ಬೆಂಗಳೂರು: ನಟ-ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ಬಹು ನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್ 1 ಚಿತ್ರದ ಕೇರಳದ ವಿತರಣಾ ಹಕ್ಕನ್ನು ಖ್ಯಾತ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಹೌದು.. ಕಾಂತಾರ ಚಾಪ್ಟರ್ 1 ಚಿತ್ರದ ವಿತರಣೆ ಇನ್ನಿತರೆ ಬ್ಯುಸಿನೆಸ್ ಅನ್ನು ಹೊಂಬಾಳೆ ಫಿಲಮ್ಸ್ ಆರಂಭ ಮಾಡಿದ್ದು, ಸಿನಿಮಾದ ವಿತರಣೆ ಹಕ್ಕನ್ನು ಪ್ಯಾನ್ ಇಂಡಿಯಾ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಖರೀದಿ ಮಾಡಿದ್ದಾರೆ.
ಈ ಹಿಂದೆ ಕೆಜಿಎಫ್ ಚಿತ್ರವನ್ನು ಮಲಯಾಳಂ ನಲ್ಲಿ ಬಿಡುಗಡೆ ಮಾಡಿದ್ದ ನಟ ನಿರ್ಮಾಪಕ, ನಿರ್ದೇಶಕ ಪೃಥ್ವಿರಾಜ್ ಇದೀಗ ಮತ್ತೊಂದು ಕನ್ನಡ ಚಿತ್ರವನ್ನು ಕೇರಳದಲ್ಲಿ ತೆರೆಗೆ ತರುತ್ತಿದ್ದಾರೆ.
ಕೆಜಿಎಫ್ ಚಿತ್ರದ ಮೂಲಕ ಹೊಂಬಾಳೆ ಮತ್ತು ಪೃಥ್ವಿರಾಜ್ ಸುಕುಮಾರನ್ ನಡುವೆ ಆಪ್ತತೆ ಬೆಳೆದಿದ್ದು, ಇದೀಗ ಈ ಸ್ನೇಹ ಕಾಂತಾರ ಚಿತ್ರದ ಮೂಲಕ ಮುಂದುವರೆದಿದೆ.
ಹೊಂಬಾಳೆ ನಿರ್ಮಾಣ ಮಾಡಿದ್ದ ‘ಕೆಜಿಎಫ್’, ‘ಕೆಜಿಎಫ್ 2’ ಮತ್ತು ‘ಕಾಂತಾರ’ ಸಿನಿಮಾಗಳ ಕೇರಳ ರಾಜ್ಯ ವಿತರಣೆ ಹಕ್ಕನ್ನು ಈ ಹಿಂದೆ ಪೃಥ್ವಿರಾಜ್ ಸುಕುಮಾರನ್ ಅವರೇ ಖರೀದಿ ಮಾಡಿದ್ದರು. ಇದೀಗ ‘ಕಾಂತಾರ ಚಾಪ್ಟರ್ 1’ ಸಿನಿಮಾದ ವಿತರಣೆ ಹಕ್ಕನ್ನು ಸಹ ಪೃಥ್ವಿರಾಜ್ ಅವರೇ ಖರೀದಿ ಮಾಡಿದ್ದಾರೆ.
‘ಕಾಂತಾರ ಚಾಪ್ಟರ್ 1’ ಸಿನಿಮಾ ಪ್ಯಾನ್ ಇಂಡಿಯಾ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಹ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಇನ್ನೂ ಹಲವೆಡೆ ‘ಕಾಂತಾರ ಚಾಪ್ಟರ್ 1’ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಲಿದ್ದು, ವಿದೇಶದ ವಿತರಣೆ ಹಕ್ಕನ್ನು ಭಾರಿ ದೊಡ್ಡ ಮೊತ್ತಕ್ಕೆ ಹೊಂಬಾಳೆ ಫಿಲಮ್ಸ್ ಮಾರಾಟ ಮಾಡಿದೆ ಎಂದು ಹೇಳಲಾಗಿದೆ.
ಕಾಂತಾರ ಚಾಪ್ಟರ್ 1 ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಸಿನಿಮಾದ ಕೊನೆಯ ಪ್ರಿಂಟ್ ಬಹುತೇಕ ರೆಡಿಯಾಗಿದ್ದು ಸಿನಿಮಾದ ಪ್ರಚಾರ ಕಾರ್ಯ ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ.
ಇನ್ನು ಸಿನಿಮಾದ ಉತ್ತರ ಭಾರತ ಬಿಡುಗಡೆ ಹಕ್ಕನ್ನು ಈ ಹಿಂದೆ ಹೊಂಬಾಳೆಯ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಿದ್ದ ಅನಿಲ್ ಟಂಡಾನಿ ಅವರೇ ಬಿಡುಗಡೆ ಮಾಡಲಿದ್ದಾರಂತೆ.
ಕೆಲ ರಾಜ್ಯಗಳ ಬಿಡುಗಡೆ ಹಕ್ಕುಗಳ ಮಾರಾಟಕ್ಕೆ ಹೊಂಬಾಳೆ ಫಿಲಮ್ಸ್ ಮಾತುಕತೆ ನಡೆಸುತ್ತಿದೆ. ಇನ್ನು ಕರ್ನಾಟಕದಲ್ಲಿ ಸ್ವತಃ ಹೊಂಬಾಳೆಯವರೇ ವಿತರಣೆ ಮಾಡಲಿದ್ದಾರೆ.
ಅಂದಹಾಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ, ಈ ಹಿಂದೆ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಆಗಿದ್ದು, ‘ಕಾಂತಾರ’ ಸಿನಿಮಾಕ್ಕಿಂತ ಹೆಚ್ಚಿನ ಬಂಡವಾಳ ಈ ಚಿತ್ರಕ್ಕೆ ಹಾಕಲಾಗಿದೆ. ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿ ಪಾತ್ರದಲ್ಲಿ ನಟಿಸಿದ್ದು, ಈ ಸಿನಿಮಾಕ್ಕಾಗಿ ಕೆಲವು ಹಾಲಿವುಡ್ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಅಂತೆಯೇ ಈ ಬಹು ನಿರೀಕ್ಷಿತ ಸಿನಿಮಾ ಅಕ್ಟೋಬರ್ 02 ರಂದು ಬಿಡುಗಡೆ ಆಗಲಿದೆ.