ಅಕ್ಟೋಬರ್ 2ರಂದು ಬಿಡುಗಡೆಯಾದ ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ: ಚಾಪ್ಟರ್ 1 ಉತ್ತಮ ಪ್ರದರ್ಶನ ಕಾಣುತ್ತಾ ಸಾಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಕಂಡಿದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ ಈ ಚಿತ್ರವು ಅಧಿಕೃತವಾಗಿ ವಿಶ್ವದಾದ್ಯಂತ ₹720 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೀಗ, ಆಸ್ಟ್ರೇಲಿಯಾದಲ್ಲಿ 2025ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಕೆಜಿಎಫ್: ಚಾಪ್ಟರ್ 1, ಜೈಲರ್, ಕೂಲಿ, ಪೊನ್ನಿಯಿನ್ ಸೆಲ್ವನ್ ಭಾಗ 1, ಪೊನ್ನಿಯಿನ್ ಸೆಲ್ವನ್ ಭಾಗ 2, ಲಿಯೋ, ಸಲಾರ್ ಭಾಗ 1, ದೇವರ ಭಾಗ 1, ಹನುಮಾನ್, ಛಾವಾ ಮತ್ತು ಸೈಯಾರದಂತಹ ಹಲವು ಚಿತ್ರಗಳ ನಡುವೆಯೂ ಕಾಂತಾರ: ಚಾಪ್ಟರ್ 1 ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆ ಸಾಧಿಸಿದೆ.
ವರದಿಗಳ ಪ್ರಕಾರ, ಈ ಚಿತ್ರವು ವಿದೇಶಗಳಲ್ಲಿ, ವಿಶೇಷವಾಗಿ ಆಸ್ಟ್ರೇಲಿಯಾದಲ್ಲಿ ಅತ್ಯುತ್ತಮ ಪ್ರದರ್ಶನ ಕಂಡಿದೆ. ಸ್ಥಿರವಾದ ಕಲೆಕ್ಷನ್‌ಗಳು ಮತ್ತು ಹೌಸ್‌ಫುಲ್ ಪ್ರದರ್ಶನಗಳು ಈ ವರ್ಷ ಬಿಡುಗಡೆಯಾದ ಇತರೆ ಭಾರತೀಯ ಚಲನಚಿತ್ರಗಳ ಪೈಕಿ ಕಾಂತಾರ: ಚಾಪ್ಟರ್ 1 ಚಿತ್ರವನ್ನು ಅಗ್ರಸ್ಥಾನದಲ್ಲಿ ಇರಿಸಿದೆ.
ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಮ್ ಮತ್ತು ಪ್ರಕಾಶ್ ತುಮಿನಾಡ್ ನಟಿಸಿದ್ದಾರೆ. ಚಿತ್ರಕ್ಕೆ ಅರವಿಂದ್ ಎಸ್ ಕಶ್ಯಪ್ ಅವರ ಛಾಯಾಗ್ರಹಣ, ಬಿ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಮತ್ತು ಸುರೇಶ್ ಮಲ್ಲಯ್ಯ ಅವರ ಸಂಕಲನವಿದೆ.