ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ನಟಿಸುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಚಿತ್ರ ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರತಂಡಕ್ಕೆ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಅಧಿಕೃತವಾಗಿ ಸೇರಿಕೊಂಡಿದ್ದಾರೆ.
ಸಂದೀಪ್ ಸಿಂಗ್ ನಿರ್ದೇಶಿಸಿ, ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದರೆ, ಭೂಮಿ ಪೆಡ್ನೇಕರ್ ರಾಣಿ ಬೆಳವಡಿ ಮಲ್ಲಮ್ಮನ ಪಾತ್ರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಇಬ್ಬರು ಮೊದಲು ಬಾರಿಗೆ ತೆರೆ ಹಂಚಿಕೊಂಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿರುವ ನಟಿ ಭೂಮಿ, `ಮಹಾನ್ ಮರಾಠ ಯೋಧ-ರಾಜ ಛತ್ರಪತಿ ಶಿವಾಜಿ ಮಹಾರಾಜರ ಜೀವನಚರಿತ್ರೆ ಆಧರಿಸಿದ ಈ ಚಿತ್ರದ ಭಾಗವಾಗುತ್ತಿರುವುದು ನನಗೆ ಸಿಕ್ಕ ದೊಡ್ಡ ಗೌರವ. ಕರ್ನಾಟಕದ ಧೀರ ಯೋಧ ರಾಣಿ ಬೆಳವಡಿ ಮಲ್ಲಮ್ಮ ಅವರ ಪಾತ್ರವನ್ನು ದೊಡ್ಡ ಪರದೆಯ ಮೇಲೆ ಜೀವಂತಗೊಳಿಸುತ್ತಿರುವುದು ನನಗೆ ಅತ್ಯಂತ ಖುಷಿ ತಂದಿದೆ.
"'ಕಾಂತಾರ' ಸಿನಿಮಾ ನೋಡಿದ ಬಳಿಕ ನಾನು ರಿಷಬ್ ಶೆಟ್ಟಿ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಅವರ ಅಭಿನಯ ನನ್ನನ್ನು ಆಳವಾಗಿ ಸ್ಪರ್ಶಿಸಿತ್ತು. ನಿರ್ದೇಶಕ ಸಂದೀಪ್ ಸಿಂಗ್ ಈ ಚಿತ್ರದ ಕಥೆ ಹೇಳಿದ ಕ್ಷಣವೇ ಒಪ್ಪಿಕೊಳ್ಳುವ ನಿರ್ಧಾರ ಮಾಡಿದೆ. ಇದು ನನ್ನ ವೃತ್ತಿಜೀವನದಲ್ಲೇ ಇದುವರೆಗೆ ಮಾಡದಿರುವ ಅತ್ಯಂತ ವಿಭಿನ್ನ ಪಾತ್ರ. ನನ್ನನ್ನು ಹೊಸ ಆಯಾಮದಲ್ಲಿ ಪ್ರೇಕ್ಷಕರ ಮುಂದೆ ಪರಿಚಯಿಸುತ್ತಿರುವ ಚಿತ್ರತಂಡಕ್ಕೆ ನಾನು ಕೃತಜ್ಞಳಾಗಿದ್ದೇನೆ" ಎಂದು ತಿಳಿಸಿದ್ದಾರೆ.
ಮಹಾರಾಜ ಛತ್ರಪತಿ ಶಿವಾಜಿ ಮಹಾರಾಜರ ಸಾಹಸಗಾಥೆಯನ್ನು ಬಿಂಬಿಸುವ ಈ ಚಿತ್ರವು ಎರಡು ಭಾಗಗಳಲ್ಲಿ ಮೂಡಿಬರಲಿದ್ದು, ಮೊದಲ ಭಾಗವು 2027ರ ಜನವರಿ 21ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಈ ಬೃಹತ್ ಐತಿಹಾಸಿಕ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಸಂಗೀತ ನೀಡುತ್ತಿದ್ದು, ಖ್ಯಾತ ಗೀತರಚನೆಕಾರ ಪ್ರಸೂನ್ ಜೋಶಿ ಸಾಹಿತ್ಯ ರಚಿಸಲಿದ್ದಾರೆ. ರಿಷಿ ವಿರ್ಮಾನಿ ಚಿತ್ರಕಥೆ ಬರೆದಿದ್ದು, ಸಿನಿಮಾವನ್ನು ಎರಡು ಭಾಗಗಳಲ್ಲಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಈ ವರ್ಷಾಂತ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಸದ್ಯ ಭಾರೀ ಪ್ರಮಾಣದ ಪೂರ್ವ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ.