ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಆಗಿದ್ದು, ಈ ಬಗ್ಗೆ ಉಪೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
ತಮ್ಮ ಹೆಸರು ಹೇಳಿಕೊಂಡು ಯಾರಾದರೂ ದುಡ್ಡು ಕೇಳಿದ್ರೆ ಕೊಡಬೇಡಿ ಎಂದು ಉಪೇಂದ್ರ ಅವರು ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಉಪೇಂದ್ರ ಅವರು, ‘ಎಲ್ಲರಿಗೂ ನಮಸ್ಕಾರ.. ದಯವಿಟ್ಟು ಎಲ್ಲರಿಗೂ ಎಚ್ಚರಿಕೆ ಸಂದೇಶ ನೀಡುತ್ತಿದ್ದೇವೆ. ಪ್ರಿಯಾಂಕಾ ಅವರಿಗೆ ಒಂದು ನಂಬರ್‌ನಿಂದ ಕರೆ ಬಂದಿದೆ. ಪ್ರಿಯಾಂಕಾ ಆರ್ಡರ್ ಮಾಡಿದ ಪಾರ್ಸಲ್ ಒಂದು ಬರೋದಿತ್ತು. ಪಾರ್ಸಲ್ ಸಂಬಂಧಿಸಿದ ಮೆಸೇಜ್ ಇದು ಎಂದು ಅವಳು ಭಾವಿಸಿದ್ದಳು. ಹ್ಯಾಶ್ ಟ್ಯಾಗ್ ಒತ್ತಿ ಆ ನಂಬರ್ ಡಯಲ್ ಮಾಡಿ, ಈ ನಂಬರ್ ಡಯಲ್ ಮಾಡಿ ಎಂದು ಮೆಸೇಜ್ ಮಾಡಿದಾತ ಹೇಳಿದ್ದಾನೆ. ಅವಳು ಹಾಗೆ ಮಾಡಿದಳು. ಅಲ್ಲಿ ಆಗುತ್ತಿಲ್ಲ ಎಂದು ನನ್ನ ಮೊಬೈಲ್ನಿಂದಲೂ ಪ್ರಯತ್ನಿಸಿದ್ದಾಳೆ. ಹೀಗಾಗಿ, ನನ್ನ ಮೊಬೈಲ್ ಕೂಡ ಹ್ಯಾಕ್ ಆಗಿದೆ ಎನಿಸುತ್ತಿದೆ.
ಪ್ರಿಯಾಂಕಾ ಹಾಗೂ ನನ್ನ (ಉಪೇಂದ್ರ) ಮೊಬೈಲ್‌ನಿಂದ ಯಾರಾದರೂ ದುಡ್ಡು ಕಳುಹಿಸಿ ಎಂದು ಏನಾದರೂ ಸಂದೇಶ ಬಂದರೆ ದಯವಿಟ್ಟು ಕಳುಹಿಸೋದಕ್ಕೆ ಹೋಗಬೇಡಿ. ಈಗಾಗಲೇ ಪ್ರಿಯಾಂಕಾ ವಾಟ್ಸಾಪ್ನಿಂದ ಕೆಲವರಿಗೆ ಮೆಸೇಜ್ ಹೋಗಿದೆ. ‘ನನ್ನ ಮೊಬೈಲ್ ಯುಪಿಐ ವರ್ಕ್ ಆಗುತ್ತಿಲ್ಲ. ನೀವು ಹಣ ಕಳುಹಿಸಿ. 2 ಗಂಟೆಯಲ್ಲಿ ಕಳುಹಿಸುತ್ತೇವೆ’ ಎಂದು ಹ್ಯಾಕರ್ ಪ್ರಿಯಾಂಕಾ ಕಾಂಟ್ಯಾಕ್ಟ್ನಲ್ಲಿರೋ ವ್ಯಕ್ತಿಗಳಿಗೆ ಮೆಸೇಜ್ ಮಾಡುತ್ತಿದ್ದಾನೆ .ಇದರಿಂದ ಅನೇಕರಿಗೆ ಅನುಮಾನ ಬಂದಿದೆ. ಹೀಗಾಗಿ, ‘ಕರೆ ಮಾಡಿ, ನಾವು ಫೋನ್ನಲ್ಲೇ ಮಾತನಾಡೋಣ’ ಎಂದು ಉತ್ತರಿಸಿದ್ದಾರೆ. ಆದರೆ, ‘ಈಗ ಮಾತನಾಡೋಕೆ ಆಗಲ್ಲ’ ಎಂದು ಹ್ಯಾಕರ್ ಹೇಳಿದ್ದಾನೆ. ಹೀಗಾಗಿ, ಯಾರೂ ಹಣ ಕಳುಹಿಸಿಲ್ಲ, ನಾವು ಈಗಲೇ ಪೊಲೀಸರಿಗೆ ದೂರು ಕೊಡಲು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ನಡುವೆ ಪ್ರಿಯಾಂಕಾ ಉಪೇಂದ್ರ ಅವರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ‘ಎಲ್ಲರಿಗೂ ನಮಸ್ಕಾರ.. ನನ್ನ ಮೊಬೈಲ್ ಹ್ಯಾಕ್ ಆಗಿದೆ. ಯಾರೋ ನನ್ನ ಹೆಸರು ಹಾಕಿ ನಿಮಗೆ ಏನಾದರೂ ದುಡ್ಡು ಕಳುಹಿಸಿ ಎಂದರೆ ಯಾರು ಕಳುಹಿಸಬೇಡಿ. ನಾವು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.