ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿ, ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ: ಚಾಪ್ಟರ್ 1, ನವೆಂಬರ್ 20ರ ಗುರುವಾರದ ವೇಳೆಗೆ ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿದೆ. ಈ ಚಿತ್ರವು ಭಾರತದಲ್ಲಿ ₹647 ಕೋಟಿ ಸೇರಿ ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ ₹897 ಕೋಟಿಗೂ ಹೆಚ್ಚು ಗಳಿಸಿದೆ.
ಕನ್ನಡ ಆವೃತ್ತಿಗೆ ತವರು ಪ್ರದೇಶದಲ್ಲಿ ಸ್ಥಿರವಾದ ಬೆಂಬಲ ಸಿಕ್ಕಿದೆ. ಚಿತ್ರ ಬಿಡುಗಡೆಯಾದ 29ನೇ ದಿನದಂದು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾದ ನಂತರವೂ, ಚಿತ್ರಮಂದಿರಗಳಲ್ಲಿ ಚಿತ್ರ ವೀಕ್ಷಿಸುತ್ತಿರುವವರ ಸಂಖ್ಯೆಯು ಮುಂದುವರಿದಿದೆ.
ಕರ್ನಾಟಕದಲ್ಲಿಯೇ, 250 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾಂತಾರ ಚಿತ್ರವು ತನ್ನ ಪ್ರಭಾವಶಾಲಿ ನಿರೂಪಣೆಯಿಂದ ಮೆಚ್ಚುಗೆ ಗಳಿಸಿದೆ. ಕರ್ನಾಟಕದ ಜಾನಪದ, ಸಂಸ್ಕೃತಿ ಮತ್ತು ನಂಬಿಕೆಗಳು ಬೇರೂರಿರುವ ಸ್ಥಳೀಯ ಕಥೆಗಳನ್ನು ಸಾರ್ವತ್ರಿಕ ಆಕರ್ಷಣೆಯೊಂದಿಗೆ ತೆರೆ ಮೇಲೆ ತಂದಿದೆ. ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ಇದು ಇಷ್ಟವಾಗಿದೆ.
ಹಿಂದಿ ಆವೃತ್ತಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿರುವ ಕಾಂತಾರ ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ ವ್ಯಕ್ತವಾಗಿದೆ. ಉತ್ತರ ಭಾರತದ ಮುಖ್ಯವಾಹಿನಿಯ ಹೊರಗಿನಿಂದ ಬರುವ ಕಥೆಗಳಿಗೆ ಪ್ರೇಕ್ಷಕರು ಹೆಚ್ಚು ಹೆಚ್ಚು ತೆರೆದುಕೊಳ್ಳುತ್ತಿದ್ದಾರೆ. 2022ರ ಬ್ಲಾಕ್ ಬಸ್ಟರ್ ಚಿತ್ರ ಕಾಂತಾರ ನೋಡಿದ್ದ ಪ್ರೇಕ್ಷಕರು ಪ್ರೀಕ್ವೆಲ್ ವೀಕ್ಷಿಸಿ ಅಪ್ಪಿಕೊಂಡಿದ್ದಾರೆ. ರಿಷಭ್ ಶೆಟ್ಟಿ ನಿರ್ದೇಶನ ಮತ್ತು ನಟನೆಗೆ ಜನ ಫುಲ್ ಮಾರ್ಕ್ಸ್ ನೀಡಿದ್ದಾರೆ.
50 ದಿನಗಳ ಮೈಲಿಗಲ್ಲು ಮತ್ತು ಸುಮಾರು 900 ಕೋಟಿ ಜಾಗತಿಕ ಬಾಕ್ಸ್ ಆಫೀಸ್ ಗಳಿಕೆಯೊಂದಿಗೆ, ಕಾಂತಾರ: ಚಾಪ್ಟರ್ 1 ಈ ವರ್ಷದ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ.
2022ರ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿರುವ ಕಾಂತಾರ: ಚಾಪ್ಟರ್ 1 ನಲ್ಲಿ ರಿಷಭ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ನಟಿಸಿದ್ದಾರೆ. ಇನ್ನುಳಿದಂತೆ ಪ್ರಮೋದ್ ಶೆಟ್ಟಿ, ರಾಕೇಶ್ ಪೂಜಾರಿ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ, ಹರಿಪ್ರಶಾಂತ್ ಎಂಜಿ, ಶನೀಲ್ ಗೌತಮ್ ಮತ್ತು ನವೀನ್ ಬೊಂದೇಲ್ ನಟಿಸಿದ್ದಾರೆ.