ನವದೆಹಲಿ: ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಾಪ್ಟಾಡುವಿನಲ್ಲಿರುವ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ದಾಳಿಯ ಘಟನೆಯು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಹೇಮಂತ್ ಎಂಬ 21 ವರ್ಷದ ವ್ಯಕ್ತಿಯೊಬ್ಬ ಎಲೆಕ್ಟ್ರಿಕ್ ಚೈನ್-ಸಾವನ್ನು (electric chainsaw) ಬಳಸಿಕೊಂಡು ಈ ದಾಳಿ ನಡೆಸಿದ್ದಾನೆ. ಗೋಪಿಕಾ ಎಂಬ ವಿದ್ಯಾರ್ಥಿನಿ ಆತನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದರಿಂದ, ಆಕೆಯ ಮೇಲೆ ಈ ದಾಳಿ ನಡೆಸಲಾಗಿದೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅನೇಕರು ಇದನ್ನು ಸಂದೀಪ್ ರೆಡ್ಡಿ ವಂಗಾ ಅವರ 'ಅನಿಮಲ್' ಚಿತ್ರದ ನಿರ್ದಿಷ್ಟ ದೃಶ್ಯವೊಂದಕ್ಕೆ ಹೋಲಿಸುತ್ತಿದ್ದಾರೆ.
ಚಿತ್ರದ ಒಂದು ದೃಶ್ಯದಲ್ಲಿ, ರಣಬೀರ್ ಕಪೂರ್ ಲೋಡ್ ಮಾಡಿದ ಬಂದೂಕನ್ನು ಹಿಡಿದುಕೊಂಡು ತರಗತಿಯೊಳಗೆ ನುಗ್ಗುತ್ತಾರೆ. ಈ ಚಿತ್ರ ಬಿಡುಗಡೆಯಾದಾಗ ಹೆಚ್ಚು ಚರ್ಚೆಗೊಳಗಾದ ದೃಶ್ಯಗಳಲ್ಲಿ ಇದೂ ಒಂದಾಗಿತ್ತು; ಇದೀಗ ರಾಪ್ತಾಡು ದಾಳಿಯ ಹಿನ್ನೆಲೆಯಲ್ಲಿ ಈ ದೃಶ್ಯ ಮತ್ತೆ ಮುನ್ನೆಲೆಗೆ ಬಂದಿದೆ.
ಚಿತ್ರಗಳಲ್ಲಿ ತಾವು ಏನನ್ನು ತೋರಿಸುತ್ತಿದ್ದೇವೆ ಎಂಬುದರ ಬಗ್ಗೆ ನಿರ್ದೇಶಕರು ಹೆಚ್ಚು ಜಾಗರೂಕರಾಗಿರಬೇಕು. ಅಪಾರ ಪ್ರಭಾವ ಬೀರಬಲ್ಲ ಚಿತ್ರಗಳಲ್ಲಿ, ಶಾಲಾ ಪರಿಸರದಲ್ಲಿ ಹಿಂಸಾಚಾರ ಮತ್ತು ಅಪಾಯಕಾರಿ ಆಯುಧಗಳ ಬಳಕೆಯನ್ನು ಹೇಗೆ ಚಿತ್ರಿಸಲಾಗುತ್ತದೆ ಎಂಬುದರ ಬಗ್ಗೆ ಹೆಚ್ಚು ಗಂಭೀರವಾಗಿ ಯೋಚಿಸಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ಸಮಾಜದ ಕಡೆಗೆ ಬೀರುವ ಪರಿಣಾಮಗಳ ಬಗ್ಗೆ ಚಿತ್ರಗಳು ಜವಾಬ್ದಾರಿ ಹೊಂದಿರಬೇಕು. ಬೆಳ್ಳಿತೆರೆಯ ಮೇಲೆ ಹಿಂಸಾಚಾರವನ್ನು ವೀರತ್ವದಂತೆ ಬಿಂಬಿಸಬಾರದು ಎಂಬ ವಾದಗಳು ವ್ಯಕ್ತವಾಗಿವೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅನಿಮಲ್ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, 'ಯಾರಾದರೂ ಘೋರ ಅಪರಾಧ ಮಾಡಿದಾಗ, ಮೊದಲ ಪ್ರತಿಕ್ರಿಯೆ ಸಹಾನುಭೂತಿ ಮತ್ತು ದೊಡ್ಡ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವಾಗಿರಬೇಕು. ಬದಲಿಗೆ ಸಿನಿಮಾ ವಿಚಾರವನ್ನಿಟ್ಟುಕೊಂಡು ಹರಕೆಯ ಕುರಿಯನ್ನಾಗಿ ಮಾಡುವುದಲ್ಲ. ನಿಮ್ಮ ಕಾಳಜಿ ಸಂತ್ರಸ್ತರು ಅಥವಾ ಅವರ ಕುಟುಂಬಗಳ ಮೇಲಿಲ್ಲ. ನೀವು ನಿಮ್ಮ ವೈಯಕ್ತಿಕ ದ್ವೇಷಗಳನ್ನು ಇತ್ಯರ್ಥಪಡಿಸಿಕೊಳ್ಳಲು ಭಯಾನಕ ದುರಂತವನ್ನು ಕೊಳಕು ನೆಪವಾಗಿ ಬಳಸುತ್ತಿದ್ದೀರಿ ಎಂಬುದು ಹೆಚ್ಚು ಸ್ಪಷ್ಟವಾಗುತ್ತಿದೆ' ಎಂದು ಬರೆದಿದ್ದಾರೆ.
'ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಕಾಣದ ಅಥವಾ ಹತಾಶರಾಗಿರುವ ನಟರು, ನಿರ್ದೇಶಕರು, ನಿರ್ಮಾಪಕರು ಮತ್ತು ಇತರ ವ್ಯಕ್ತಿಗಳು ಯಾವುದೇ ದುರಂತ ನಡೆದಾಗ, ಬೇರೆಯವರ ಕೆಲಸವನ್ನು ಟೀಕಿಸಲು ಅವಕಾಶ ಸಿಕ್ಕ ಕೂಡಲೇ, ಇದ್ದಕ್ಕಿದ್ದಂತೆ ಸಮಾಜ ಸುಧಾರಕರಂತೆ ವರ್ತಿಸುತ್ತಾರೆ. ದುರಂತದಿಂದ ಬಾಧಿತರಾದವರ ಬಗ್ಗೆ ನಿಜವಾದ ಸಹಾನುಭೂತಿಯನ್ನು ತೋರಿಸುವ ಬದಲು, ಇವರು ಅಂತಹ ಸಂದರ್ಭವನ್ನು ಇತರರ ಮೇಲೆ ದಾಳಿ ಮಾಡಲು, ತಮ್ಮ ವೈಯಕ್ತಿಕ ದ್ವೇಷವನ್ನು ಹೊರಹಾಕಲು ಅಥವಾ ಜನರ ಗಮನ ಸೆಳೆಯಲು ಬಳಸಿಕೊಳ್ಳುತ್ತಾರೆ. ಯಾವುದೇ ದುರಂತ ಅವಕಾಶವಾದಕ್ಕೆ ಅಲ್ಲ, ಸಹಾನುಭೂತಿಗೆ ಅರ್ಹವಾಗಿದೆ. ವ್ಯತ್ಯಾಸವನ್ನು ಕಲಿಯಿರಿ' ಎಂದು ವಂಗಾ ಕಿಡಿಕಾರಿದ್ದಾರೆ.
ವಾಸ್ತವ ಜೀವನದಲ್ಲಿ ಇಂತಹ ಅಪರಾಧಗಳು ಹೆಚ್ಚಾಗಲು 'ಅನಿಮಲ್' (Animal) ಮತ್ತು 'ಧುರಂಧರ್' (Dhurandhar) ನಂತಹ ಚಲನಚಿತ್ರಗಳೇ ಕಾರಣ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸುತ್ತಿದ್ದಾರೆ.
ಸದ್ಯ ತೀವ್ರಗೊಂಡಿರುವ ಈ ಟೀಕೆಯು ಕೇವಲ ವಂಗಾ ಅವರಿಗೆ ಮಾತ್ರ ಸೀಮಿತವಾಗಿಲ್ಲ; ತೆರೆಯ ಮೇಲೆ ಹಿಂಸಾಚಾರವನ್ನು ಚಿತ್ರಿಸುವ ನಿರ್ದೇಶಕರನ್ನೂ ಇದಕ್ಕೆ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ.