ಬೆಂಗಳೂರು: ಬುಧವಾರ ವಿಶ್ವದಾದ್ಯಂತ ಬಿಡುಗಡೆಯಾದ ನಟ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ವಿರುದ್ಧ ಯಾವುದೇ ಸುಳ್ಳು ಅಥವಾ ಮಾನಹಾನಿಕರ ಮಾಹಿತಿ ಪ್ರಕಟ ಅಥವಾ ಹರಡುವಿಕೆ ತಡೆಗೆ ಬೆಂಗಳೂರಿನ ನ್ಯಾಯಾಲಯವೊಂದು ತಾತ್ಕಾಲಿಕ ತಡೆಯಾಜ್ಞೆಯನ್ನು (ex-parte temporary injunction) ಹೊರಡಿಸಿದೆ.
ನಿರ್ಮಾಣ ಸಂಸ್ಥೆಯಾದ 'ಕೆವಿಎನ್ ಪ್ರೊಡಕ್ಷನ್ಸ್ ಎಲ್‌ಎಲ್‌ಪಿ' (KVN Productions LLP)ಯು 'ಎಕ್ಸ್ ಕಾರ್ಪ್' (X Corp) ಸೇರಿದಂತೆ ವಿವಿಧ ಪ್ರತಿವಾದಿಗಳ ವಿರುದ್ಧ ಹೂಡಿದ ದಾವೆಯ ಮೇರೆಗೆ, ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆಗಸ್ಟ್ 22 ರಂದು ಈ ಮಧ್ಯಂತರ ಆದೇಶವನ್ನು ಹೊರಡಿಸಿದೆ. ಈ ದಾವೆಯಲ್ಲಿ ಅಪರಿಚಿತ ವ್ಯಕ್ತಿಗಳನ್ನು ಪ್ರತಿನಿಧಿಸುವ 'ಜಾನ್ ಡೋ' (John Doe) ಎಂಬ ಪ್ರತಿವಾದಿಯೂ ಸೇರಿದ್ದಾರೆ.
"ವಾದಿ ಸಲ್ಲಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದಾಗ, ವಾದಿಯ ಪರವಾಗಿ ಮೇಲ್ನೋಟಕ್ಕೆ (prima facie) ಪ್ರಕರಣವೊಂದು ಇರುವುದು ಇರುವುದು ಕಂಡುಬಂದಿದೆ. ಒಂದು ವೇಳೆ ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡದಿದ್ದರೆ, ಈ ದಾವೆಯನ್ನು ಹೂಡಿದ ಮೂಲ ಉದ್ದೇಶವೇ ವಿಫಲವಾಗುತ್ತದೆ ಮತ್ತು ಇದು ಅನೇಕ ಕಾನೂನು ಪ್ರಕ್ರಿಯೆಗಳಿಗೆ ಎಡೆಮಾಡಿಕೊಡುವಂತಾಗುತ್ತದೆ. ಆದ್ದರಿಂದ, ಮಧ್ಯಂತರ ಅರ್ಜಿಯನ್ನು (IA No.1) ಸಂಪೂರ್ಣವಾಗಿ ಪುರಸ್ಕರಿಸದಿದ್ದರೂ, ಸೀಮಿತ ಅವಧಿಗೆ ಹಾಗೂ ಕೆಲವು ಷರತ್ತುಗಳೊಂದಿಗೆ ತಾತ್ಕಾಲಿಕ ತಡೆಯಾಜ್ಞೆಯನ್ನು ಮಧ್ಯಂತರ ಕ್ರಮವಾಗಿ ನೀಡಬಹುದು ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಹೀಗಾಗಿ 'ಟಾಕ್ಸಿಕ್' (Toxic) ಸಿನಿಮಾಕ್ಕೆ ಸಂಬಂಧಿಸಿದಂತೆ ಯಾವುದೇ ಸುಳ್ಳು, ದುರುದ್ದೇಶಪೂರಿತ, ಮಾನಹಾನಿಕರ ಅಥವಾ ಅವಹೇಳನಕಾರಿ ವಿಷಯಗಳನ್ನು, ಸಿನಿಮಾ ಬಿಡುಗಡೆಗೂ ಮುನ್ನ ಅಥವಾ ನಂತರವಿರಲಿ—ಯಾವುದೇ ಮಾಧ್ಯಮದಲ್ಲಿ ಸಂವಹನ ಮಾಡುವುದು, ಪ್ರಕಟಿಸುವುದು, ಪ್ರಸಾರ ಮಾಡುವುದು, ಹಂಚಿಕೊಳ್ಳುವುದು, ಪೋಸ್ಟ್ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರತಿವಾದಿಗಳ ವಿರುದ್ಧ ಏಕಪಕ್ಷೀಯ ತಾತ್ಕಾಲಿಕ ತಡೆಯಾಜ್ಞೆಯನ್ನು ಹೊರಡಿಸಲಾಗಿದೆ. ಎಂದು ಅದು ತಿಳಿಸಿದೆ. ಈ ತಾತ್ಕಾಲಿಕ ತಡೆಯಾಜ್ಞೆಯು ಮುಂದಿನ ವಿಚಾರಣಾ ದಿನಾಂಕವಾದ ಸೆಪ್ಟೆಂಬರ್ 28ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಈ ಆದೇಶವನ್ನು ಅದನ್ನು ಹೊರಡಿಸಿದ ಉದ್ದೇಶಕ್ಕಾಗಿ ಮಾತ್ರ ಬಳಸಬಹುದೇ ಹೊರತು ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ, ದೂರುದಾರರು ವಿಧಿಸಲಾದ ಷರತ್ತುಗಳನ್ನು ಪಾಲಿಸಲು ವಿಫಲರಾದರೆ, ನೀಡಲಾದ ತಾತ್ಕಾಲಿಕ ತಡೆಯಾಜ್ಞೆಯು ಯಾವುದೇ ಹೆಚ್ಚಿನ ಸೂಚನೆಯಿಲ್ಲದೆ ರದ್ದುಗೊಳ್ಳುತ್ತದೆ ಎಂದೂ ನ್ಯಾಯಾಲಯ ತಿಳಿಸಿದೆ.
ಗುರುತಿಸಲಾಗದ ವ್ಯಕ್ತಿಗಳು ಸೇರಿದಂತೆ ಪ್ರತಿವಾದಿಗಳ ವಿರುದ್ಧ ಏಕಪಕ್ಷೀಯ ತಾತ್ಕಾಲಿಕ ತಡೆಯಾಜ್ಞೆಯನ್ನು ಕೋರಿ, ನಿರ್ಮಾಪಕರು ಸಿವಿಲ್ ಪ್ರೊಸೀಜರ್ ಕೋಡ್‌ನ (ಸಿಪಿಸಿ) ಆರ್ಡರ್ 39ರ ನಿಯಮ 1 ಮತ್ತು 2ರ ಅಡಿಯಲ್ಲಿ ದೂರು ಸಲ್ಲಿಸಿದ್ದರು. 'ಮೀರಾ ಅಜಿತ್ ವಿರುದ್ಧ ಜಾನ್ ಡೋ ಅಲಿಯಾಸ್ ಅಶೋಕ್ ಕುಮಾರ್' ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ನ್ಯಾಯಾಲಯವು ಇಲ್ಲಿ ಆಧಾರವಾಗಿಟ್ಟುಕೊಂಡಿದೆ. ದೂರುದಾರರಿಗೆ ನೈಜ ಬೆದರಿಕೆ ಇದ್ದು, ಮೇಲ್ನೋಟಕ್ಕೆ ಪ್ರಕರಣವು ಸಮರ್ಥನೀಯವೆಂದು ಕಂಡುಬಂದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧವೂ ತಡೆಯಾಜ್ಞೆಯನ್ನು ನೀಡಬಹುದು ಎಂದು ಆ ತೀರ್ಪಿನಲ್ಲಿ ಪ್ರತಿಪಾದಿಸಲಾಗಿತ್ತು.