ಟಗರುಪಲ್ಯ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ ನಾಗಭೂಷಣ ಇದೀಗ 'ವಿದ್ಯಾಪತಿ' ಮೂಲಕ ಪ್ರೇಕ್ಷಕರ ಎದುರಿಗೆ ಬರಲು ಸಜ್ಜಾಗಿದ್ದಾರೆ. ಚಿತ್ರವು ಏಪ್ರಿಲ್ 10ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬುಧವಾರವಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಮತ್ತಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಹಿಂದೆ 'ಇಕ್ಕಟ್' ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾದ ಕಥೆ, ಚಿತ್ರಕಥೆ, ನಿರ್ದೇಶನ ಮತ್ತು ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
'ವಿದ್ಯಾಪತಿ' ಚಿತ್ರದಲ್ಲಿ ನಾಗಭೂಷಣ ಅವರ ಜೊತೆಗೆ ಉಪಾಧ್ಯಕ್ಷ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದ ಮಲೈಕಾ ವಸುಪಾಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಡಾಲಿ ಧನಂಜಯ್ ಅವರು ತಮ್ಮ 'ಡಾಲಿ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ ವಿದ್ಯಾಪತಿಯನ್ನು ನಿರ್ಮಿಸಿದ್ದು, ಇದು ಅವರ ನಿರ್ಮಾಣದ ನಾಲ್ಕನೇ ಚಿತ್ರವಾಗಿದೆ.
ಟ್ರೇಲರ್ ಅನ್ನು ನಟ ಧ್ರುವ ಸರ್ಜಾ ಬಿಡುಗಡೆ ಮಾಡಿದ್ದು, ನಟಿ ವಿದ್ಯಾ (ಮಲೈಕಾ ವಸುಪಾಲ್) ಅವರ ಪತಿ ವಿದ್ಯಾಪತಿ ಪಾತ್ರದಲ್ಲಿ ನಟಿಸಿರುವ ನಾಗಭೂಷಣ್ ಅವರ ಕಾಮಿಡಿ ಸಖತ್ ವರ್ಕ್ ಆಗಿದೆ. ಚಿತ್ರದಲ್ಲಿ ನಾಗಭೂಷಣ್ ಅವರ ಪ್ರತಿಸ್ಪರ್ಧಿಯಾಗಿ ಗರುಡಾ ರಾಮ್ ಕಾಣಿಸಿಕೊಂಡಿದ್ದಾರೆ.
ನಟ ಧನಂಜಯ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ವಿದ್ಯಾಪತಿಯಲ್ಲಿ ರಂಗಾಯಣ ರಘು ಕರಾಟೆ ಮಾಸ್ಟರ್ ಆಗಿ ಕಾಣಿಸಿಕೊಂಡಿದ್ದರೆ, ಕಾರ್ತಿಕ್ ರಾವ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 2023 ರಲ್ಲಿ ಬಿಡುಗಡೆಯಾದ ಟಗರು ಪಲ್ಯ ಚಿತ್ರದ ನಂತರ ನಟ ಧನಂಜಯ್ ಜೊತೆಗೆ ನಾಗಭೂಷಣ್ ಮತ್ತೆ ಒಂದಾಗಿದ್ದಾರೆ. ಚಿತ್ರಕ್ಕೆ ಮುರಳಿ ಅವರ ಛಾಯಾಗ್ರಹಣ, ಡಾಸ್ಮೋಡ್ ಅವರ ಸಂಗೀತ ಸಂಯೋಜನೆ, ಮುರುಳಿ ಅವರ ನೃತ್ಯ ನಿರ್ದೇಶನ ಮತ್ತು ಅರ್ಜುನ್ ಮಾಸ್ಟರ್ ಅವರು ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಸಂಯೋಜಿಸಿದ್ದಾರೆ.