಿ ಮಹಿಳೆಯೊಬ್ಬರು ಮಾಡಿದ ಲೈಂಗಿಕ ಶೋಷಣೆ ಆರೋಪಗಳನ್ನು ನಟ ನಿರಾಕರಿಸಿದ್ದಾರೆ.
ನಟ 'ಕ್ಯಾರವಾನ್ ಫೇವರ್ಸ್'ಗಾಗಿ ಯುವತಿಯೊಬ್ಬಳನ್ನು ಶೋಷಿಸಿದ್ದಾರೆ ಎಂದು ಜುಲೈ 29 ರಂದು ರಮ್ಯಾ ಮೋಹನ್ ಎಂಬುವವರು ಎಕ್ಸ್‌ನಲ್ಲಿ ಆರೋಪಿಸಿದ್ದಾರೆ. ಈ ಪೋಸ್ಟ್ ಅನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಡಿಲೀಟ್ ಮಾಡಲಾಗಿದೆ.
ಡೆಕ್ಕನ್ ಕ್ರಾನಿಕಲ್‌ಗೆ ನೀಡಿದ ಸಂದರ್ಶನದಲ್ಲಿ ವಿಜಯ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಅವುಗಳನ್ನು 'ಆಧಾರರಹಿತ' ಎಂದು ಕರೆದಿದ್ದಾರೆ. ಈ ಆರೋಪಗಳು ತಮ್ಮ ಇಮೇಜ್‌ಗೆ ಮಸಿ ಬಳಿಯಲು ಮಾಡುತ್ತಿರುವ ಪ್ರಯತ್ನವಾಗಿದೆ ಎಂದು ಹೇಳಿದರು.
'ದೂರದಿಂದ ನನ್ನನ್ನು ತಿಳಿದಿರುವ ಯಾರಾದರೂ ಇದನ್ನು ಕೇಳಿ ನಗುತ್ತಾರೆ. ನನಗೂ ನನ್ನ ಬಗ್ಗೆ ತಿಳಿದಿದೆ. ಈ ರೀತಿಯ ಕೊಳಕು ಆರೋಪವು ನನ್ನ ನೆಮ್ಮದಿಯನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ನನ್ನ ಕುಟುಂಬ ಮತ್ತು ಆಪ್ತರು ಅಸಮಾಧಾನಗೊಂಡಿದ್ದಾರೆ. ಆದರೆ, ನಾನು ಅವರಿಗೆ ಹೇಳುತ್ತೇನೆ, 'ಮಹಿಳೆ ತನ್ನೆಡೆಗೆ ಎಲ್ಲರ ಗಮನ ತಿರುಗಿಸಲು ಹಾಗೆ ಮಾಡುತ್ತಿದ್ದಾಳೆ ಎಂಬುದು ಸ್ಪಷ್ಟವಾಗಿದೆ. ಆಕೆಗೆ ಕೆಲವು ನಿಮಿಷಗಳ ಖ್ಯಾತಿ ಸಿಕ್ಕಿದೆ, ಅವಳು ಅದನ್ನು ಆನಂದಿಸಲಿ' ಎಂದು ಹೇಳಿದರು.
ಎಕ್ಸ್ ಬಳಕೆದಾರರ ವಿರುದ್ಧ ಸೈಬರ್ ಅಪರಾಧ ದೂರು ದಾಖಲಿಸಿದ್ದೇನೆ ಮತ್ತು ಅಂತಹ ಅವಹೇಳನಕಾರಿ ಅಭಿಯಾನಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಾನು ಏಳು ವರ್ಷಗಳಿಂದ ಎಲ್ಲ ರೀತಿಯ ಸಂಘರ್ಷಗಳನ್ನು ಎದುರಿಸಿದ್ದೇನೆ. ಅಂತಹ ಯಾವುದೇ ಉದ್ದೇಶ ನನ್ನ ಮೇಲೆ ಪರಿಣಾಮ ಬೀರಿಲ್ಲ. ಅದು ಎಂದಿಗೂ ಆಗುವುದಿಲ್ಲ' ಎಂದು ನಟ ಹೇಳಿದರು.
'ತಮ್ಮ ಇತ್ತೀಚಿನ ಚಿತ್ರ 'ತಲೈವನ್ ತಲೈವಿ'ಯ ಯಶಸ್ಸು ಕಂಡ ವೇಳೆಯಲ್ಲೇ ಇಂತಹ ಆರೋಪಗಳು ಕೇಳಿಬಂದಿವೆ. ನನ್ನ ಹೊಸ ಚಿತ್ರ ಚೆನ್ನಾಗಿ ಪ್ರದರ್ಶನಗೊಳ್ಳುತ್ತಿದೆ. ಬಹುಶಃ, ಕೆಲವು ಅಸೂಯೆ ಪಟ್ಟ ಅಂಶಗಳು ನನ್ನನ್ನು ಕಳಂಕಗೊಳಿಸುವ ಮೂಲಕ ನನ್ನ ಚಿತ್ರಕ್ಕೆ ಹಾನಿ ಮಾಡಬಹುದು ಎಂದು ಭಾವಿಸಿರಬಹುದು. ಅದು ಹಾಗೆ ಕೆಲಸ ಮಾಡುವುದಿಲ್ಲ. ಇಂದಿನ ದಿನಗಳಲ್ಲಿ ಯಾರು ಯಾರ ಬಗ್ಗೆ ಏನೂ ಬೇಕಾದರೂ ಹೇಳಬಹುದು. ಯಾವುದೇ ಫಿಲ್ಟರ್‌ಗಳಿಲ್ಲ. ನಿಮಗೆ ಬೇಕಾಗಿರುವುದು ಸಾಮಾಜಿಕ ಮಾಧ್ಯಮದಲ್ಲಿ ಒಂದು ಖಾತೆ ಮತ್ತು ಯಾವುದೇ ಪರಿಣಾಮಗಳ ಭಯವಿಲ್ಲದೆ ನಿಮಗೆ ಬೇಕಾದುದನ್ನು ಬರೆಯಬಹುದು' ಎಂದರು.
ಏನಿದು ಆರೋಪ?
ರಮ್ಯಾ ಮೋಹನ್ ಎಂಬ ಎಕ್ಸ್ ಬಳಕೆದಾರರು ನಟ ವಿಜಯ್ ಸೇತುಪತಿ ವಿರುದ್ಧ ಈ ಆರೋಪಗಳನ್ನು ಮಾಡಿದ್ದು, ವಿಜಯ್ ತನಗೆ ಪರಿಚಿತವಾಗಿರುವ ಹುಡುಗಿಯನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಕುರಿತಾದ ಪೋಸ್ಟ್‌ನಲ್ಲಿ, ವಿಜಯ್ ಸೇತುಪತಿ ಅವರು 'ಕ್ಯಾರವಾನ್ ಫೇವರ್ಸ್'ಗೆ 2 ಲಕ್ಷ ರೂ., 'ಡ್ರೈವ್'ಗೆ 50 ಸಾವಿರ ರೂ. ನೀಡುವುದಾಗಿ ಹೇಳಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಂತನಂತೆ ವರ್ತಿಸುತ್ತಿದ್ದಾರೆ' ಎಂದು ಹೇಳಲಾಗಿದೆ.
ಇನ್ನೊಂದು ಪೋಸ್ಟ್‌ನಲ್ಲಿ, 'ಕೆಲವು ಸಂವೇದನಾಶೀಲ ಮೂರ್ಖರು ಸತ್ಯವನ್ನು ಒಪ್ಪಿಕೊಳ್ಳುವುದಕ್ಕಿಂತ ಹೆಚ್ಚಾಗಿ ಮೂಲವನ್ನು ಪ್ರಶ್ನಿಸುವುದರ ಮೇಲೆ ಅಥವಾ ಸಂತ್ರಸ್ತರನ್ನು ದೂಷಿಸುವುದರ ಮೇಲೆ ಹೆಚ್ಚು ಗಮನಹರಿಸುವುದು ಹುಚ್ಚುತನ. ಆಕೆಯ ಡೈರಿ ಮತ್ತು ಫೋನ್ ಚಾಟ್‌ಗಳನ್ನು ಪರಿಶೀಲಿಸಿದಾಗ, ಈ ಸತ್ಯವು ಅವರ ಕುಟುಂಬಕ್ಕೆ ಬಿರುಗಾಳಿಯಂತೆ ಎರಗಿದೆ. ಇದು ಕೇವಲ ಒಂದು ಕಥೆಯಾಗಿರಲಿಲ್ಲ. ಇದು ಆಕೆಯ ಜೀವನ, ಆಕೆಯ ನೋವು...' ಎಂದು ಹೇಳಲಾಗಿದೆ.
@Ramya_mohan ಎಂಬ ಬಳಕೆದಾರರ ಖಾತೆಯನ್ನು ಅಂದಿನಿಂದ ನಿಷ್ಕ್ರಿಯಗೊಳಿಸಲಾಗಿದೆ.