ಶತಕ ಸಿನಿಮಾ 
ಸಿನಿಮಾ ಸುದ್ದಿ

'ಶತಕ' ಸಿನಿಮಾ - ತಂತ್ರಜ್ಞಾನದ ಪಾಕದಲ್ಲಿ ಅರಳಿರುವ ಚರಿತ್ರೆಯ ಸುಗಂಧ!

ನೂರು ವರ್ಷಗಳ ತಾಳಿಕೆ ಮತ್ತು ಬಾಳಿಕೆಗೆ ಕಾರಣವಾಗಿರುವ ಸಂಗತಿ ಏನಾಗಿದ್ದಿರಬಹುದು? ಪ್ರಾರಂಭದಲ್ಲಿ ಎದುರಾದ ಸವಾಲು, ಸಂಶಯ, ತೆಗಳಿಕೆಗಳನ್ನೆಲ್ಲ ಎದುರಿಸಿದ ಬಗೆ ಹೇಗೆ?

ಯಾವುದೇ ಒಂದು ಐಡಿಯಾ ಮತ್ತು ಅದನ್ನು ಪ್ರತಿನಿಧಿಸುವ ಗುಂಪು ನೂರು ವರ್ಷಗಳನ್ನು ಪೂರೈಸಿದೆ ಎಂದಾದರೆ ಅದರ ಬಗ್ಗೆ ಅರಿತುಕೊಳ್ಳಲೇಬೇಕು. ಆ ವಿಚಾರ ಇಲ್ಲವೇ ಗುಂಪನ್ನು ನೀವು ಒಪ್ಪುತ್ತೀರೋ ಬಿಡುತ್ತೀರೋ ಎನ್ನುವುದು ಬೇರೆಯದೇ ಮಾತು.

ನೂರು ವರ್ಷಗಳ ತಾಳಿಕೆ ಮತ್ತು ಬಾಳಿಕೆಗೆ ಕಾರಣವಾಗಿರುವ ಸಂಗತಿ ಏನಾಗಿದ್ದಿರಬಹುದು? ಪ್ರಾರಂಭದಲ್ಲಿ ಎದುರಾದ ಸವಾಲು, ಸಂಶಯ, ತೆಗಳಿಕೆಗಳನ್ನೆಲ್ಲ ಎದುರಿಸಿದ ಬಗೆ ಹೇಗೆ? ನೂರು ವರ್ಷಗಳ ಪ್ರಯಾಣವನ್ನು ಪೂರೈಸಿ ವರ್ತಮಾನದಲ್ಲಿ ಇನ್ನಷ್ಟು ಮತ್ತಷ್ಟು ಪ್ರಜ್ವಲಿಸುತ್ತಿರುವ ಅಚ್ಚರಿಯೊಂದರ ಹಿಂದಿರುವ ಸ್ಫೂರ್ತಿಬಿಂದುಗಳಾವವು?

ನೂರು ವರ್ಷ ತುಂಬಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಈ ಎಲ್ಲ ಕೌತುಕಗಳನ್ನು ಒಂದು ಬಿಗಿ ಹಿಡಿತದ ಕಥಾನಕದಲ್ಲಿ ಕಟ್ಟಿಕೊಡುತ್ತಿರುವ ಚಿತ್ರ ಶತಕ. ಬಹುತೇಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಸುಮಾರು ಎರಡು ತಾಸುಗಳಲ್ಲಿ ಎಲ್ಲಿಯೂ ಬೋರ್ ಆಗದಂತೆ ಕತೆ ಕಟ್ಟಿರುವುದು ಈ ಸಿನಿಮಾದ ಸ್ವಾರಸ್ಯ. ಆರೆಸ್ಸೆಸ್ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲದಿದ್ದರೂ ತಂತ್ರಜ್ಞಾನ ಬಳಸಿಕೊಂಡು ವಿಷಯವೊಂದನ್ನು ಹೇಗೆ ಪ್ರಸ್ತುತಪಡಿಸಿಬಹುದು ಎಂಬ ಆಸಕ್ತಿ ಮಾತ್ರವೇ ಇದ್ದವರೂ ನೋಡಲೇಬೇಕಾದ ಚಿತ್ರ ಇದು.

ಆಶಿಶ್ ಮಾಲ್ ನಿರ್ದೇಶನದ ಈ ಚಿತ್ರವು ಮಾಹಿತಿ ಸಂಪನ್ನ. ಹಾಗೆಂದು ಎಲ್ಲಿಯೂ ಉಪನ್ಯಾಸ ಎಂದು ಅನಿಸುವುದಿಲ್ಲ. ಅದು ಬಾಲಕನಾಗಿದ್ದಾಗಿನಿಂದ ಹೆಡಗೆವಾರ್ ಬೆಳೆಯುವ ರೀತಿ ಇದ್ದಿರಬಹುದು, ಅವತ್ತಿನ ಕ್ರಾಂತಿಕಾರಿ ಅನುಶೀಲನ ಸಮಿತಿ ಹಾಗೂ ಮೆದು ರಾಜಕೀಯದ ಕಾಂಗ್ರೆಸ್ ಎಲ್ಲದರ ಅನುಭವವನ್ನು ಪಡೆದಮೇಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದಂಥ ವೇದಿಕೆ ಕಟ್ಟಬೇಕೆಂದು ಕೇಶವ ಬಲಿರಾಮ ಹೆಡಗೆವಾರ್ ಅಂದುಕೊಂಡಿದ್ದೇಕೆ ಎಂದು ನಿರೂಪಿಸುವ ರೀತಿ ಇದ್ದಿರಬಹುದು ಎಲ್ಲವೂ ದೃಶ್ಯವತ್ತಾಗಿ ಬಂದಿವೆ.

ಎಐ ಮತ್ತು ಗ್ರಾಫಿಕ್ಸ್ ಮೇಳೈಕೆಯ ದೃಶ್ಯಗಳು ನಿಮ್ಮನ್ನು ಅವತ್ತಿನ ಅಖಾಡಾ ಅಂಗಳಕ್ಕೆ ಕರೆದೊಯ್ಯುತ್ತವೆ. ಆ ಮಣ್ಣಿನಲ್ಲಿ ಹಿಂದು ಏಕತೆಯ ಪರಿಕಲ್ಪನೆ ಮೊಳೆತಿದ್ದು ಹೇಗೆ ಎಂಬುದನ್ನು ನಿಮ್ಮ ಎದೆಗಿಳಿಸುತ್ತವೆ.

ದೇಶವಿಭಜನೆ ಬೆನ್ನಲ್ಲೇ ಜನರನ್ನು ಹೊತ್ತ ಆ ದುರಂತ ರೈಲಿನ ಚಿತ್ರಣ, ಗದ್ದೆ-ಬಯಲುಗಳಲ್ಲಿ ನಿರಾಶ್ರಿತ ಟೆಂಟುಗಳು, ಅಲ್ಲಿಗೆ ನೆರವಿನ ದಾಪುಗಾಲಿಡುವ ಸ್ವಯಂಸೇವಕರು, ಕಾಶ್ಮೀರದ ಹಿಮನೆಲದಲ್ಲಿ ಪಾಕಿಸ್ತಾನಿ ಪಡೆಗಳನ್ನು ಎದುರಿಸುವುದಕ್ಕೆ ಸೇನಾ ವಿಮಾನಗಳು ಇಳಿಯುವುದಕ್ಕೆ ಸ್ವಯಂಸೇವಕರು ರನ್ ವೇ ಸಿದ್ಧಪಡಿಸುವ ದೃಶ್ಯ, ಸ್ವಯಂಯೇವಕರೇ ಮುಂಚೂಣಿಯಲ್ಲಿ ನಿಂತು ಕ್ರೂರ ಪೋರ್ಚುಗೀಸರಿಂದ ಗೋವಾವನ್ನು ಮುಕ್ತಗೊಳಿಸುವ ದೃಶ್ಯ ಇವೆಲ್ಲವೂ ಜೀವ ತಳೆದು ಬಂದಿವೆ.

ಕೇಶವ ಬಲಿರಾಮ ಹೆಡಗೆವಾರರ ಬಾಲ್ಯ-ಯೌವನ- ವಯಸ್ಕ ಬದುಕನ್ನು ಪ್ರತಿಪಾದಿಸುವ ಪಾತ್ರಗಳು, ಎರಡನೇ ಸರಸಂಘಚಾಲಕ ಗುರೂಜಿ ಅವರನ್ನು ಯೌವನ ಮತ್ತು ಪ್ರೌಢ ಹಂತಗಳಲ್ಲಿ ತೋರಿಸಿರುವ ಪಾತ್ರಸೃಸ್ಟಿ, ಲಾಲ ಬಹದ್ದೂರ್ ಶಾಸ್ತ್ರಿ, ಗಾಂಧೀಜಿ, ತಿಲಕರು, ಪಟೇಲರು, ಸಾವರ್ಕರ್ ಇವರೆಲ್ಲ ಸಾಕ್ಷಾತ್ ಅವತರಿಸಿದಂತೆ ಎಐ ಸೃಷ್ಟಿಗಳಾಗಿವೆ.

ಎಐನ ಮಿತಿಯನ್ನು ಸಹ ತುಂಬ ಸ್ಪಷ್ಟವಾಗಿ ಅರ್ಥಮಾಡಿಕೊಂಡು ಸಿನಿಮಾವನ್ನು ಪ್ರಸ್ತುತಗೊಳಿಸಲಾಗಿದೆ. ಅಗತ್ಯವಿರುವಲ್ಲಿ ಮಾತ್ರ ಪರಸ್ಪರ ಸಂಭಾಷಣೆಗಳಿವೆ. ಉಳಿದಂತೆ ಬಿಗಿಯಾದ ನಿರೂಪಣೆಯೇ ಪ್ರಮುಖವಾಗಿದೆ. ಹಾಗೆಂದು, ಬಡಿದೆಬ್ಬಿಸುವ ಡೈಲಾಗ್ ಗಳಿಗೆ ಕೊರತೆ ಇಲ್ಲ.

“ನಾಲ್ಕು ಹಿಂದುಗಳು ಜತೆಯಾಗುವುದು ಐದನೆಯವ ಹೆಗಲ ಮೇಲೆ ಮಲಗಿದ್ದಾಗ ಮಾತ್ರ”, “ಬ್ರಿಟಿಷರು ಕೊಹಿನೂರ್ ಕಿತ್ತುಕೊಂಡು ಹೋದರು, ಆದರೆ ಕಾಶ್ಮೀರವನ್ನು ಬಿಡೆವು” ಎಂಬಂತಹ ಸಂಭಾಷಣೆಗಳು ಭಾವ ಉದ್ದೀಪಿಸುತ್ತವೆ.

ಯಾರದ್ದೋ ವೈಭವೀಕರಣವಾಗಲೀ, ಮತ್ಯಾರ ಮೇಲೋ ದೋಷಾರೋಪಣೆಯಾಗಲೀ ಇರದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ರೂಪಿಸಿದ ಪ್ರಾರಂಭಿಕ ದಶಕಗಳು ಹಾಗೂ ಅವತ್ತಿನ ಒಟ್ಟಾರೆ ಐತಿಹಾಸಿಕ ಪರಿಪ್ರೇಕ್ಷವನ್ನು ಚುರುಕು ಓಘದಲ್ಲಿ ಕಟ್ಟಿಕೊಡುವ ಚಿತ್ರ ಶತಕ.

ವಾರಾಂತ್ಯದ ಬಿಡುವು ಶತಕದ ವೀಕ್ಷಣೆಗೆ ಉಪಯೋಗವಾಗಲಿ.

-ಚೈತನ್ಯ ಹೆಗಡೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿವಿಧ ದೇಶಗಳ ಮೇಲೆ ಟ್ರಂಪ್ ವಿಧಿಸಿದ್ದ ಸುಂಕಗಳನ್ನು ರದ್ದುಗೊಳಿಸಿದ ಅಮೆರಿಕ ಸುಪ್ರೀಂ ಕೋರ್ಟ್

"ನನ್ನನ್ನು ರಾಜಕೀಯವಾಗಿ ಮುಗಿಸಿಬಿಟ್ಟರೆ ಅವರ ಹಾದಿ ಸುಗಮ": ಚರ್ಚೆಗೆ ಗ್ರಾಸವಾದ CM ಸಿದ್ದರಾಮಯ್ಯ ಪೋಸ್ಟ್

T20 World Cup: ಆಸೀಸ್‌ಗೆ ಗೆಲುವಿನ ವಿದಾಯ; ಓಮನ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

KAS ಅಧಿಕಾರಿ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ಅಪಪ್ರಚಾರ ಆರೋಪ: ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಂಧನ

'ಡಾಕ್ಟರ್' ಪರೀಕ್ಷೆ ವೇಳೆ ಕಾಪಿ; ರೆಡ್ ಹ್ಯಾಂಡ್ ಆಗಿ ಹಿಡಿದ ಪ್ರಾಧ್ಯಾಪಕರ ಮೇಲೇ ಹಲ್ಲೆ! Video

SCROLL FOR NEXT