ಯಶ್ ನಟನೆಯ ಬಹು ನಿರೀಕ್ಷಿತ 'ಟಾಕ್ಸಿಕ್' ಚಿತ್ರ ಬಿಡುಗಡೆ ದಿನಾಂಕ ಅಧಿಕೃತ ಘೋಷಣೆಯಾಗಿದ್ದು, ಊಹಾಪೋಹಗಳಿಗೆ ತೆರೆ ಎಳೆದಿದೆ. ಚಿತ್ರವು 2026ರ ಮಾರ್ಚ್ 19 ರಂದು ಯೋಜಿಸಿದಂತೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಖಚಿತಪಡಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ, ಸಾಮಾಜಿಕ ಮಾಧ್ಯಮದಲ್ಲಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎನ್ನುವ ವದಂತಿಗಳು ಕೇಳಿಬಂದಿದ್ದವು. 'ಇನ್ನು 140 ದಿನಗಳು ಉಳಿದಿವೆ... ಅವನ ಉಪಸ್ಥಿತಿಯು ನಿಮ್ಮ ಅಸ್ತಿತ್ವದ ಬಿಕ್ಕಟ್ಟು. ಟಾಕ್ಸಿಕ್ ಸಿನಿಮಾ 19-03-2026 ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ' ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ.
ಚಿತ್ರತಂಡದ ಪ್ರಕಾರ, ಚಿತ್ರವು ನಿಗದಿತ ವೇಳಾಪಟ್ಟಿಯಂತೆ ಪ್ರಗತಿಯಲ್ಲಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಪೋಸ್ಟ್-ಪ್ರೊಡಕ್ಷನ್ ಮತ್ತು ವಿಎಫ್‌ಎಕ್ಸ್ ಕೆಲಸಗಳು ಪ್ರಾರಂಭವಾಗಿವೆ. ಅದೇ ಸಮಯದಲ್ಲಿ ಯಶ್ ಮುಂಬೈನಲ್ಲಿ ರಾಮಾಯಣ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದ್ದು, 2026ರ ಆರಂಭದಲ್ಲಿ ಹೈ-ವೋಲ್ಟೇಜ್ ಪ್ರಚಾರ ಆರಂಭವನ್ನು ನಿರೀಕ್ಷಿಸಲಾಗಿದೆ.
ಟಾಕ್ಸಿಕ್ ಚಿತ್ರವು ಗುಡಿ ಪದ್ವಾ, ಯುಗಾದಿ ಮತ್ತು ಮತ್ತು ಈದ್ ಚಿತ್ರಗಳ ನಡುವೆ ಬಿಡುಗಡೆಯಾಗುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡುವ ಗುರಿಯನ್ನು ಹೊಂದಿದೆ.
ಕೆಜಿಎಫ್‌ನ ಜಾಗತಿಕ ಯಶಸ್ಸಿನ ನಂತರ ಯಶ್ ಅವರು ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳಲ್ಲಿ ವ್ಯಾಪಕ ನಿರೀಕ್ಷೆಗೆ ಕಾರಣವಾಗಿದೆ. 2026ರ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗುವ ನಿರೀಕ್ಷೆ ಮೂಡಿಸಿದೆ. ಗೀತು ಮೋಹನ್‌ದಾಸ್ ನಿರ್ದೇಶಿಸಿದ ಟಾಕ್ಸಿಕ್ ಅನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರ ಭಾಷೆಗಳಲ್ಲಿಯೂ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ಮತ್ತು ಯಶ್ ಜಂಟಿಯಾಗಿ ನಿರ್ಮಿಸಿರುವ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್, ರಾ ಆ್ಯಕ್ಷನ್ ಮತ್ತು ಭಾವನೆಯನ್ನು ಮಿಶ್ರಣ ಮಾಡಿ ತೆರೆಮೇಲೆ ಬರಲಿದೆ.