ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹ-ಮಾಲೀಕರು ಆಗಿರುವ ಉದ್ಯಮಿ ಕಾವ್ಯಾ ಮಾರನ್ ಅವರು ಕಳೆದ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನವೆಂಬರ್ 11 ರಂದು ಗ್ರೀಸ್‌ನಲ್ಲಿ ನಡೆದ ಅದ್ಧೂರಿ ಸಮಾರಂಭವೊಂದರಲ್ಲಿ ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಅವರು ಅನಿರುದ್ಧ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಈ ಜೋಡಿ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳ ಬದಲಿಗೆ ಸಮಾನತೆ ಮತ್ತು ಪರಸ್ಪರ ಬದ್ಧತೆಯನ್ನು ಆಧರಿಸಿದ ವಿವಾಹವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಹೌದು, ಈ ಜೋಡಿ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳು ಹಾಗೂ ಪುರೋಹಿತರ ಮಂತ್ರಘೋಷಗಳ ಬದಲಿಗೆ, ಸಮಾನತೆ ಮತ್ತು ಪರಸ್ಪರ ಗೌರವವನ್ನು ಸಾರುವ 'ಸ್ವಾಭಿಮಾನಿ ವಿವಾಹ' (Self-Respect Marriage) ಪದ್ಧತಿಯ ಮೂಲಕ ಸತಿ-ಪತಿಗಳಾಗಿದ್ದಾರೆ.
'ಸ್ವಾಭಿಮಾನಿ ವಿವಾಹ'ದ ಭಾಗವಾಗಿ, ಇಬ್ಬರೂ ಪರಸ್ಪರ ಒಂದೇ ರೀತಿಯ ಪೆಂಡೆಂಟ್‌ಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಈ ವಿವಾಹವು ಇದೀಗ ಚರ್ಚೆಯ ವಿಷಯವಾಗಿದ್ದು, ಈ ವಿಶಿಷ್ಟ ಪದ್ಧತಿಯ ಬಗ್ಗೆ ಅನೇಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಈ ಮದುವೆಯಲ್ಲಿ ಖ್ಯಾತ ನಟ ರಜನಿಕಾಂತ್, ಎಂ.ಕೆ. ಸ್ಟಾಲಿನ್ ಮತ್ತು ಇತರರು ಭಾಗವಹಿಸಿದ್ದರು.
ಏನಿದು ಸ್ವಾಭಿಮಾನದ ಮದುವೆ?
ಈ ಸ್ವಾಭಿಮಾನದ ಮದುವೆಯು ತಮಿಳುನಾಡಿನಲ್ಲಿ ಸಮಾಜ ಸುಧಾರಕ ಪೆರಿಯಾರ್ ಇ.ವಿ. ರಾಮಸಾಮಿ ಅವರು ಆರಂಭಿಸಿದ 'ಸ್ವಾಭಿಮಾನಿ ಚಳವಳಿ'ಯ ಮೂಲ ಆಶಯವೇ ಈ ವಿವಾಹ ಪದ್ಧತಿಯಾಗಿದೆ.
ಜಾತಿ ತಾರತಮ್ಯ, ಸಾಮಾಜಿಕ ಶ್ರೇಣೀಕರಣ ಮತ್ತು ಪುರುಷಪ್ರಧಾನ ಸಂಪ್ರದಾಯಗಳನ್ನು ವಿರೋಧಿಸಿ, ವ್ಯಕ್ತಿಗತ ಘನತೆ ಮತ್ತು ಸ್ತ್ರೀ-ಪುರುಷ ಸಮಾನತೆಯನ್ನು ಎತ್ತಿಹಿಡಿಯುವುದು ಇದರ ಪ್ರಮುಖ ಉದ್ದೇಶವಾಗಿದೆ.
ಈ ಪದ್ಧತಿಯ ಪ್ರಕಾರ ಮದುವೆಗೆ ಪುರೋಹಿತರಾಗಲಿ, ಅಗ್ನಿಸಾಕ್ಷಿಯಾಗಲಿ ಅಥವಾ ಸಂಕೀರ್ಣವಾದ ಧಾರ್ಮಿಕ ಆಚರಣೆಗಳಾಗಲಿ ಬೇಕಾಗಿಲ್ಲ. ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಧು-ವರರು ಪರಸ್ಪರ ಒಪ್ಪಿಗೆಯನ್ನು ಘೋಷಿಸಿ, ಹಾರ, ಉಂಗುರ ಅಥವಾ ಸರವನ್ನು ಬದಲಾಯಿಸಿಕೊಳ್ಳುವ ಮೂಲಕ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಬಹುದು.
ಈ ಸ್ವಾಭಿಮಾನಿ ವಿವಾಹಕ್ಕೆ ಕಾನೂನಿನ ಮಾನ್ಯತೆಯೂ ಇದೆ ಎಂಬುದು ವಿಶೇಷ. 1967ರಲ್ಲಿ ತಮಿಳುನಾಡು ಸರ್ಕಾರವು ಹಿಂದೂ ವಿವಾಹ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ 'ಸೆಕ್ಷನ್ 7-ಎ' ಅನ್ನು ಸೇರ್ಪಡೆಗೊಳಿಸಿತು. ಇದರ ಅನ್ವಯ, ಯಾವುದೇ ಧಾರ್ಮಿಕ ವಿಧಿವಿಧಾನಗಳಿಲ್ಲದೆ ಕೇವಲ ಬಂಧು-ಮಿತ್ರರ ಸಮ್ಮುಖದಲ್ಲಿ ಹಾರ ಅಥವಾ ಉಂಗುರ ಬದಲಾಯಿಸಿಕೊಂಡು ಘೋಷಿಸಿಕೊಳ್ಳುವ ಸ್ವಾಭಿಮಾನಿ ವಿವಾಹಗಳಿಗೆ ಸಂಪೂರ್ಣ ಕಾನೂನುಬದ್ಧ ಮಾನ್ಯತೆ ನೀಡಲಾಗಿದೆ.
ಗಂಡು-ಹೆಣ್ಣಿನ ನಡುವೆ ಮೇಲು-ಕೀಳು ಎಂಬ ಭಾವನೆ ಇಲ್ಲದೆ, ಇಬ್ಬರೂ ಸಮಾನರು ಎಂಬ ಸಂದೇಶವನ್ನು ಸಾರುವ ಈ ಪ್ರಗತಿಪರ ಪದ್ಧತಿಯನ್ನು ಅನಿರುದ್ಧ್ ಮತ್ತು ಕಾವ್ಯಾ ತಮ್ಮ ಜೀವನದ ಅತ್ಯಂತ ಮಹತ್ವದ ಘಟ್ಟದಲ್ಲಿ ಅಳವಡಿಸಿಕೊಂಡಿರುವುದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.