ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್  
ಸಿನಿಮಾ ಸುದ್ದಿ

Ramayana trailer- 'ರಾಮಾಯಣ' ಟ್ರೇಲರ್ ಬಿಡುಗಡೆ: ರಾವಣನಾಗಿ ಯಶ್ ಅಬ್ಬರ, ರಾಮ-ಸೀತೆಯಾಗಿ ರಣಬೀರ್- ಸಾಯಿ ಪಲ್ಲವಿ ನೋಟಕ್ಕೆ ಪ್ರೇಕ್ಷಕರು ಫಿದಾ-Video

ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಟ್ರೇಲರ್ ಅನಾವರಣಗೊಳಿಸಲಾಗಿದೆ.

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ: ಪಾರ್ಟ್ 1' ಚಿತ್ರದ ಟ್ರೇಲರ್ ಇಂದು ಜುಲೈ 30ರಂದು ನಸುಕಿನ ಜಾವ 4:15ಕ್ಕೆ ಬಿಡುಗಡೆಯಾಗಿದೆ. ಹಿಂದೂ ಪೌರಾಣಿಕ ಮಹಾಕಾವ್ಯ 'ರಾಮಾಯಣ' ಆಧಾರಿತ ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಭಾಷೆಗಳಲ್ಲಿ ಟ್ರೇಲರ್ ಅನಾವರಣಗೊಳಿಸಲಾಗಿದೆ.

ಟ್ರೇಲರ್ ಆರಂಭದಲ್ಲೇ ಯಶ್ ಅಭಿನಯದ ರಾವಣ ಲಂಕೆಯ ರಾಜನಾಗಿ ಅಧಿಕಾರ ವಹಿಸಿಕೊಳ್ಳುವ ದೃಶ್ಯವಿದೆ. ಬಳಿಕ ಅಯೋಧ್ಯೆಯಲ್ಲಿನ ಶ್ರೀರಾಮನ ಜೀವನದಿಂದ ಆರಂಭವಾಗುವ ರಾಮಾಯಣದ ಕಥೆಯನ್ನು ಪ್ರಮುಖ ಘಟ್ಟಗಳ ಮೂಲಕ ಪರಿಚಯಿಸಲಾಗುತ್ತದೆ.

ರಾವಣನಿಂದ ಲೋಕದಲ್ಲಿ ಅರಾಜಕತೆ ಮತ್ತು ವಿನಾಶ ಉಂಟಾಗುತ್ತಿದ್ದಂತೆ, ಭೂಮಿಯಲ್ಲಿ ಧರ್ಮಸ್ಥಾಪನೆ ಹಾಗೂ ಸಮತೋಲನ ಕಾಪಾಡಲು ಭಗವಾನ್ ವಿಷ್ಣು ಶ್ರೀರಾಮನ ಅವತಾರ ತಾಳುತ್ತಾರೆ.

ನಂತರ ರಣಬೀರ್ ಕಪೂರ್ ಅಭಿನಯದ ಶ್ರೀರಾಮ ಪರಿಚಯವಾಗುತ್ತಾರೆ. ರಾಕ್ಷಸರ ವಿರುದ್ಧ ಹೋರಾಡಿ ತನ್ನ ಪ್ರಜೆಯನ್ನು ರಕ್ಷಿಸುವ ರಾಮನ ಬಾಲ್ಯದಿಂದ ಯುವಕನಾಗುವ ಪಯಣ ಹಾಗೂ ಬಳಿಕ ಸೀತೆಯೊಂದಿಗೆ ವಿವಾಹವಾಗುವ ದೃಶ್ಯಗಳನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.

ನಂತರ ರಾಮ ಮತ್ತು ಸೀತೆಯ ಜೀವನದಲ್ಲಿ ಮಹತ್ವದ ತಿರುವು ಬರುತ್ತದೆ. ರಾಮನಿಗೆ 14 ವರ್ಷಗಳ ವನವಾಸ ವಿಧಿಸಲಾಗುತ್ತದೆ. ಸಾಯಿ ಪಲ್ಲವಿ ಅಭಿನಯದ ಸೀತೆ ಹಾಗೂ ರವಿ ದುಬೆ ಅಭಿನಯದ ಲಕ್ಷ್ಮಣ ಕೂಡ ರಾಮನೊಂದಿಗೆ ವನವಾಸಕ್ಕೆ ತೆರಳಲು ನಿರ್ಧರಿಸುತ್ತಾರೆ.

ಮುಂದೆ ರಾವಣನು ಸೀತೆಯನ್ನು ಅಪಹರಿಸುವುದು, ಆ ಬಳಿಕ ನಡೆಯುವ ರಾಮ–ರಾವಣರ ನಡುವಿನ ಮಹಾಯುದ್ಧ ಹಾಗೂ ಧರ್ಮ ಮತ್ತು ಅಧರ್ಮದ ನಡುವಿನ ಅತ್ಯಂತ ಮಹತ್ವದ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗುವ ದೃಶ್ಯಗಳೊಂದಿಗೆ ಟ್ರೇಲರ್ ಅಂತ್ಯಗೊಳ್ಳುತ್ತದೆ.

ಕೈಕೇಯಿಯಾಗಿ ಲಾರಾ ದತ್ತಾ, ಶೂರ್ಪಣಖೆಯಾಗಿ ರಕುಲ್ ಪ್ರೀತ್ ಸಿಂಗ್ ಹಾಗೂ ದಶರಥ ಮಹಾರಾಜನಾಗಿ ಅರವಿಂದ್ ಗೋವಿಲ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುವಂತೆ ಕಾಣಿಸುತ್ತಾರೆ.

ಪ್ರಶಸ್ತಿ ವಿಜೇತ ಕಥೆಗಾರ ಶ್ರೀಧರ್ ರಾಘವನ್ ಚಿತ್ರಕ್ಕೆ ಚಿತ್ರಕಥೆ ರೂಪಿಸಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ಹಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿರುವುದು ಚಿತ್ರದ ಮತ್ತೊಂದು ವಿಶೇಷತೆ. ಪೂರ್ವ–ಪಶ್ಚಿಮ ಚಿತ್ರರಂಗಗಳ ಅತಿದೊಡ್ಡ ಸಹಯೋಗಗಳಲ್ಲಿ ಒಂದಾಗಿ ಈ ಸಿನಿಮಾ ಮೂಡಿಬಂದಿದೆ.

ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಹಾಗೂ ಕ್ರಿಯೇಟಿವ್ ಆರ್ಕಿಟೆಕ್ಟ್ ನಮಿತ್ ಮಲ್ಹೋತ್ರಾ, "ರಾಮಾಯಣವು ಕೇವಲ ನಮ್ಮ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಲ್ಲ; ಅದು ನಮ್ಮ ಜೀವನಶೈಲಿ, ನಮ್ಮ ಸಂಭ್ರಮ ಹಾಗೂ ತಲೆಮಾರಿನಿಂದ ತಲೆಮಾರಿಗೆ ನಾವು ಸಾಗಿಸುವ ಮೌಲ್ಯಗಳ ಅವಿಭಾಜ್ಯ ಭಾಗವಾಗಿದೆ. ಪ್ರತಿವರ್ಷದ ದಸರಾ ಮತ್ತು ದೀಪಾವಳಿ ಹಬ್ಬಗಳು ಬೆಳಕು ಕತ್ತಲೆಯ ಮೇಲೆ ಹಾಗೂ ಧರ್ಮವು ಅಧರ್ಮದ ಮೇಲೆ ಸಾಧಿಸುವ ವಿಜಯದ ಸಂದೇಶವನ್ನು ಲಕ್ಷಾಂತರ ಜನರಿಗೆ ನೆನಪಿಸುತ್ತವೆ. ಸಾವಿರಾರು ವರ್ಷಗಳ ನಂತರವೂ ಜನರ ದೈನಂದಿನ ಬದುಕನ್ನು ಪ್ರಭಾವಿಸುವ ಕಥೆಗಳು ವಿರಳ. ರಾಮಾಯಣ ಅಂತಹ ಅಪರೂಪದ ಮಹಾಕಾವ್ಯ ಎಂದು ಹೇಳಿದರು.

ಜಾಗತಿಕ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವದ ಬಳಿಕವೂ ಭಾರತದ ಶ್ರೇಷ್ಠ ಕಥೆಗಳು ವಿಶ್ವದ ಅತಿದೊಡ್ಡ ವೇದಿಕೆಯಲ್ಲಿ ಮೂಡಿಬರಬೇಕು ಎಂಬ ನಂಬಿಕೆ ನನ್ನದು. ಇಂದು ಅದಕ್ಕೆ ಬೇಕಾದ ಕಲಾವಿದರು, ತಂತ್ರಜ್ಞಾನ, ನೈಪುಣ್ಯ ಮತ್ತು ಸಾಮೂಹಿಕ ಸಂಕಲ್ಪ ನಮ್ಮ ಬಳಿ ಇದೆ. ಈ ಅಸಾಧಾರಣ ಸಾಂಸ್ಕೃತಿಕ ಪರಂಪರೆಯನ್ನು ಅದರ ಘನತೆ, ವೈಭವ ಹಾಗೂ ಸಿನೆಮಾ ಗುಣಮಟ್ಟದೊಂದಿಗೆ ಜಗತ್ತಿನ ಪ್ರೇಕ್ಷಕರಿಗೆ ತಲುಪಿಸಲು ನಾವು ಸಿದ್ಧರಾಗಿದ್ದೇವೆ ಎಂದರು.

ಇದು ಕೇವಲ ಒಂದು ಚಿತ್ರದ ಆರಂಭವಲ್ಲ; ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವ ಪಯಣದ ಆರಂಭವಾಗಿದೆ. ಭಾರತ ಈ ಕಥೆಯನ್ನು ಸದಾ ಬದುಕಿದೆ. ಈಗ ಅದನ್ನು ವಿಶ್ವದೊಂದಿಗೆ ಹಂಚಿಕೊಳ್ಳುವುದು ನಮ್ಮ ಭಾಗ್ಯ ಎಂದು ಹೇಳಿದರು.

ಚಿತ್ರದ ನಿರ್ದೇಶಕ ನಿತೇಶ್ ತಿವಾರಿ, "ರಾಮಾಯಣವು ಅದರ ವೈಭವದಿಂದಲ್ಲ, ಅದು ಪ್ರತಿನಿಧಿಸುವ ಶಾಶ್ವತ ಮೌಲ್ಯಗಳಿಂದ ವಿಶ್ವದ ಶ್ರೇಷ್ಠ ಕಥೆಗಳಲ್ಲಿ ಒಂದಾಗಿದೆ. ನಿರ್ದೇಶಕರಾಗಿ ಅದನ್ನು ಸಾರ್ವತ್ರಿಕವಾಗಿಸುವ ಹೊಣೆ ನನ್ನದಾಗಿರಲಿಲ್ಲ; ಅದು ಮೊದಲೇ ವಿಶ್ವಮಾನ್ಯವಾಗಿದೆ. ನನ್ನ ಹೊಣೆಗಾರಿಕೆ ಅದನ್ನು ಪ್ರಾಮಾಣಿಕತೆ, ನೈಜತೆ ಮತ್ತು ಅಪಾರ ಗೌರವದೊಂದಿಗೆ ತೆರೆಗೆ ತರುವುದು," ಎಂದರು.

"ಚಿತ್ರಕಥೆ, ಕಲಾವಿದರ ಅಭಿನಯ, ನಿರ್ಮಾಣ ವಿನ್ಯಾಸ, ಸಂಗೀತ, ದೃಶ್ಯ ಪರಿಣಾಮಗಳು ಹಾಗೂ ಪರದೆಯ ಮೇಲಿನ ಪ್ರತಿಯೊಂದು ಫ್ರೇಮ್‌ವರೆಗೆ ನಾವು ತೆಗೆದುಕೊಂಡ ಪ್ರತಿಯೊಂದು ಸೃಜನಾತ್ಮಕ ನಿರ್ಧಾರವೂ ಒಂದೇ ಉದ್ದೇಶದಿಂದ ರೂಪುಗೊಂಡಿದೆ. ಈ ಮಹಾನ್ ಪರಂಪರೆಗೆ ತಕ್ಕ ಗೌರವ ಸಲ್ಲಿಸುತ್ತಾ, ಅತ್ಯುತ್ತಮ ಸಿನೆಮಾ ಕೌಶಲ್ಯದ ಮೂಲಕ ಅದನ್ನು ಪ್ರೇಕ್ಷಕರಿಗೆ ತಲುಪಿಸುವುದೇ ನಮ್ಮ ಗುರಿಯಾಗಿತ್ತು," ಎಂದು ಹೇಳಿದರು.

ವಿಶ್ವದ ಅತ್ಯುತ್ತಮ ಕಲಾವಿದರು, ತಂತ್ರಜ್ಞರು ಮತ್ತು ಕಥೆಗಾರರೊಂದಿಗೆ ಈ ಕನಸನ್ನು ಸಾಕಾರಗೊಳಿಸುವ ಅವಕಾಶ ನನಗೆ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ. ಪ್ರೇಕ್ಷಕರು ರಾಮಾಯಣದ ದೃಶ್ಯ ವೈಭವವಷ್ಟೇ ಅಲ್ಲ, ಅದರ ಭಾವನಾತ್ಮಕತೆ, ಮಾನವೀಯತೆ ಮತ್ತು ಸಾವಿರಾರು ವರ್ಷಗಳಿಂದ ಉಳಿದು ಬಂದಿರುವ ಶಾಶ್ವತ ಆತ್ಮವನ್ನು ಸಹ ಅನುಭವಿಸಲಿ ಎಂದು ನಾನು ಆಶಿಸುತ್ತೇನೆ ಎಂದು ನಿತೇಶ್ ತಿವಾರಿ ಹೇಳಿದರು.

ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಎಂಟು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ವಿಎಫ್‌ಎಕ್ಸ್ ಸಂಸ್ಥೆ ಡಿಎನ್‌ಇಜಿ (DNEG) ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಿಸಲಾಗಿದೆ. 'ರಾಮಾಯಣ: ಪಾರ್ಟ್ 1' ವಿಶ್ವದಾದ್ಯಂತ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷಾಂತರಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್: DCC ಅಧ್ಯಕ್ಷರ ನೇಮಕಕ್ಕೆ ಹೊಸ ತಂತ್ರ, ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಫುಲ್ ಕಂಟ್ರೋಲ್...!

ಇನ್ನಿಬ್ಬರು DCM ನೇಮಕಕ್ಕೆ ಕಾಂಗ್ರೆಸ್ ಕಸರತ್ತು? 'ನನಗೂ ಅವಕಾಶ ಸಿಗುವ ವಿಶ್ವಾಸವಿದೆ' ಎಂದ ಸತೀಶ್ ಜಾರಕಿಹೊಳಿ..!

ಮತದಾರರ ಪಟ್ಟಿಯಿಂದ 84 ಲಕ್ಷ ಹೆಸರು ಡಿಲೀಟ್? ಸ್ಪಷ್ಟನೆ ಕೊಟ್ಟ CEO, ಹೇಳಿದ್ದೇನು..?

ವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗುಂಡಿನ ದಾಳಿ: ಶಾ ಅವರೇ ಆದೇಶ ನೀಡಿದ್ದಾರೆ, ಇಲ್ಲವೇ ಅವರು ಅಸಮರ್ಥ; ವಜಾಗೊಳಿಗೊಳಿಸಿ- ಪ್ರಧಾನಿಗೆ ರಾಹುಲ್ ಒತ್ತಾಯ

CWRC ಆದೇಶದ ವಿರುದ್ಧ ಮೇಲ್ಮನವಿ: ಕಾವೇರಿ ಜಲಾನಯನ ಪ್ರದೇಶದ ಪರಿಸ್ಥಿತಿ ಅರಿಯಲು ಸಿಎಂ ವಿಜಯ್ ಗೆ ಹೆಲಿಕಾಪ್ಟರ್ ವ್ಯವಸ್ಥೆ- ಸಿಎಂ ಡಿಕೆ ಶಿವಕುಮಾರ್!