ಬೆಂಗಳೂರು: ʻಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿ ನಟಿ ರಿಷಾ ಗೌಡ ಅವರು ಬಸ್ಸಿನಲ್ಲಿ ತಮಗಾದ ಕಹಿ ಅನುಭವವನ್ನ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಏರ್‌ಪೋರ್ಟ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬನಿಗೆ ನಟಿ ರಿಷಾ ಗೌಡ ಅವರು ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.
ಸಂದರ್ಶನವೊಂದರಲ್ಲಿ ತಮಗೆ ಆದ ಕಹಿ ಅನುಭವವನ್ನು ನಟಿ ಹಂಚಿಕೊಂಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಜೀನ್ಸ್ ಮತ್ತು ಟಾಪ್ ಧರಿಸಿ ಬಸ್ ಹತ್ತಿದ್ದ ನಟಿಯನ್ನು ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ನಿಧಾನಕ್ಕೆ ನಟಿಯ ಮೇಲೆ ಕೈ ಹಾಕಿ ಪದೇ ಪದೇ ಅಸಭ್ಯವಾಗಿ ಮುಟ್ಟಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ರಿಷಾ, ಸ್ಥಳದಲ್ಲೇ ಅವನ ಕಪಾಳಕ್ಕೆ ಬಾರಿಸಿದ್ದಾರೆ. ಈ ವೇಳೆ ಸಹಪ್ರಯಾಣಿಕರು ಮೌನಕ್ಕೆ ಶರಣಾಗಿದ್ದು, ನಿರ್ವಾಹಕರು ಮಾತ್ರ ನೆರವಿಗೆ ಬಂದಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
"ಕಿರುಕುಳಕ್ಕೂ ಹೆಣ್ಣುಮಕ್ಕಳ ಉಡುಗೆಗೂ ಸಂಬಂಧವಿಲ್ಲ; ಸೀರೆ ಉಟ್ಟರೂ ಇಂತಹ ವಿಕೃತ ಮನಸ್ಥಿತಿಯವರು ಬಿಡುವುದಿಲ್ಲ" ಎಂದು ರಿಷಾ ಆಕ್ರೋಶ ಹೊರಹಾಕಿದ್ದಾರೆ. ದುಬೈನಂತಹ ದೇಶಗಳಲ್ಲಿ ಮಧ್ಯರಾತ್ರಿಯೂ ಮಹಿಳೆಯರು ಸುರಕ್ಷಿತವಾಗಿರುತ್ತಾರೆ, ಆದರೆ ನಮ್ಮಲ್ಲಿ ರಾತ್ರಿ 9 ಗಂಟೆಯ ನಂತರ ಓಡಾಡುವುದು ಕಷ್ಟವಾಗಿದೆ ಎಂದು ಅವರು ವಿಷಾದಿಸಿದ್ದಾರೆ.
ಮಹಿಳೆಯರ ಬಗ್ಗೆ ಸಮಾಜದ ಮನಸ್ಥಿತಿ ಬದಲಾಗಬೇಕು ಮತ್ತು ಇಂತಹ ಸಂದರ್ಭಗಳಲ್ಲಿ ಪುರುಷರು ಬೆಂಬಲಕ್ಕೆ ನಿಲ್ಲಬೇಕು ಎಂದು ಅವರು ಹೇಳಿದ್ದಾರೆ.