ನಟ ಅಜಯ್ ರಾವ್ ನಟನೆಯ 'ಸರಳ ಸುಬ್ಬಾರಾವ್' ಚಿತ್ರತಂಡ ಇದೀಗ ಬಿಡುಗಡೆಗೆ ಸಜ್ಜಾಗಿದ್ದು, ರಿಯಾನ್ ಕ್ರಿಯೇಷನ್ಸ್ ಅಡಿಯಲ್ಲಿ ಲೋಹಿತ್ ನಂಜುಂಡಯ್ಯ ನಿರ್ಮಿಸಿರುವ ಈ ಚಿತ್ರವು ಅಕ್ಟೋಬರ್ 24 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 1970ರ ದಶಕದ ಮೈಸೂರಿನಲ್ಲಿ ನಡೆಯುವ ಕಥೆ ಇದಾಗಿದ್ದು, ಪ್ರೀತಿ, ನಗು ಮತ್ತು ಸಂಬಂಧಗಳ ಹೊಸ ಕಥೆಯನ್ನು ನೀಡುತ್ತದೆ.
ಈ ಚಿತ್ರದಲ್ಲಿ ಅಜಯ್ ರಾವ್ ಅವರಿಗೆ ಜೋಡಿಯಾಗಿ ಮಿಶಾ ನಾರಂಗ್ ನಟಿಸಿದ್ದು, ಈ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಪೋಷಕ ನಟರಾದ ರಂಗಾಯಣ ರಘು ಮತ್ತು ಚಿತ್ಕಲಾ ಬಿರಾದಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದುದ್ದಕ್ಕೂ ಹಾಸ್ಯ ಮತ್ತು ಭಾವನೆಗಳ ಪರಿಪೂರ್ಣ ಸಮತೋಲನ ಕಾಯ್ದುಕೊಳ್ಳಲಾಗಿದೆ ಎಂದು ಲೋಹಿತ್ ನಂಜುಂಡಯ್ಯ ಹೇಳುತ್ತಾರೆ.
ಶ್ರಾವಣಿ ಸುಬ್ರಹ್ಮಣ್ಯ ಖ್ಯಾತಿಯ ಮಂಜು ಸ್ವರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಿರ್ದೇಶಕರ ದೃಷ್ಟಿಕೋನವು ಪ್ರೀತಿ, ಮೌಲ್ಯಗಳು ಮತ್ತು ಸಂಬಂಧಗಳು ಸರಳತೆಯಲ್ಲಿ ಅರಳುವ ಜಗತ್ತನ್ನು ಜೀವಂತಗೊಳಿಸುತ್ತದೆ. ಈ ನಿರೂಪಣೆಗೆ ಪೂರಕವಾಗಿ ಅಜನೀಶ್ ಬಿ ಲೋಕನಾಥ್ ಅವರ ಸಂಗೀತ ಸಂಯೋಜನೆ ಇದ್ದು, ನಾಲ್ಕು ಸ್ಮರಣೀಯ ಹಾಡುಗಳನ್ನು ಒಳಗೊಂಡಿದೆ.
ಚಿತ್ರದಲ್ಲಿ ವೀಣಾ ಸುಂದರ್, ರಿಷಿಕಾ ನಾಯಕ್, ಶ್ರೀ ರಾಮ್, ವಿಜಯ್ ಚೆಂಡೂರ್ ಮತ್ತು ಇತರರು ಸಹ ಈ ತಂಡದಲ್ಲಿದ್ದಾರೆ. ಛಾಯಾಗ್ರಾಹಕರಾಗಿ ಪ್ರದೀಪ್, ಕಲಾ ನಿರ್ದೇಶಕರಾಗಿ ಅಮರ್ ಚೊಚ್ಚಲ ಬಾರಿಗೆ ಕೆಲಸ ಮಾಡಿದ್ದು, ಪ್ರತಿಯೊಬ್ಬ ತಂತ್ರಜ್ಞರು 1970ರ ದಶಕದ ಮೈಸೂರನ್ನು ಸೂಕ್ಷ್ಮವಾಗಿ ಮರುಸೃಷ್ಟಿಸಲು ಕೆಲಸ ಮಾಡಿದ್ದಾರೆ.