ಚೆನ್ನೈ: ದಕ್ಷಿಣ ಭಾರತದ ಮತ್ತೋರ್ವ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ನಟಿ ಪ್ರಿಯಾ ಭವಾನಿ ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.
ಚಿತ್ರರಂಗದಲ್ಲಿ ಮದುವೆ ಸಂಭ್ರಮ ಶುರುವಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ಅವರು ಗ್ರೀಸ್‌ನಲ್ಲಿ ಕಾವ್ಯಾ ಮಾರನ್ ಅವರನ್ನು ವರಿಸಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ, ಮತ್ತೋರ್ವ ನಟಿ ಸದ್ದೇ ಇಲ್ಲದೇ ಹಸೆಮಣೆ ಏರಿದ್ದಾರೆ.
ಈ ಹಿಂದೆ ತೆಲುಗು ನಟ ರವಿತೇಜ ಅಭಿನಯದ 'ಇರುಮುಡಿ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಟಿ ಪ್ರಿಯಾ ಭವಾನಿ ಶಂಕರ್ ಸೈಲೆಂಟ್ ಆಗಿಯೇ ವಿವಾಹವಾಗಿದ್ದಾರೆ.
ತಮ್ಮ ಬಹುಕಾಲದ ಗೆಳೆಯ ರಾಜ್ ವೇಲು ಅವರನ್ನು ಪ್ರಿಯಾ ಮದುವೆಯಾಗಿದ್ದು, ತಮಿಳುನಾಡಿನ ಚೆನ್ನೈನಲ್ಲಿ ಬುಧವಾರ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆದಿದೆ.
ಬುಧವಾರ ಬಿಡುಗಡೆಯಾದ ಮದುವೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ವಿಡಿಯೋದಲ್ಲಿ ಮದುವೆಯ ಸುಂದರ ಕ್ಷಣಗಳು ಸೆರೆಯಾಗಿವೆ.
ಅದ್ಧೂರಿತನಕ್ಕೆ ಬದಲಾಗಿ ಸರಳ ವಿವಾಹ
ಸಾಮಾನ್ಯವಾಗಿ ಚಿತ್ರರಂಗದ ಸೆಲೆಬ್ರಿಟಿಗಳ ಮದುವೆ ಎಂದರೆ ಅದ್ಧೂರಿ ಸಮಾರಂಭ, ತಾರೆಯರ ದಂಡು ಹಾಗೂ ಭರ್ಜರಿ ಸಂಭ್ರಮ ಇರುತ್ತದೆ. ಆದರೆ ಪ್ರಿಯಾ ಭವಾನಿ ಶಂಕರ್ ಇದಕ್ಕೆ ಭಿನ್ನವಾಗಿ ಸರಳ ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿ ಮದುವೆಯಾಗಿದ್ದಾರೆ.
ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಬಹುಕಾಲದ ಪ್ರೀತಿಗೆ ಮದುವೆಯ ಮುದ್ರೆ ಒತ್ತಿರುವ ಜೋಡಿಗೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.
ಕೆಂಪು-ಚಿನ್ನದ ಸೀರೆಯಲ್ಲಿ ಮಿಂಚಿದ ಪ್ರಿಯಾ
ಬಿಳಿ ಬಣ್ಣದ ಕುರ್ತಾ ಧರಿಸಿ ರಾಜ್‌ವೇಲ್ ಮದುವೆ ಮಂಟಪಕ್ಕೆ ಆಗಮಿಸುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ. ಕುಟುಂಬದ ಮಹಿಳೆಯರು ಹೂಗುಚ್ಛಗಳನ್ನು ಹಿಡಿದು ಅವರೊಂದಿಗೆ ಬರುತ್ತಾರೆ. ಬಳಿಕ ಕೆಂಪು ಮತ್ತು ಚಿನ್ನದ ಬಣ್ಣದ ಸೀರೆಯಲ್ಲಿ ಮಿಂಚಿದ ಪ್ರಿಯಾ ಮಂಟಪಕ್ಕೆ ಆಗಮಿಸುತ್ತಾರೆ. ಅವರ ತಲೆಯ ಮೇಲೆ ಹೂವಿನ ಚಪ್ಪರ ಹಿಡಿದು ಕೆಲವರು ಕರೆತರುವ ದೃಶ್ಯವೂ ವಿಡಿಯೋದಲ್ಲಿದೆ.
ಮಂಟಪದಲ್ಲಿ ಭೇಟಿಯಾದ ಬಳಿಕ ಇಬ್ಬರೂ ಪರಸ್ಪರ ಅಪ್ಪಿಕೊಂಡು ಸಂಭ್ರಮಿಸುತ್ತಾರೆ. ನಂತರ ವಿವಾಹದ ಶಾಸ್ತ್ರಗಳಲ್ಲಿ ಪಾಲ್ಗೊಳ್ಳುತ್ತಾರೆ. ಪುರೋಹಿತರು ಮಂತ್ರಗಳನ್ನು ಪಠಿಸುತ್ತಿರುವಾಗ ಇಬ್ಬರೂ ನಗುತ್ತಾ, ಮಾತನಾಡುತ್ತಾ ಸಂತೋಷದ ಕ್ಷಣಗಳನ್ನು ಕಳೆಯುತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ.
ದಶಕದ ಪ್ರೀತಿಗೆ ಮದುವೆಯ ಮುದ್ರೆ
ನಟಿ ಪ್ರಿಯಾ ಮತ್ತು ರಾಜ್‌ವೇಲ್ ಅವರ ಪ್ರೀತಿ ಕಾಲೇಜು ದಿನಗಳಲ್ಲೇ ಆರಂಭವಾಗಿತ್ತು ಎನ್ನಲಾಗಿದೆ. ಟೈಮ್ಸ್ ನೌ ವರದಿಯ ಪ್ರಕಾರ, ಇಬ್ಬರೂ ಕಾಲೇಜಿನಲ್ಲಿ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದಿದ್ದರು. ಕಳೆದ ಹತ್ತು ವರ್ಷಕ್ಕೂ ಹೆಚ್ಚು ಕಾಲ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಸುದ್ದಿ ನಿರೂಪಕಿಯಿಂದ ನಟಿಯಾಗಿ ಬೆಳೆದ ಪ್ರಿಯಾ
ನಟಿಯಾಗುವ ಮೊದಲು ಪ್ರಿಯಾ ಭವಾನಿ ಶಂಕರ್ ಸುದ್ದಿ ನಿರೂಪಕಿಯಾಗಿ ಕೆಲಸ ಮಾಡಿದ್ದರು. ಬಳಿಕ ಕಿರುತೆರೆಗೆ ಪ್ರವೇಶಿಸಿ, 2017ರಲ್ಲಿ ಬಿಡುಗಡೆಯಾದ ತಮಿಳಿನ 'ಮೇಯಾದ ಮಾನ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.
ನಂತರ ಹಲವು ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡರು. ಇತ್ತೀಚೆಗೆ 'ಹಾಟ್ ಸ್ಪಾಟ್ 2 ಮಚ್' ಮತ್ತು 'ಇರುಮುಡಿ' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ 'ಡೆಮಾಂಟೆ ಕಾಲೋನಿ 3', 'ಮರಗಧ ನಾಣಯಂ 2' ಮತ್ತು 'ಇಂಡಿಯನ್ 3' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.