ಚಿತ್ರವೊಂದರ ಕಥೆಯ ಮೂಲವನ್ನು ಕೆದಕುತ್ತಾ ಹೋಗುವುದು ಯಾವಾಗಲೂ ನಿರ್ದೇಶಕರಿಗೆ ಅಥವಾ ಕಥೆಗಾರರಿಗೆ ಒಂದೊಂದು ವಿಭಿನ್ನ ಅನುಭವವನ್ನುಂಟು ಮಾಡುತ್ತದೆ. ಕಾಂತಾರ: ಚಾಪ್ಟರ್ 1 ಮೂಲಕ ರಿಷಬ್ ಶೆಟ್ಟಿ ಅವರಿಗೂ ಅಂತದ್ದೇ ಅನುಭವವಾಗಿದೆ.
ಸಿನಿಮಾ ಎಕ್ಸ್‌ಪ್ರೆಸ್ ಜೊತೆಗಿನ ವಿಶೇಷ ಸಂಭಾಷಣೆಯಲ್ಲಿ, 'ನಾವು 120 ದಿನಗಳ, ಐದರಿಂದ ಆರು ತಿಂಗಳ ಕಾಲ ನಿರಂತರ ಶೂಟಿಂಗ್ ಮಾಡುತ್ತಿದ್ದೆವು. ಇದು ಊಹಿಸಲೂ ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಎದುರಿಸಿದ ಸಮಸ್ಯೆಗಳು ನಮಗೆ ಚಿತ್ರವು ನಿಲ್ಲುತ್ತದೆ ಎಂದು ಅನಿಸಿತು. ಆದರೆ, ಚಿತ್ರ ನಿಲ್ಲಲಿಲ್ಲ. ಈ ಚಿತ್ರವು ನಮ್ಮನ್ನು ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಪರೀಕ್ಷಿಸಿದೆ. ಆದರೆ ಅದೇ ಸಮಯದಲ್ಲಿ, ಇದು ಎಲ್ಲ ನಂಬಿಕೆಯಾಗಿತ್ತು. ಸಿನಿಮಾದ ಮೂಲಕ, ತಂತ್ರಜ್ಞರ ಮೂಲಕ, ಪ್ರೇಕ್ಷಕರ ಮೂಲಕ ನಾವು ದೈವವನ್ನು ಕಂಡುಕೊಂಡಿದ್ದೇವೆ' ಎಂದು ರಿಷಭ್ ಹೇಳಿದರು
ಚಿತ್ರೀಕರಣದ ಕುರಿತು ಮಾತನಾಡಿದ ರಿಷಬ್, 'ನಾವು 2024ರ ಏಪ್ರಿಲ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಿದೆವು ಮತ್ತು ಜುಲೈನಲ್ಲಿ ಅದನ್ನು ಪೂರ್ಣಗೊಳಿಸಿದ್ದೇವೆ. ತಂಡದ ಕಾರ್ಯನಿರ್ವಹಣೆ ಮತ್ತು ಯೋಜನೆಯಿಂದಾಗಿ ಇದು ಸಾಧ್ಯವಾಯಿತು. ನಾವು ಎಲ್ಲವನ್ನೂ ನಿಖರವಾಗಿ ಯೋಜಿಸಿದ್ದೆವು ಆದರೆ, ಅನಿರೀಕ್ಷಿತ ಘಟನೆಗಳು ಎದುರಾದವು. ನಾವು ಚಿತ್ರವನ್ನು ನಾಲ್ಕು ಸೀಸನ್‌ಗಳಲ್ಲಿ ಶೂಟ್ ಮಾಡಬೇಕಾಗಿತ್ತು. ಮಳೆ, ಗಾಳಿ, ಬೇಸಿಗೆ ಮತ್ತು ಮತ್ತೆ ಮಳೆ. ನಾವು ಒಂದನ್ನು ತಪ್ಪಿಸಿಕೊಂಡರೆ, ಮತ್ತೊಂದಕ್ಕೆ ಕಾಯಬೇಕಾಗಿತ್ತು' ಎಂದರು.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ: ಚಾಪ್ಟರ್ 1 ಅಕ್ಟೋಬರ್ 2ರಂದು ದೇಶದಾದ್ಯಂತ ಬಿಡುಗಡೆಯಾಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ 650 ಕೋಟಿ ರೂಪಾಯಿದೂ ಅಧಿಕ ಗಳಿಕೆ ಕಂಡಿದೆ. ವಿಶ್ವದಾದ್ಯಂತ 700 ಕೋಟಿ ರೂಪಾಯಿಗಳ ಗಡಿಯನ್ನು ಮೀರಿದೆ.
ರಿಷಭ್ ಶೆಟ್ಟಿ ಜೊತೆಗೆ ಕನಕವತಿ ಪಾತ್ರದಲ್ಲಿ ರುಕ್ಮಿಣಿ ವಸಂತ್, ರಾಜ ರಾಜಶೇಖರ ಪಾತ್ರದಲ್ಲಿ ಜಯರಾಮ್ ಮತ್ತು ಕುಲಶೇಖರ ಪಾತ್ರದಲ್ಲಿ ಗುಲ್ಶನ್ ದೇವಯ್ಯ ನಟಿಸಿದ್ದಾರೆ.