Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

ವಿಶ್ವಸಂಸ್ಥೆಯ ಸಮಿತಿಯು ಯಾವುದೇ ಆಧಾರವಿಲ್ಲದ ಆರೋಪಗಳನ್ನು ನಂಬಿ ತನ್ನ ಅಧಿಕೃತ ಕಾರ್ಯವ್ಯಾಪ್ತಿಯನ್ನು ಮೀರಿದೆ. ಭಾರತದಲ್ಲಿ ಎಲ್ಲಾ ದುರ್ಬಲ ಹಾಗೂ ಹಿಂದುಳಿದ ಸಮುದಾಯಗಳನ್ನು ರಕ್ಷಿಸಲು ಬಲಿಷ್ಠವಾದ ಸಾಂವಿಧಾನಿಕ ಚೌಕಟ್ಟು ಮತ್ತು ಕಾನೂನುಗಳಿವೆ.
Ministry of External Affairs spokesperson Randhir Jaiswal
ರಣಧೀರ್ ಜೈಸ್ವಾಲ್
Updated on

ನವದೆಹಲಿ: ಭಾರತಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ವರ್ಣಭೇದ ನಿರ್ಮೂಲನಾ ಸಮಿತಿ (CERD) ಮಾಡಿರುವ ಟೀಕೆಗಳನ್ನು ಕೇಂದ್ರ ಸರ್ಕಾರ ಬುಧವಾರ ತಿರಸ್ಕರಿಸಿದೆ.

ಸಮಿತಿಯ ಕೆಲವು ಹೇಳಿಕೆಗಳು “ರಾಜಕೀಯ ಪ್ರೇರಿತ” ಮತ್ತು “ಅತ್ಯಂತ ದುರುದ್ದೇಶಪೂರಿತವಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತೀವ್ರವಾಗಿ ಪ್ರತಿಕ್ರಿಯಿಸಿದೆ.

ಆಗಸ್ಟ್ 11 ಮತ್ತು 12 ರಂದು ಜಿನೆವಾದಲ್ಲಿ ನಡೆದ ಜನಾಂಗೀಯ ತಾರತಮ್ಯ ನಿರ್ಮೂಲನೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಸಮಾವೇಶದ 11ನೇ ಆವರ್ತಕ ಪರಿಶೀಲನೆಯಲ್ಲಿ ಭಾರತ ಭಾಗವಹಿಸಿತ್ತು.

ಈ ವೇಳೆ ಭಾರತದಲ್ಲಿ ರೋಹಿಂಗ್ಯಾ ನಿರಾಶ್ರಿತರು, ಬೆಂಗಾಲಿ ಮುಸ್ಲಿಮರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ಸಮಿತಿ ಕಳವಳ ವ್ಯಕ್ತಪಡಿಸಿತ್ತು.

ಈ ಆರೋಪಗಳಿಗೆ ತಿರುಗೇಟು ನೀಡಿರುವ ವಿದೇಶಾಂಗ ಸಚಿವಾಲಯ, "ವಿಶ್ವಸಂಸ್ಥೆಯ ಸಮಿತಿಯು ಯಾವುದೇ ಆಧಾರವಿಲ್ಲದ ಆರೋಪಗಳನ್ನು ನಂಬಿ ತನ್ನ ಅಧಿಕೃತ ಕಾರ್ಯವ್ಯಾಪ್ತಿಯನ್ನು ಮೀರಿದೆ. ಭಾರತದಲ್ಲಿ ಎಲ್ಲಾ ದುರ್ಬಲ ಹಾಗೂ ಹಿಂದುಳಿದ ಸಮುದಾಯಗಳನ್ನು ರಕ್ಷಿಸಲು ಬಲಿಷ್ಠವಾದ ಸಾಂವಿಧಾನಿಕ ಚೌಕಟ್ಟು ಮತ್ತು ಕಾನೂನುಗಳಿವೆ ಎಂದು ಸ್ಪಷ್ಟಪಡಿಸಿದೆ.

ಇದು ಸಾಮಾನ್ಯ ಒಪ್ಪಂದದಡಿ ನಡೆಯುವ ಪರಿಶೀಲನಾ ಪ್ರಕ್ರಿಯೆಯಾಗಿದ್ದು, ಭಾರತವು ರಚನಾತ್ಮಕ ಸಹಭಾಗಿತ್ವದ ಮನೋಭಾವದಿಂದ ಇದರಲ್ಲಿ ಭಾಗವಹಿಸಿತ್ತು. ವರ್ಣಭೇದದ ವಿರುದ್ಧ ಹೋರಾಡುವ ಭಾರತದ ಬದ್ಧತೆ ದೃಢವಾಗಿದ್ದು, ಯಾವುದೇ ರೀತಿಯಲ್ಲೂ ಬದಲಾಗಿಲ್ಲ.

ಪರಿಶೀಲನಾ ಪ್ರಕ್ರಿಯೆಯ ಸಂದರ್ಭದಲ್ಲಿ ಭಾರತವು ತನ್ನ ಸಾಂವಿಧಾನಿಕ ರಕ್ಷಣೆಗಳು, ಸಮಗ್ರ ಕಾನೂನು ವ್ಯವಸ್ಥೆ, ಬಹುತ್ವದ ಮೌಲ್ಯಗಳು ಹಾಗೂ ಹಿಂದುಳಿದ ಮತ್ತು ದುರ್ಬಲ ಸಮುದಾಯಗಳ ರಕ್ಷಣೆಗೆ ಕೈಗೊಂಡಿರುವ ನಿರಂತರ ಕ್ರಮಗಳನ್ನು ಸಮಿತಿಯ ಮುಂದೆ ವಿವರಿಸಿದೆ.

ಸಮಿತಿಯ ಅಭಿಪ್ರಾಯಗಳಿಗೆ ನಿಗದಿತ ಕಾರ್ಯವಿಧಾನದ ಮೂಲಕ ನಾವು ಪ್ರತಿಕ್ರಿಯಿಸುತ್ತೇವೆ. ಆದರೆ, ಭಾರತದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ನೇತೃತ್ವದ ಅಂತರ್‌-ಸಚಿವಾಲಯ ನಿಯೋಗವು ಪರಿಶೀಲನಾ ಸಭೆಯಲ್ಲಿಯೇ ಆಧಾರರಹಿತ ಆರೋಪಗಳು ಅಥವಾ ಒಪ್ಪಂದದ ವ್ಯಾಪ್ತಿಯನ್ನು ಮೀರುವ ಪ್ರವೃತ್ತಿಯನ್ನು ತಿರಸ್ಕರಿಸಿತ್ತು ಎಂದು ತಿಳಿಸಿದೆ.

Ministry of External Affairs spokesperson Randhir Jaiswal
ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ: ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಅಲ್ಲದೆ, ವರದಿಯಲ್ಲಿರುವ ಯಾವುದೇ ರಾಜಕೀಯ ಪ್ರೇರಿತ ಮತ್ತು ಅತ್ಯಂತ ದುರುದ್ದೇಶಪೂರಿತ ಉಲ್ಲೇಖಗಳನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಎಂದು ಸಚಿವಾಲಯ ಕಿಡಿಕಾರಿದೆ.

ಭಾರತದ ಈ ಪ್ರತಿಕ್ರಿಯೆಗೂ ಮುನ್ನ CERD (ಜನಾಂಗೀಯ ತಾರತಮ್ಯ ನಿರ್ಮೂಲನೆಗೆ ಸಂಬಂಧಿಸಿದ ಸಮಿತಿ), ಜನಾಂಗೀಯ ಮತ್ತು ಜನಾಂಗೀಯ-ಧಾರ್ಮಿಕ ಸಮುದಾಯಗಳು, ಸ್ಥಳೀಯ ಮತ್ತು ಬುಡಕಟ್ಟು ಜನರು, ಪರಿಶಿಷ್ಟ ಪಂಗಡಗಳು, ಪರಿಶಿಷ್ಟ ಜಾತಿಗಳು—ವಿಶೇಷವಾಗಿ ದಲಿತರು—ಹಾಗೂ ನಾಗರಿಕರಲ್ಲದವರ ವಿರುದ್ಧ ಕಾನೂನು ಜಾರಿ ಸಿಬ್ಬಂದಿಯಿಂದ “ದೊಡ್ಡ ಉಲ್ಲಂಘನೆಗಳು ನಡೆದಿವೆ ಎಂಬ ವರದಿಗಳ ಕುರಿತು ಕಳವಳ ವ್ಯಕ್ತಪಡಿಸಿತ್ತು.

CERD ಎಂಬುದು ತನ್ನ ಸದಸ್ಯ ರಾಷ್ಟ್ರಗಳಲ್ಲಿ ವರ್ಣಭೇದದ ಎಲ್ಲ ರೂಪಗಳ ನಿರ್ಮೂಲನೆ ಕುರಿತ ಅಂತಾರಾಷ್ಟ್ರೀಯ ಒಪ್ಪಂದದ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವ ಸ್ವತಂತ್ರ ತಜ್ಞರ ಸಮಿತಿಯಾಗಿದೆ.

ಆಗಸ್ಟ್‌ 11–12ರಂದು ನಡೆದ ಇತ್ತೀಚಿನ ಪರಿಶೀಲನೆಯಲ್ಲಿ, ಭಾರತವು 2023ರಲ್ಲಿ CERDಗೆ ಸಲ್ಲಿಸಿದ್ದ 12ನೇ ಮತ್ತು 21ನೇ ಸಂಯೋಜಿತ ಆವರ್ತಕ ವರದಿಗಳನ್ನು ಪರಿಶೀಲಿಸಲಾಯಿತು.

ICERD ಅನುಷ್ಠಾನಕ್ಕೆ ಸಂಬಂಧಿಸಿದ ಆಡಳಿತಾತ್ಮಕ ವ್ಯವಸ್ಥೆ, ಅಂಚಿನಲ್ಲಿರುವ ಸಮುದಾಯಗಳ ಪ್ರಗತಿ ಹಾಗೂ ಅಸಹಿಷ್ಣುತೆಯನ್ನು ಎದುರಿಸಲು ಕೈಗೊಂಡ ನೀತಿ ಕ್ರಮಗಳು ಸೇರಿದಂತೆ ಹಲವು ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಜಿನೀವಾದಲ್ಲಿರುವ ಭಾರತದ ಶಾಶ್ವತ ಪ್ರತಿನಿಧಿ ಕಚೇರಿ ತಿಳಿಸಿದೆ.

ಭಾರತೀಯ ನಿಯೋಗವು ದೇಶದ ಬಹುತ್ವ, ವೈವಿಧ್ಯತೆ, ಸಂವಿಧಾನಾತ್ಮಕ ಮತ್ತು ಕಾನೂನು ರಕ್ಷಣೆಗಳು, ಮೀಸಲಾತಿ ಸೇರಿದಂತೆ ಸಕಾರಾತ್ಮಕ ಕ್ರಮಗಳು, ಪ್ರಜಾಸತ್ತಾತ್ಮಕ ಹೊಣೆಗಾರಿಕೆ, ನ್ಯಾಯಾಂಗ ಪರಿಹಾರಗಳು ಹಾಗೂ ಉದ್ದೇಶಿತ ಸಾರ್ವಜನಿಕ ನೀತಿಗಳನ್ನು ಸಮಿತಿಯ ಮುಂದೆ ವಿವರಿಸಿದೆ.

ಎಲ್ಲ ಭಾರತೀಯರಿಗೆ ಸಮಾನತೆ, ಘನತೆ ಮತ್ತು ಅವಕಾಶ ಖಚಿತಪಡಿಸುವ ನಿಟ್ಟಿನಲ್ಲಿ ಭಾರತ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಾನವ ಹಕ್ಕುಗಳ ಜಾಗತಿಕ ವ್ಯವಸ್ಥೆಯೊಂದಿಗೆ ಭಾರತ ನಿರಂತರವಾಗಿ ತೊಡಗಿಸಿಕೊಂಡಿರುವುದನ್ನು ಈ ಪರಿಶೀಲನಾ ಪ್ರಕ್ರಿಯೆ ಪ್ರತಿಬಿಂಬಿಸುತ್ತದೆ.

1960ರ ದಶಕದಲ್ಲೇ ವಸಾಹತುಶಾಹಿ, ವರ್ಣಭೇದ ನೀತಿ ಮತ್ತು ಜನಾಂಗೀಯ ತಾರತಮ್ಯದ ವಿರುದ್ಧ ಅಭಿವೃದ್ಧಿಶೀಲ ರಾಷ್ಟ್ರಗಳು ನಡೆಸಿದ ಹೋರಾಟದ ಸಂದರ್ಭದಲ್ಲಿ ICERD ರೂಪಿಸುವ ಮಾತುಕತೆ ಮತ್ತು ಕರಡು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಭಾರತ ಸಕ್ರಿಯವಾಗಿ ಭಾಗವಹಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com