ಹೈದ್ರಾಬಾದಿನಲ್ಲಿ ಶನಿವಾರ ರಾತ್ರಿ ನಡೆದ 'ಟಾಕ್ಸಿಕ್'ನ (Toxic) ಫ್ರಿ ರಿಲೀಸ್ ಇವೆಂಟ್ ನಲ್ಲಿ ನಟ ಯಶ್ , ಕೇವಲ ಚಿತ್ರದ ಬಗ್ಗೆ ಮಾತ್ರವಲ್ಲದೆ, ಇತರ ಅನೇಕ ಪ್ರಮುಖ ವಿಷಯಗಳ ಕುರಿತು ಮಾತನಾಡಿದರು.ಕನ್ನಡದಲ್ಲಿ ಮಾತು ಶುರು ಮಾಡಿದ ಯಶ್, ತೆಲುಗು ಪ್ರೇಕ್ಷಕರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು. ಭಾರತೀಯ ಚಿತ್ರರಂಗಕ್ಕೆ ಹೆಚ್ಚುತ್ತಿರುವ ಜನಪ್ರಿಯತೆಯ ಬಗ್ಗೆ ಪ್ರಸ್ತಾಪಿಸಿದರು ಹಾಗೂ ಕನಸುಗಳು, ವೈಫಲ್ಯ ಮತ್ತು ಪ್ರಾದೇಶಿಕ ಭೇದಭಾವಗಳಿಂದ ದೂರವಿರುವ ಏಕತೆಯ ಮಂತ್ರ ಪಠಿಸಿದರು.
ಸಿನಿಮಾದ ಮೂಲಕ ಜನರು ಪರಸ್ಪರ ಬೆರೆಯುವುದಕ್ಕೆ ಭಾಷೆ ಅಥವಾ ಭೌಗೋಳಿಕ ಗಡಿಗಳು ಅಡ್ಡಿಯಾಗಬಾರದು ಎಂದು ಅವರು ಹೇಳಿದರು. ಯುವಕರು ದೊಡ್ಡ ಕನಸು ಕಾಣುವಂತೆ ಹಾಗೂ ತಮ್ಮ ಆಯ್ಕೆಗಳು ಮತ್ತು ವೈಫಲ್ಯಗಳಿಗೆ ತಾವೇ ಜವಾಬ್ದಾರರಾಗಿರುವಂತೆ ಯಶ್ ಪ್ರೋತ್ಸಾಹಿಸಿದರು.
ತಮ್ಮ ವೃತ್ತಿಜೀವನದಾದ್ಯಂತ, ವಿಶೇಷವಾಗಿ 'ಕೆಜಿಎಫ್' (KGF) ನಂತರ ತೆಲುಗು ಪ್ರೇಕ್ಷಕರು ತೋರಿದ ಪ್ರೀತಿಗಾಗಿ ಧನ್ಯವಾದ ಅರ್ಪಿಸುವ ಮೂಲಕ ಯಶ್ ತಮ್ಮ ಭಾಷಣವನ್ನು ಪ್ರಾರಂಭಿಸಿದರು. "ನಾನು ಎಲ್ಲಾ ತೆಲುಗು ವೀಕ್ಷಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ತುಂಬಾ ಧನ್ಯವಾದಗಳು. ನೀವು ಅಪಾರ ಪ್ರೀತಿಯನ್ನು ತೋರಿದ್ದೀರಿ ಎಂದು ಅವರು ನುಡಿದರು.
ಭಾರತೀಯ ಚಿತ್ರರಂಗದ ಬೆಳವಣಿಗೆಯು ಜನರಿಗೆ ದೊಡ್ಡ ಕನಸು ಕಾಣುವ ಆತ್ಮವಿಶ್ವಾಸವನ್ನು ನೀಡಿದೆ. ಭಾಷೆ ಅಥವಾ ನಟ, ಅಥವಾ ಚಲನಚಿತ್ರ ನಿರ್ದೇಶಕರು ಯಾವ ಪ್ರದೇಶದವರು ಎಂಬುದಕ್ಕಿಂತ, ಪ್ರಾಮಾಣಿಕ ಪ್ರಯತ್ನಕ್ಕೆ ಪ್ರೇಕ್ಷಕರು ಹೆಚ್ಚಿನ ಆದ್ಯತೆ ನೀಡುತ್ತಾರೆ. ಯಾರಾದರೂ ಪ್ರಾಮಾಣಿಕತೆ ಮತ್ತು ಉತ್ಸಾಹದಿಂದ ಕೆಲಸ ಮಾಡಿದರೆ, ವೀಕ್ಷಕರು ಯಾವಾಗಲೂ ಅವರನ್ನು ಬೆಂಬಲಿಸುತ್ತಾರೆ. ಅವರು ಯಾವುದೇ ಪಕ್ಷಪಾತವನ್ನು ಹೊಂದಿರುವುದಿಲ್ಲ. ಸಿನಿಮಾವನ್ನು ಭಾಷೆ ಅಥವಾ ಗಡಿಗಳಿಗೆ ಸೀಮಿತಗೊಳಿಸಬಾರದು ಎಂದು ಯಶ್ ಹೇಳಿದರು.
ಸಿನಿಮಾಕ್ಕೆ ಯಾವುದೇ ಅಡೆತಡೆಗಳಿಲ್ಲ. ಭಾಷೆ ಮತ್ತು ಗಡಿಗಳನ್ನು ಮೀರಿ ಮಾನವೀಯತೆಯಿದೆ. ಅಲ್ಲಿ ಮಾನವೀಯತೆ, ಪ್ರೀತಿ ಮತ್ತು ಪ್ರಾಮಾಣಿಕತೆಯಿದೆ ಎಂದು ಪ್ರತಿಪಾದಿಸಿದರು. ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಸೀಮಿತಗೊಳಿಸಬಾರದು, ತಮಗೆ ಬೇಕಾದ ಯಾವುದೇ ವೃತ್ತಿ ಅಥವಾ ಹಾದಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು. "ಸಿನಿಮಾವನ್ನು ಅತಿಯಾಗಿ ಗಂಭೀರವಾಗಿ ಪರಿಗಣಿಸಬೇಡಿ. ಜೀವನದಲ್ಲಿ ನೀವು ಏನು ಮಾಡಲು ಬಯಸುತ್ತೀರೋ, ಅದರ ಬಗ್ಗೆ ಕನಸು ಕಾಣಿ ಎಂದು ಅವರು ಹೇಳಿದರು.
ವೈಫಲ್ಯದ ಕುರಿತು ಯಶ್ ಹೇಳಿದ್ದೇನು? ವಿಷಯಗಳು ಅಂದುಕೊಂಡಂತೆ ನಡೆಯದಿದ್ದಾಗ ಇತರರನ್ನು ದೂಷಿಸುವ ಬದಲು ಜನರು ಜವಾಬ್ದಾರಿಯನ್ನು ಸ್ವೀಕರಿಸಬೇಕು ಎಂದು ಅವರು ಹೇಳಿದರು. "ನಾವು ಯಾವುದರಲ್ಲಾದರೂ ವಿಫಲರಾದರೆ ಅಥವಾ ಏನನ್ನೂ ಸಾಧಿಸಲು ಸಾಧ್ಯವಾಗದಿದ್ದರೆ, ಅದಕ್ಕೆ ಜಗತ್ತನ್ನು ದೂಷಿಸಬಾರದು ಎಂದು ನಾನು ಭಾವಿಸುತ್ತೇನೆ. ಅದಕ್ಕೆ ನಾವೇ ಜವಾಬ್ದಾರರಾಗಿರುತ್ತೇವೆ ಎಂದು ಅವರು ನುಡಿದರು.
ಉತ್ತರ-ದಕ್ಷಿಣ ವಿಭಜನೆಯ ವಿರುದ್ಧ ಯಶ್ ಮಾತು: ಭಾರತೀಯ ಚಿತ್ರರಂಗದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಉತ್ತರ-ದಕ್ಷಿಣ ಚರ್ಚೆಯ ಕುರಿತಾಗಿಯೂ ಯಶ್ ಮಾತನಾಡಿದರು. ಪ್ರಾದೇಶಿಕ ಭೇದಭಾವಗಳನ್ನು ಮೀರಿ ನಿಂತು, ಭಾರತೀಯ ಚಿತ್ರರಂಗದ ವಿಶಾಲವಾದ ಅಸ್ಮಿತೆಯತ್ತ ಗಮನಹರಿಸುವಂತೆ ಅವರು ಯುವಜನತೆಗೆ ಕರೆ ನೀಡಿದರು. "ಉತ್ತರ, ದಕ್ಷಿಣ - ನಮಗೆ ಇವೆಲ್ಲವೂ ಬೇಡ ಎಂದ ಅವರು, ಭಾಷೆ ಅಥವಾ ರಾಜಕೀಯದ ಆಧಾರದ ಮೇಲೆ ವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುವವರ ಮಾತುಗಳಿಗೆ ಕಿವಿಗೊಡದಂತೆ ಯುವಜನತೆಗೆ ಹೇಳಿದರು.
ಒಬ್ಬ ವ್ಯಕ್ತಿ ಎಲ್ಲಿಂದ ಬಂದವರು ಎಂಬುದು ಮುಖ್ಯವಲ್ಲ, ಪ್ರತಿಭೆ ಮತ್ತು ಉತ್ತಮ ಕೆಲಸಕ್ಕೆ ಯಾವಾಗಲೂ ಮನ್ನಣೆ ಸಿಗುತ್ತದೆ ಎಂದೂ ಅವರು ಪ್ರತಿಪಾದಿಸಿದರು. ನೀವು ಯಾವುದೇ ರಾಜ್ಯದಲ್ಲಿ ಕೆಲಸ ಮಾಡಿದರೂ, ಎಲ್ಲಿಗೆ ಹೋದರೂ ನಿಮಗೆ ಒಂದೇ ರೀತಿಯ ಪ್ರೀತಿ ಸಿಗುತ್ತದೆ. ನೀವು ಎಲ್ಲಿಂದಲೇ ಬಂದಿರಲಿ, ಉತ್ತಮ ಕೆಲಸ ಮಾಡಿದರೆ ನಿಮಗೆ ಅದೇ ರೀತಿಯ ಪ್ರೀತಿ ದೊರೆಯುತ್ತದೆ ಎಂದರು. ಇನ್ನೂ ಯಶ್ ಅವರ ಮಾತಿಗೆ ಫಿದಾ ಆದ ಶಾಸಕ ಮಲ್ಲಾರೆಡ್ಡಿ, ಇಂಡಿಯಾಗೆ ನಂಬರ್ ಒನ್ ಹೀರೋ ಯಶ್ ಎಂದು ಕೊಂಡಾಡಿದ್ದರು.
ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' (Toxic) ಚಿತ್ರದಲ್ಲಿ ಯಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ (CBFC) 'ಎ' (A) ಪ್ರಮಾಣಪತ್ರವನ್ನು ನೀಡಿದ್ದು, ಆಗಸ್ಟ್ 26 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಹಲವು ಕಡೆಗಳಲ್ಲಿ ಚಿತ್ರದ ಮುಂಗಡ ಬುಕಿಂಗ್ ಪ್ರಕ್ರಿಯೆ ಆರಂಭವಾಗಿದೆ.