ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ ಬಹು ನಿರೀಕ್ಷಿತ 'ರಾಮಾಯಣ' ಸಿನಿಮಾ ಭರ್ಜರಿ ಓಪನಿಂಗ್ ಪಡೆದಿರುವಂತೆಯೇ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಸಿನಿಮಾದ ಅದ್ದೂರಿ ದೃಶ್ಯಾವಳಿಗಳು ಮತ್ತು ಪ್ರಮುಖ ಪಾತ್ರಧಾರಿಗಳ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಅವರು ಕ್ಲೈಮ್ಯಾಕ್ಸ್ ಪೂರ್ವ ಮತ್ತು ಕ್ಲೈಮ್ಯಾಕ್ಸ್ ಸೀಕ್ವೆನ್ಸ್‌ಗಳನ್ನು ಸಹ ಪ್ರತ್ಯೇಕವಾಗಿ ಉಲ್ಲೇಖಿಸಿದ್ದು, ಅವುಗಳಲ್ಲಿ ಪ್ರತಿಯೊಂದನ್ನು ಅವರು ಇಷ್ಟಪಟ್ಟಿರುವುದಾಗಿ ಬರೆದುಕೊಂಡಿದ್ದಾರೆ.
ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ ಬಗ್ಗೆ ರಾಜಮೌಳಿ ಫಿದಾ! ರಣಬೀರ್ ಕಪೂರ್ ಅವರನ್ನು ರಾಮನ ಪಾತ್ರದಲ್ಲಿ "ಪ್ರಶಾಂತ ಆದರೆ ಅದ್ಭುತ" ಎಂದು ಕೊಂಡಾಡಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ಅಭಿನಯ ಅದ್ಬುತವಾಗಿದ್ದು, ಸಾಯಿ ಪಲ್ಲವಿ ಅವರ ಸೀತೆಯ ಪಾತ್ರ ಆಕರ್ಷಕವಾಗಿದೆ ಎಂದಿದ್ದಾರೆ.
ಚಿತ್ರದ ಅದ್ಭುತ ದೃಶ್ಯಗಳು ಮತ್ತು ದೊಡ್ಡ ಪರದೆಯ ಮೇಲೆ ಅದರ ನೋಡುವಾಗ ಆಗುವ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇಂತಹ ಮಹತ್ವಾಕಾಂಕ್ಷೆಯ ಕಲ್ಪನೆಯನ್ನು ತೆರೆಗೆ ತಂದಿದ್ದಕ್ಕಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿರ್ದೇಶಕ ನಿತೇಶ್ ತಿವಾರಿ ಮತ್ತು ಇಡೀ ತಂಡವನ್ನು ಅವರು ಅಭಿನಂದಿಸಿದ್ದಾರೆ.
ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ರವಿ ದುಬೆ ಲಕ್ಷ್ಮಣನಾಗಿ ಮತ್ತು ಸನ್ನಿ ಡಿಯೋಲ್ ಹನುಮಂತನಾಗಿ ನಟಿಸಿದ್ದಾರೆ. ಅರುಣ್ ಗೋವಿಲ್, ಲಾರಾ ದತ್ತ ಮತ್ತು ವಿವೇಕ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಹಿಂದೂ ಮಹಾಕಾವ್ಯವನ್ನು ಎರಡು ಭಾಗಗಳಾಗಿ ಸಿನಿಮಾ ಮಾಡಲಾಗುತ್ತಿದೆ. ಮೊದಲ ಭಾಗ ಇಂದು ಬಿಡುಗಡೆಯಾಗಿದ್ದು, ರಾಮಾಯಣ: ಭಾಗ 2 ದೀಪಾವಳಿ 2027 ರ ಬಿಡುಗಡೆಗೆ ನಿಗದಿಯಾಗಿದೆ.