ಜೈಪುರ (ರಾಜಸ್ಥಾನ): ಕನ್ನಡ ಚಿತ್ರರಂಗದ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಅವರು ತಮಿಳಿನ ಚಿತ್ರ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ರಾಜಸ್ಥಾನದ ಜೈಪುರದ ಐತಿಹಾಸಿಕ ಮತ್ತು ಪ್ರಸಿದ್ಧ ಸಮೋಡೆ ಪ್ಯಾಲೇಸ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಶರ್ಮಿಳಾ ಅವರ ಮದುವೆಯ ಚಿತ್ರವನ್ನ ನಟಿ ಧನ್ಯಾ ರಾಮ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಆ ಕುರಿತ ವರದಿ ಇಲ್ಲಿದೆ.
ಇದಕ್ಕೂ ಮುನ್ನ , ಶರ್ಮಿಳಾ ಮಾಂಡ್ರೆ ಹಾಗೂ ಸುಧನ್ ಸುಂದರಂ ಅವರು ಇತ್ತೀಚೆಗೆ ಜೂನ್ 25, 2026 ರಂದು ಬೆಂಗಳೂರಿನ ತಾರಾ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದರು. ಅದರಂತೆ, ಬೆಂಗಳೂರಿನ ಶರ್ಮಿಳಾ ನಿವಾಸದಲ್ಲೂ ಮದುವೆ ಮುನ್ನ ಸಾಂಪ್ರದಾಯಿಕ ಪೂಜೆಗಳು ನಡೆದಿದ್ದು, ಜುಲೈ 11 ರಂದು ಹಳದಿ, ಮೆಹಂದಿ ಹಾಗೂ ಸಂಗೀತ ಸಮಾರಂಭಗಳು ಅತ್ಯಂತ ಅದ್ಧೂರಿಯಾಗಿ ನಡೆದವು. ಈ ವೇಳೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸೇರಿದಂತೆ ಹಲವರು ಭಾಗವಹಿಸಿದ್ದರು.
ಮುಂದುವರೆದು, ಶರ್ಮಿಳಾ ಮಾಂಡ್ರೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನಟಿಯಾಗಿ ಮಾತ್ರವಲ್ಲದೆ ಯಶಸ್ವಿ ನಿರ್ಮಾಪಕಿಯಾಗಿಯೂ ಗಮನ ಸೆಳೆದಿದ್ದಾರೆ. 2007 ರಲ್ಲಿ ಕನ್ನಡದ ಸಜನಿ ಚಿತ್ರ ಮೂಲಕ ಸಿನಿರಂಗ ಪ್ರವೇಶಿಸಿದ ಶರ್ಮಿಳಾ, ನಂತರ ಕೃಷ್ಣ, ನವಗ್ರಹ, ಗಾಳಿಪಟ 2 ಮತ್ತು ಇತ್ತೀಚೆಗೆ ದಿ ಡೆವಿಲ್ ಸೇರಿದಂತೆ 35 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು, ಕನ್ನಡದೊಂದಿಗೆ ತೆಲುಗು ಮತ್ತು ತಮಿಳು ಸೇರಿದಂತೆ ಹಲವು ಬಹುಭಾಷಾ ಸಿನಿಮಾಗಳಲ್ಲಿ ಅಭಿನಯಿಸಿರುವ ಶರ್ಮಿಳಾ, ಪ್ರಸ್ತುತ ತಮಿಳಿನ ‘ಅದೃಷ್ಟಶಾಲಿ’ ಮತ್ತು ‘ದಸರಾ’ ಹೆಸರಿನ ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಏತನ್ಮಧ್ಯೆ, ಶರ್ಮಿಳಾ ಮಾಂಡ್ರೆ ನಟಿ ಮಾತ್ರವೇ ಅಲ್ಲದೆ ನಿರ್ಮಾಪಕಿಯೂ ಆಗಿದ್ದು ತಮಿಳಿನಲ್ಲಿ 4 ಸಿನಿಮಾ ನಿರ್ಮಿಸಿದ್ದಾರೆ. ಜೊತೆಗೆ, ಕನ್ನಡದಲ್ಲಿ ದಸರಾ ಹಾಗೂ ತಮಿಳಿನ ಕಾದಲ್ ಕೊಂಜಂ ತೂಕಲಾ ಚಿತ್ರದ ಸಹ ನಿರ್ಮಾಪಕಿಯಾಗಿದ್ದಾರೆ.
ವರ ಸುಧನ್ ಸುಂದರಂ ಯಾರು?
ಶರ್ಮಿಳಾ ಮಾಂಡ್ರೆ ಅವರ ಕೈಹಿಡಿದ ಸುಧನ್ ಸುಂದರಂ ಅವರು ತಮಿಳು ಚಿತ್ರರಂಗದ ಹೆಸರಾಂತ ನಿರ್ಮಾಣ ಸಂಸ್ಥೆ ಪ್ಯಾಷನ್ ಸ್ಟುಡಿಯೋಸ್ ಮಾಲೀಕರಾಗಿದ್ದು, ವಿಜಯ್ ಸೇತುಪತಿ ಅಭಿನಯದ ಸೂಪರ್ ಹಿಟ್ ಸಿನಿಮಾ ಮಹಾರಾಜ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಪಾರ್ಕಿಂಗ್ ಚಿತ್ರಗಳನ್ನು ನಿರ್ಮಿಸಿದ್ದಾರೆ.