ಹೈದರಾಬಾದ್: ತನ್ನ ದೇಹ ತೋರಿಸುವಂತೆ ಫೋಟೋ ಕ್ಲಿಕ್ಕಿಸುತ್ತಿದ್ದ ಫೋಟೋ ಪತ್ರಕರ್ತನಿಗೆ ನಟಿಯೊಬ್ಬರು ಜಾಡಿಸಿ ಎಚ್ಚರಿಕೆ ಕೊಟ್ಟ ಘಟನೆ ನಡೆದಿದೆ.
ತೆಲುಗಿನ ನಟ ಕಿರಣ್ ಅಬ್ಬವರಂ ನಟನೆಯ ದಿಲ್ರುಬಾ ಚಿತ್ರದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಚಿತ್ರದಲ್ಲಿ ನಟಿಸಿರುವ ನಟಿ ರುಕ್ಷಾರ್ ಡಿಲ್ಲಾನ್ ವೇದಿಕೆಯಲ್ಲೇ ತಮ್ಮ ಫೋಟೋಗಳನ್ನು ತೆಗೆದ ಪತ್ರಕರ್ತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ನೀವು ಪತ್ರಕರ್ತರು.. ಯಾವಾಗ ಯಾರ ಫೋಟೋಗಳನ್ನು ಬೇಕಾದರೂ ಕ್ಲಿಕ್ಕಿಸಬಹುದು. ಆದರೆ ಓರ್ವ ಮಹಿಳೆ ತನಗೆ ಅನಾನುಕೂಲವಾಗುತ್ತಿದೆ ಎಂದಾಗ ಫೋಟೋ ಕ್ಲಿಕ್ಕಿಸಬಾರದು. ಅದೂ ಕೂಡ ತಾನು ಮನವಿ ಮಾಡಿದ ಬಳಿಕವೂ ಫೋಟೋ ಕ್ಲಿಕ್ಕಿಸಿದ್ದು ತಪ್ಪು.
ನಾನು ಆಗಲೇ ಈ ಬಗ್ಗೆ ಮಾತನಾಡಬೇಕೋ-ಬೇಡವೋ ಎಂದು ಯೋಚಿಸುತ್ತಿದ್ದೆ. ಆದರೆ ಈಗಲೂ ಸುಮ್ಮನಿದ್ದರೆ ಸರಿಯಲ್ಲ ಎಂದು ಈಗ ಮಾತನಾಡುತ್ತಿದ್ದೇನೆ. ನನ್ನ ನಡೆಯಿಂದ ಚಿಕ್ರಕ್ಕೆ ತೊಂದರೆಯಾಗಬಾರದು ಎಂದು ಸುಮ್ಮನಿದ್ದೆ. ಆದರೆ ಅವರ ವರ್ತನೆ ನನ್ನ ಸಹನೆಯ ಕಟ್ಟೆಯೊಡುವಂತೆ ಮಾಡಿದೆ. ಹೀಗಾಗಿ ತುಂಬಾ ಶಾಂತರೀತಿಯಲ್ಲೇ ಹೇಳುತ್ತಿದ್ದೇನೆ ಎಂದು ನಟಿ ರುಕ್ಷಾರ್ ಡಿಲ್ಲಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ನಟಿ ರುಕ್ಷಾರ್ ಡಿಲ್ಲೋನ್ ವೇದಿಕೆಯಲ್ಲಿ ತಮ್ಮ ಡ್ರೆಸ್ ಸರಿಪಡಿಸಿಕೊಳ್ಳುವ ವೇಳೆ ಪತ್ರಕರ್ತ ಆಕೆಯ ಫೋಟೋಗಳನ್ನು ಕ್ಲಿಕ್ಕಿಸಿದ್ದಾನೆ ಎಂದು ನಟಿ ರುಕ್ಷಾರ್ ಡಿಲ್ಲಾನ್ ಚಿತ್ರತಂಡದ ಜೊತೆ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವೇದಿಕೆಯಲ್ಲಿ ನಟಿ ಫೋಟೋ ಕ್ಲಿಕ್ಕಿಸಿದ ವ್ಯಕ್ತಿಯ ಹೆಸರು ಹೇಳಿಲ್ಲವಾದರೂ ಆ ವ್ಯಕ್ತಿಗೆ ಅರ್ಥವಾಗಿದೆ ಎನ್ನುವ ಅರ್ಥದಲ್ಲಿ ಕಿಡಿಕಾರಿದ್ದಾರೆ.
ಇನ್ನು ಸಸ್ಪೆನ್ಸ್ ಥ್ರಿಲ್ಲರ್ ಕಾ ಚಿತ್ರದ ಬಳಿಕ ನಟ ಕಿರಣ್ ಅಬ್ಬವರಂ ಇದೀಗ ರೋಮ್ಯಾಂಟಿಕ್ ಆಕ್ಷನ್ ಎಂಟರ್ಟೈನರ್ ದಿಲ್ರೂಬಾ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಟಿ ರುಕ್ಸರ್ ಧಿಲ್ಲೋನ್ ಮತ್ತು ಕ್ಯಾಥಿ ಡೇವಿಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಡುಕಳಂ ನರೇನ್, ತುಳಸಿ, ಸತ್ಯ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ವಿಶ್ವ ಕರುಣ್ ನಿರ್ದೇಶಿಸಿದ್ದು, ಸ್ಯಾಮ್ ಸಿಎಸ್ ಅವರ ಸಂಗೀತ ಚಿತ್ರಕ್ಕಿದೆ.
ಮಾರ್ಚ್ 14 ರಂದು ಈ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಸಂದರ್ಭದಲ್ಲಿ ಹೈದರಾಬಾದ್‌ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.