ಕನ್ನಡ ಚಿತ್ರೋದ್ಯಮದಲ್ಲಿ ಈ ಹಿಂದೆ ರೈತರನ್ನು ಕೇಂದ್ರೀಕರಿಸಿದ ಹಲವಾರು ಚಿತ್ರಗಳು ಬಂದಿವೆ. ಆ ಪಟ್ಟಿಗೆ ಇದೀಗ ರಾಮನಗರ ಚಿತ್ರ ಸೇರ್ಪಡೆಯಾಗಿದೆ. ನಿರ್ದೇಶಕ ವಿಜಯ್ ರಾಜ್ ಹೇಳುವ ಪ್ರಕಾರ, 'ಶೀರ್ಷಿಕೆ ಒಂದು ಹಳ್ಳಿಯ ಹೆಸರಾಗಿದೆ. ಇದು ಒಬ್ಬ ವಿದ್ಯಾವಂತ, ದೇಶಭಕ್ತ ರೈತನ ಕುರಿತಾದ ಚಿತ್ರವಾಗಿದೆ. ಉತ್ತಮ ಜೀವನ ನಡೆಸಲು ನಗರಕ್ಕೆ ತೆರಳುವ ಬದಲು, ಅವನು ತನ್ನ ಹಳ್ಳಿಯಲ್ಲಿಯೇ ಇದ್ದು ಕೃಷಿಯನ್ನು ಆರಿಸಿಕೊಳ್ಳುತ್ತಾನೆ. ಅಂತಿಮವಾಗಿ ಆತ ತನ್ನ ಹಳ್ಳಿಯ ಇತರ ವಿದ್ಯಾವಂತ ಯುವಕರಿಗೆ ಮಾದರಿಯಾಗುತ್ತಾನೆ'.
ಇತ್ತೀಚೆಗಷ್ಟೇ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆಯಾಗಿದ್ದು, ಗಮನ ಸೆಳೆದಿವೆ. 'ಈ ಚಿತ್ರವು ಹಳ್ಳಿಯ ಹುಡುಗನೊಬ್ಬ ಹಳ್ಳಿಯಲ್ಲಿಯೇ ಇದ್ದು ಕೃಷಿ ಮಾಡಲು ನಿರ್ಧರಿಸುವಾಗ ಎದುರಿಸುವ ಸವಾಲುಗಳನ್ನು ತೋರಿಸುತ್ತದೆ. ಅವನು ತನ್ನ ಶಿಕ್ಷಣದ ಮೌಲ್ಯವನ್ನು ಪ್ರಶ್ನಿಸುತ್ತಾ ಎಲ್ಲರಿಂದಲೂ ಟೀಕೆಗಳನ್ನು ಎದುರಿಸುತ್ತಾನೆ. ಆದರೂ, ಅವನು ಈ ಎಲ್ಲ ಅಡೆತಡೆಗಳನ್ನು ನಿವಾರಿಸಿ ಒಬ್ಬ ಮಹಾನ್ ರೈತ ಮತ್ತು ದೇಶಭಕ್ತನಾಗುತ್ತಾನೆ' ಎಂದು ನಟ ಪ್ರಭುಸೂರ್ಯ ಹಂಚಿಕೊಳ್ಳುತ್ತಾರೆ.
ರಾಮನಗರವು ಯುಗಾದಿ ಹಬ್ಬದ ಸಮಯದಲ್ಲಿ ಬಿಡುಗಡೆಗೆ ಸಜ್ಜಾಗಿದ್ದು, ಇಂದಿನ ಪ್ರೇಕ್ಷಕರೊಂದಿಗೆ ಪ್ರತಿಧ್ವನಿಸುವ ಗ್ರಾಮೀಣ ಜೀವನದ ಹೊಸ ದೃಷ್ಟಿಕೋನವನ್ನು ತೆರೆದಿಡುತ್ತದೆ. ಚಿತ್ರಕ್ಕೆ ಸಿಕೆ ಮಂಜುನಾಥ್ ಬಂಡವಾಳ ಹೂಡಿದ್ದು, ಈ ಮೂಲಕ ಚೊಚ್ಚಲ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಚಿತ್ರಕ್ಕೆ ಕೆವಿನ್ ಸಂಗೀತ ಸಂಯೋಜಿಸಿದ್ದು, ಹಾಡುಗಳು ಸಿರಿ ಮ್ಯೂಸಿಕ್ ಲೇಬಲ್ ಅಡಿಯಲ್ಲಿ ಬಿಡುಗಡೆಯಾಗಲಿವೆ.