ತೆಲುಗಿನ ಸ್ಟಾರ್ ನಟ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ಅವರ ಜೀವನದಲ್ಲಿ ಎರಡನೇ ಮಗುವಿನ ಆಗಮನವಾಗುತ್ತಿದೆ. ಜೂನ್ 2023 ರಲ್ಲಿ ಮೊದಲ ಮಗು ಕ್ಲಿನ್ ಕಾರಾಳಿಗೆ ಜನ್ಮ ನೀಡಿದ್ದ ಉಪಾಸನಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಉಪಾಸನ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮತ್ತು ಚಿತ್ರೋದ್ಯಮದ ಸಹೋದ್ಯೋಗಿಗಳು ದಂಪತಿಗೆ ಪ್ರೀತಿ ಮತ್ತು ಅಭಿನಂದನೆಗಳನ್ನು ಸುರಿಸುತ್ತಿದ್ದಾರೆ.
ದೀಪಾವಳಿ ಹಬ್ಬದ ಜೊತೆಗೆ ಉಪಾಸನಾ ಅವರ ಬೇಬಿ ಶವರ್ (ಸೀಮಂತ) ಕಾರ್ಯಕ್ರಮವನ್ನು ಕೊನಿಡೇಲಾ ನಿವಾಸದಲ್ಲಿ ಆಚರಿಸಲಾಗಿತ್ತು. ಸಾಂಪ್ರದಾಯಿಕ ಉಡುಪು ಧರಿಸಿರುವ ಉಪಾಸನಾ ಕುಟುಂಬ ಸದಸ್ಯರು ಅವರನ್ನು ಆಶೀರ್ವದಿಸುತ್ತಿರುವುದು, ರಾಮ್ ಚರಣ್ ಅವರ ಪಕ್ಕದಲ್ಲಿ ನಗುತ್ತಾ ನಿಂತಿರುವುದು ಕಾಣುತ್ತದೆ.
ವಿಡಿಯೊ ಹಂಚಿಕೊಂಡ ಉಪಾಸನ, ಈ ದೀಪಾವಳಿಯು ಆಚರಣೆಯನ್ನು ದುಪ್ಪಟ್ಟುಗೊಳಿಸಿದೆ, ಪ್ರೀತಿಯನ್ನು ಹೆಚ್ಚು ಮಾಡಿದೆ ಮತ್ತು ಆಶೀರ್ವಾದಗಳನ್ನು ದುಪ್ಪಟ್ಟು ಮಾಡಿದೆ" ಎಂದು ಶೀರ್ಷಿಕೆ ನೀಡಿದ್ದಾರೆ. ವೀಡಿಯೊ "ಹೊಸ ಆರಂಭಗಳನ್ನು ಆಚರಿಸುವುದು" ಎಂಬ ಸಾಲಿನಿಂದ ಕೊನೆಗೊಂಡಿತು, ಇದು ಅವರ ಎರಡನೇ ಮಗುವಿನ ಆಗಮನದ ಬಗ್ಗೆ ಇದ್ದ ಊಹಾಪೋಹಗಳನ್ನು ದೃಢಪಡಿಸಿದೆ.
ವಿಡಿಯೋದಲ್ಲಿ ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ಸೇರಿದಂತೆ ಕುಟುಂಬದ ಹಲವಾರು ಸದಸ್ಯರು ತಮ್ಮ ಸೊಸೆಯನ್ನು ಆಶೀರ್ವದಿಸುತ್ತಿರುವುದು ಕಂಡುಬಂದಿದೆ. ವರುಣ್ ತೇಜ್, ಲಾವಣ್ಯ ತ್ರಿಪಾಠಿ, ವೆಂಕಟೇಶ್ ದಗ್ಗುಬಾಟಿ, ನಯನತಾರಾ, ವಿಘ್ನೇಶ್ ಶಿವನ್ ಮತ್ತು ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜ್ನೇವಾ ಕೂಡ ಹಾಜರಿದ್ದರು,
ರಾಮ್ ಚರಣ್ ಮತ್ತು ಉಪಾಸನ
ಜೂನ್ 12, 2012 ರಂದು ಹೈದರಾಬಾದ್‌ನಲ್ಲಿ ವಿವಾಹವಾದ ರಾಮ್ ಚರಣ್ ಮತ್ತು ಉಪಾಸನ, ಚೆನ್ನೈನಲ್ಲಿ ತಮ್ಮ ಶಾಲಾ ದಿನಗಳಿಂದಲೂ ಸ್ನೇಹಿತರಾಗಿದ್ದರು. ವೃತ್ತಿಪರ ರಂಗದಲ್ಲಿ, ರಾಮ್ ಚರಣ್ ಪ್ರಸ್ತುತ ತಮ್ಮ ಮುಂಬರುವ ಚಿತ್ರ ಪೆಡ್ಡಿಗಾಗಿ ತಯಾರಿ ನಡೆಸುತ್ತಿದ್ದಾರೆ, ಈ ವರ್ಷವೇ ಬಿಡುಗಡೆಯಾಗುವ ನಿರೀಕ್ಷೆಯಿದೆ.