ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ: ಚಾಪ್ಟರ್ 1, ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಸಾಧಾರಣ ಓಟವನ್ನು ಮುಂದುವರೆಸಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸದಾ ನೆನಪಿನಲ್ಲಿ ಉಳಿಯುವಂತಹ ಸಾಧನೆಯನ್ನು ಮಾಡಿದೆ. ಈಗಾಗಲೇ ಹಲವು ದಾಖಲೆಗಳನ್ನು ಮುರಿದಿರುವ ಚಿತ್ರವು ಇದೀಗ ಇಂಗ್ಲಿಷ್ ಭಾಷೆಯಲ್ಲಿ ಬಿಡುಗಡೆಗೂ ಮುನ್ನ ಮತ್ತೊಂದು ಹೊಸ ದಾಖಲೆ ಬರೆದಿದೆ. ಗಲ್ಲಾಪೆಟ್ಟಿಗೆಯಲ್ಲಿ ಚಿತ್ರವು ವಿಶ್ವದಾದ್ಯಂತ 800 ಕೋಟಿ ರೂ. ಅಧಿಕ ಗಳಿಕೆ ಕಂಡಿದೆ. ಇದು 2025ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರವಾಗಿದೆ.
ಮೂರನೇ ವಾರದಲ್ಲೂ ಕರ್ನಾಟಕದಾದ್ಯಂತ ಚಿತ್ರಮಂದಿರಗಳು ತುಂಬಿ ತುಳುಕುತ್ತಿದ್ದು, ಕನ್ನಡ ಪ್ರೇಕ್ಷಕರ ಅಚಲ ಬೆಂಬಲ ಮತ್ತು ಪ್ರೀತಿಯನ್ನು ಪ್ರತಿಬಿಂಬಿಸುತ್ತಿದೆ. ಜಾಗತಿಕವಾಗಿ ಚಿತ್ರವು ಒಟ್ಟು 818 ಕೋಟಿ ರೂ.ಗಳಿಸಿದ್ದು, ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಛಾವಾ ಮತ್ತು ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡೆ ಅಭಿನಯದ ಸೈಯಾರಾ ಚಿತ್ರಗಳ ಸಂಗ್ರಹವನ್ನು ಮೀರಿಸಿದೆ. ಅಲ್ಲದೆ, ಭಾರತದಲ್ಲಿ ಸುಮಾರು 554 ಕೋಟಿ ರೂ. ಗಳಿಸಿದ್ದ ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಚಿತ್ರದ ದಾಖಲೆಯನ್ನು ಸಹ ಮುರಿದಿದೆ.
ಕರ್ನಾಟಕದಲ್ಲಿಯೇ, 250 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾಂತಾರ ಚಿತ್ರವು ತನ್ನ ಪ್ರಭಾವಶಾಲಿ ನಿರೂಪಣೆಯಿಂದ ಮೆಚ್ಚುಗೆ ಗಳಿಸಿದೆ. ಕರ್ನಾಟಕದ ಜಾನಪದ, ಸಂಸ್ಕೃತಿ ಮತ್ತು ನಂಬಿಕೆಗಳು ಬೇರೂರಿರುವ ಸ್ಥಳೀಯ ಕಥೆಗಳನ್ನು ಸಾರ್ವತ್ರಿಕ ಆಕರ್ಷಣೆಯೊಂದಿಗೆ ತೆರೆ ಮೇಲೆ ತಂದಿದೆ. ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ಇದು ಇಷ್ಟವಾಗಿದೆ.
ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಮತ್ತು ಚಲುವೇಗೌಡ ನಿರ್ಮಿಸಿದ್ದಾರೆ. ನಿರ್ಮಾಣ ಸಂಸ್ಥೆಯು ಆಸ್ಕರ್ ಪರಿಗಣನೆಗೆ ಚಿತ್ರವನ್ನು ಸಲ್ಲಿಸಲು ಯೋಜಿಸಿದೆ.
2022ರ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿರುವ ಕಾಂತಾರ: ಚಾಪ್ಟರ್ 1 ನಲ್ಲಿ ಕಾಡುಬೆಟ್ಟು ಶಿವನ ಪಾತ್ರದಲ್ಲಿ ರಿಷಭ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ನಟಿಸಿದ್ದಾರೆ. ಇನ್ನುಳಿದಂತೆ ಪ್ರಮೋದ್ ಶೆಟ್ಟಿ, ರಾಕೇಶ್ ಪೂಜಾರಿ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ, ಹರಿಪ್ರಶಾಂತ್ ಎಂಜಿ, ಶನೀಲ್ ಗೌತಮ್ ಮತ್ತು ನವೀನ್ ಬೊಂದೇಲ್ ನಟಿಸಿದ್ದಾರೆ.