ಇಂದು ಬೆಳ್ಳಂಬೆಳಗ್ಗೆ ಸೋಷಿಯಲ್ ಮೀಡಿಯಾ ತುಂಬ ಹಿರಿಯ ನಟ ದೊಡ್ಡಣ್ಣ ಇನ್ನಿಲ್ಲ ಎಂಬ ಸುದ್ದಿ ಹಬ್ಬಿತ್ತು. ಇದು ಕನ್ನಡ ಚಿತ್ರಪ್ರೇಮಿಗಳಿಗೆ ಒಂದು ಕ್ಷಣ ಆಘಾತವಾಗಿದ್ದಂತೂ ಹೌದು. ಇದಕ್ಕೆ ಖುದ್ದು ನಟ ದೊಡ್ಡಣ್ಣ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಆರೋಗ್ಯವಾಗಿದ್ದೇನೆ, ಸುಳ್ಳು ಸುದ್ದಿ ಹಬ್ಬಿಸಿದವರನ್ನು ಸುಮ್ಮನೆ ಬಿಡಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೋ ಮಾಡಿ ತಿಳಿಸಿದ ಅವರು, ಬೆಳಗ್ಗೆ ನಾನು ಎದ್ದೇಳುವ ಮುಂಚೆಯೇ ಯಾರೋ ಅವಿವೇಕಿಗಳು ನಾನು ನಿಧನ ಎಂದು ಸುದ್ದಿ ಹಬ್ಬಿಸಿದ್ದರು. ಅದು ಶುದ್ಧ ಸುಳ್ಳು. ನಾನು ಆರೋಗ್ಯವಾಗಿ, ನೆಮ್ಮದಿಯಾಗಿದ್ದೇನೆ. ನನ್ನ ಮುಖ ತೊಳೆಯಲೂ ಬಿಡುತ್ತಿಲ್ಲ, ಬೆಳಿಗ್ಗೆಯಿಂದಲೂ ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಎಲ್ಲರೂ ಬಿಟ್ಟುಬಿಡದೇ ಕರೆ ಮಾಡ್ತಿದ್ದಾರೆ. ನಿಮ್ಮ ಆಶೀರ್ವಾದ ಇರುವವರೆಗೂ ನೂರುಕಾಲ ಚೆನ್ನಾಗಿರುತ್ತೇನೆ ಅಂತಾ ನಂಬಿದ್ದೇನೆ ಎಂದು ಹೇಳಿದ್ದಾರೆ.
ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳನ್ನು ಸುಮ್ಮನೇ ಬಿಡಲ್ಲ. ಅವರನ್ನು ಬೆನ್ನತ್ತಿ ತಕ್ಕ ಶಿಕ್ಷೆ ಕೊಡಿಸುತ್ತೇನೆ ಎಂದು ತಿಳಿಸಿದ್ದಾರೆ.