ರಾಜ್ ಬಿ ಶೆಟ್ಟಿ ಅವರ ಮುಂಬರುವ ಕ್ರೈಮ್ ಥ್ರಿಲ್ಲರ್ 'ರಕ್ಕಸಪುರದೊಳ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್, ಟೀಸರ್ ಮತ್ತು 'ನೀನಾ ನೀನಾ...' ಹಾಡಿನೊಂದಿಗೆ ಈಗಾಗಲೇ ತೀವ್ರ ಸಂಚಲನ ಮೂಡಿಸಿದ್ದು, ಇದೀಗ ಚಿತ್ರದ ಮತ್ತೊಂದು ಪ್ರಮುಖ ಟ್ರ್ಯಾಕ್ 'ಸಿದ್ದಯ್ಯ ಸ್ವಾಮಿ ಬನ್ನಿ...' ಎಂಬ ಶೀರ್ಷಿಕೆಯ ಈ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಇಂದು ಸಂಜೆ 5 ಗಂಟೆಗೆ ಈ ಹಾಡು ಬಿಡುಗಡೆಯಾಗಲಿದೆ.
ಈ ಹಾಡಿನ ವಿಶೇಷತೆಯೆಂದರೆ, ನಿರ್ದೇಶಕ ಜೋಗಿ ಪ್ರೇಮ್ ಇದನ್ನು ಹಾಡಿದ್ದಾರೆ. ಪ್ರೇಮ್ ಅವರ ಧ್ವನಿ ಈ ಹಾಡಿಗೆ ಉತ್ತಮವಾಗಿ ಹೊಂದಿಕೆಯಾಗಲಿದೆ ಎಂಬುದು ಚಿತ್ರತಂಡದ ನಂಬಿಕೆ. ಅಚ್ಚರಿಯ ತಿರುವು ಎಂದರೆ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ಈ ಹಾಡಿನಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಅರ್ಜುನ್ ತೆರೆಮರೆಯಲ್ಲಿ ಚಿರಪರಿಚಿತ ಹೆಸರಾಗಿದ್ದರೂ, ಈ ಹಾಡಿನಲ್ಲಿ ಅವರು ಕಾಣಿಸಿಕೊಂಡಿರುವುದು ಮತ್ತೊಂದು ವಿಶೇಷವಾಗಿದೆ.
ಕ್ರಾಂತಿ ಕುಮಾರ್ ಬರೆದ ಈ ಹಾಡು, ಗ್ರಾಮಸ್ಥರು ತಮ್ಮ ತೊಂದರೆಗಳಿಂದ ಪರಿಹಾರಕ್ಕಾಗಿ ಸಿದ್ದಯ್ಯ ಸ್ವಾಮಿಯ ಕಡೆಗೆ ತಿರುಗಿದಾಗ ಸನ್ನಿವೇಶಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಈ ದೃಶ್ಯದಲ್ಲಿ ರಾಜ್ ಬಿ ಶೆಟ್ಟಿ, ಗೌರವ್ ಶೆಟ್ಟಿ ಮತ್ತು ಗ್ರಾಮಸ್ಥರ ದೊಡ್ಡ ಗುಂಪೇ ಕಾಣಿಸಿಕೊಂಡಿದೆ.
ನಿರ್ದೇಶಕ ಪ್ರೇಮ್ ಅವರೊಂದಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿರುವ ರವಿ ಸಾರಂಗ ರಕ್ಕಸಪುರದೊಳ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೊಳ್ಳೇಗಾಲ ಮತ್ತು ಸುತ್ತಮುತ್ತ ನಡೆಯುವ ಕಥೆಯನ್ನು ಈ ಚಿತ್ರವು ಒಳಗೊಂಡಿದೆ.