ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಯುಕೆಯ ಹೌಸ್ ಆಫ್ ಕಾಮನ್ಸ್‌ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಾಂಸ್ಕೃತಿಕ ಮತ್ತು ಸಾರ್ವಜನಿಕ ಸೇವೆ"ಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಲಂಡನ್ ಮೂಲದ ಥಿಂಕ್‌ಟ್ಯಾಂಕ್ ಬ್ರಿಡ್ಜ್ ಇಂಡಿಯಾ ಸಂಸ್ಥೆ ನಟನಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಗುರುವಾರ ರಾತ್ರಿ ನಡೆದ ಈ ಸಮಾರಂಭವನ್ನು ಬ್ರಿಟಿಷ್-ಭಾರತೀಯ ಸಂಸತ್ ಸದಸ್ಯ ನವೆಂದು ಮಿಶ್ರಾ ಆಯೋಜಿಸಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಬ್ರಿಗೇಡ್ ಇಂಡಿಯಾ, ಕಳೆದ ರಾತ್ರಿ ನವೆಂದು ಮಿಶ್ರಾ ಹೌಸ್ ಆಫ್ ಕಾಮನ್ಸ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಬ್ರಿಡ್ಜ್ ಇಂಡಿಯಾ ತನ್ನ ಮೊದಲ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿತು.
ಭಾರತೀಯ ಸಮುದಾಯದ ಸಂಸದರು, ರಾಜತಾಂತ್ರಿಕರು ಮತ್ತು ಭಾರತ ಸಮುದಾಯದ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ಬರೆದುಕೊಂಡಿದೆ.
ಶುಕ್ರವಾರ ಚಿರಂಜೀವಿ ಕೂಡಾ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಮಾತನಾಡುವುದಕ್ಕೆ ಪದಗಳು ಸಿಗುತ್ತಿಲ್ಲ. ನನ್ನ ಪ್ರತಿಯೊಬ್ಬ ಪ್ರೀತಿಯ ಅಭಿಮಾನಿಗಳು, ಸಹೋದರ, ಸಹೋದರಿಯರು, ನನ್ನ ಸಿನಿಮಾ ಕುಟುಂಬ, ಹಿತೈಷಿಗಳು, ಸ್ನೇಹಿತರು ಮತ್ತು ನನ್ನ ಕುಟುಂಬದ ಎಲ್ಲ ಸದಸ್ಯರು ಮತ್ತು ಮಾನವೀಯ ಕಾರ್ಯಗಳಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ.