ಡಿಸಿಎಂ ಡಿಕೆ ಶಿವಕುಮಾರ್ ಚಿತ್ರರಂಗದ ಕುರಿತಂತೆ ನಟ್ಟು ಬೋಲ್ಟು ಟೈಟ್ ಮಾಡಬೇಕು ಎಂದು ಹೇಳಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಡಿಕೆಶಿ ಹೇಳಿಕೆಗೆ ಚಿತ್ರರಂಗದಿಂದ ಟೀಕೆಗಳು ವ್ಯಕ್ತವಾಗಿತ್ತು. ಇದೇ ವಿಚಾರವಾಗಿ ಮಾತನಾಡಿರುವ ನಟ ಸುದೀಪ್ DKS ನಟ್ಟು ಬೋಲ್ಟು ಹೇಳಿಕೆ ಕಿತಾಪತಿಗೆ ಸಾಧು ಕೋಕಿಲ ಕಾರಣ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 2ರಂದು ತಮ್ಮ ಹುಟ್ಟುಹಬ್ಬದ ಹಿನ್ನೆಲೆ ಇಂದು ಸುದ್ದಿಗೋಷ್ಠಿ ನಡೆಸಿದ ಸುದೀಪ್, 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕನ್ನಡದ ಸ್ಟಾರ್ ನಟ-ನಟಿಯರು ಗೈರಾಗಿದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದು ನಿಮ್ಮ ನಟ್ಟು ಬೋಲ್ಟ್ ಟೈಟ್ ಮಾಡೋದು ಗೊತ್ತು. ಇದನ್ನು ವಾರ್ನ್ ಅಂತಾ ಆದ್ರೂ ಅಂದ್ಕೊಳಿ, ಮನವಿ ಅಂತಾ ಆದ್ರೂ ಅನ್ಕೊಳಿ ಅಂತ ಎಚ್ಚರಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸುದೀಪ್, ಇದರಲ್ಲಿ ಡಿಕೆ ಶಿವಕುಮಾರ್ ಅವರದ್ದು ಏನು ತಪ್ಪಿಲ್ಲ. ಎಲ್ಲಾ ಕಿತಾಪತಿ ಇರೋದು ಸಾಧು ಕೋಕಿಲಾದ್ದು, ಸಮಾರಂಭದ ವೇದಿಕೆ ಮೇಲೆ ಕುತ್ಕೋಂಡು ಹೇಳ್ತಾರೆ... ಚಿತ್ರರಂಗದ ಎಲ್ಲರನ್ನೂ ಕರೆದರೇ ನಾನು ಹೇಗೆ ವ್ಯವಸ್ಥೆ ಮಾಡಲಿ, ಯಾರಿಗೆ ಭದ್ರತೆ ಕೊಡಲಿ ಅಂತ. ಇದನ್ನು ಮೊದಲು ಡಿಕೆ ಶಿವಕುಮಾರ್ ಅವರಿಗೆ ಹೇಳಬೇಕಿತ್ತು. ವೇದಿಕೆ ಮೇಲೆ ಶಿವಕುಮಾರ್ ಮಾತನಾಡುತ್ತಿದ್ದಾಗ ಸುಮ್ಮನೆ ಕೇಳಿಸಿಕೊಂಡಿದ್ದರು. ಇದಕ್ಕೆಲ್ಲಾ ಸಾಧು ಕೋಕಿಲನೇ ಕಾರಣ. ಕನ್ನಡ ಚಿತ್ರರಂಗದಲ್ಲಿ ಯಾರ್ಯಾರಿಗೆ ವೈಯಕ್ತಿಕವಾಗಿ ಆಹ್ವಾನ ನೀಡಲಾಗಿತ್ತು. ಅವರೆಲ್ಲರೂ ಸಮಾರಂಭಕ್ಕೆ ಹೋಗಿದ್ದರು. ಬರೋದಕ್ಕೆ ಆಗದವರು ಸಮಜಾಯಿಷಿ ಕೊಟ್ಟಿದ್ದಾರೆ. ಇದರಲ್ಲಿ ಸಾಧು ಕೋಕಿಲಾದ್ದು ತಪ್ಪಿಲ್ಲ. ಅವರು ತಮಾಷೆ ಮಾಡಿಕೊಂಡು ಇರ್ತಾರೆ. ಆದರೆ ಈ ವಿಷಯದ ಸಿರೀಯಸ್ ಆಗೊಯ್ತು ಎಂದು ಸುದೀಪ್ ಹೇಳಿದ್ದಾರೆ.
ನಟ ದರ್ಶನ್ ಹಾಗೂ ತಮ್ಮ ಸ್ನೇಹದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದರ್ಶನ್ ಸಿನಿಮಾಗೆ ಒಳ್ಳೇದಾಗಲಿ. ಅವರಿಗೆ ಅವರದ್ದೇ ಆದ ನೋವು ಇರುತ್ತೆ. ಅದರ ಹಿಂದೆ ಅವರ ಅಭಿಮಾನಿಗಳು ಇರುತ್ತಾರೆ. ಅಭಿಮಾನಿಗಳಿಗೂ ಒಂದು ನಂಬಿಕೆ ಇರುತ್ತದೆ. ನಾವು ಮಾತಾಡೋದು ತಪ್ಪಾಗುತ್ತೆ. ಸರ್ಕಾರ, ಕಾನೂನು ಅಂತ ಬಂದಾಗ ಅವರೇನು ಮಾಡಬೇಕು ಅದನ್ನ ಮಾಡ್ತಾ ಇರ್ತಾರೆ. ಅದಕ್ಕೂ ನಾವು ಅಡ್ಡ ಬರಬಾರದು. ಯಾರೂ ಕೈಕಟ್ಕೊಂಡು ಸುಮ್ಮನೇ ಕುಳಿತಿರಲ್ಲ. ಆದರೆ ಕೆಲವೊಂದಕ್ಕೆ ನಾನು ತಲೆಹಾಕೋಕೆ ಹೋಗಲ್ಲ. ಯಾಕಂದ್ರೆ ನಂಗೆ ವೈಯಕ್ತಿಕವಾಗಿ ಇಂಟ್ರೆಸ್ಟ್ ಇಲ್ಲ. ಮಾತಾಡಿದ್ರೆ ಅದು ಎಲ್ಲವನ್ನೂ ಹಾಳಮಾಡುತ್ತೆ. ಜೊತೆಗೆ ಅದು ಕೆಲವೊಮ್ಮೆ ಅಂತರ ಸೃಷ್ಟಿ ಮಾಡುತ್ತೆ ಎಂದು ಹೇಳಿದರು.