ಬೆಂಗಳೂರು: ಧಾರಾವಾಹಿಯೊಂದರ ಚಿತ್ರೀಕರಣಕ್ಕಾಗಿ ಅಗ್ರಿಮೆಂಟ್ ಮಾಡಿಕೊಂಡು ಹಣ ನೀಡದೇ ವಂಚಿಸಿದ್ದಾರೆ ಎಂದು ಆರೋಪಿಸಿ ನಟ ಕಿಚ್ಚ ಸುದೀಪ್ ಹಾಗೂ ಮ್ಯಾನೇಜರ್ ಚಂದ್ರಚೂಡ್ ವಿರುದ್ಧ ಕಾಫಿ ತೋಟದ ಮಾಲೀಕರಿಬ್ಬರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
'ವಾರಸ್ದಾರ' ಎಂಬ ಧಾರಾವಾಹಿಗಾಗಿ ನಮ್ಮ ಮನೆ ಹಾಗೂ ಕಾಫಿತೋಟದಲ್ಲಿ ಚಿತ್ರೀಕರಣ ಮಾಡಲು 2 ವರ್ಷಗಳ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಚಿತ್ರೀಕರಣ ಶುರುಮಾಡಿದ ಕೆಲವೇ ದಿನಗಳಲ್ಲಿ ಚಿತ್ರೀಕರಣ ಸ್ಥಗಿತಗೊಂಡಿತ್ತು. ಅಲ್ಲದೇ ಚಿತ್ರೀಕರಣಕ್ಕಾಗಿ ಕಾಫಿ ತೋಟ, ಮರಗಳನ್ನು ನಾಶ ಮಾಡಿದ್ದಾರೆ ಎಂದು ಕಾಫಿ ತೋಟದ ಮಾಲೀಕ ದೀಪಕ್ ಆರೋಪಿಸಿದ್ದಾರೆ.
ಅಗ್ರಿಮೆಂಟ್ ಪ್ರಕಾರ, 95 ಲಕ್ಷ ಪರಿಹಾರ ನೀಡುವಂತೆ ಕಿಚ್ಚ ಸುದೀಪ್ ಹಾಗೂ ಚಂದ್ರಚೂಡ್ ವಿರುದ್ಧ ಈ ಹಿಂದೆಯೇ ದೂರು ದಾಖಲಿಸಿದ್ದೆ. ಅಂದು 60 ಲಕ್ಷ ಹಣ ನೀಡುವುದಾಗಿ ಸುದೀಪ್ ಅವರು ಭರವಸೆ ನೀಡಿದ್ದರಿಂದ ದೂರು ಹಿಂಪಡೆದಿದ್ದೆ. 10 ಲಕ್ಷ ರೂಪಾಯಿ ಚೆಕ್ ನೀಡಿದ್ದು ಇನ್ನುಳಿದ ಹಣ ನೀಡದೇ ವಂಚಿಸಿದ್ದಾರೆ ಎಂದು ದೀಪಕ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್, ಮ್ಯಾನೇಜರ್ ಚಂದ್ರಚೂಡ್ ವಿರುದ್ಧ ದೂರು ನೀಡಿದ್ದಾರೆ.