ನಟ ಮತ್ತು ರಾಜಕಾರಣಿ ಜಗ್ಗೇಶ್ ಮತ್ತು ರಚಿತಾ ರಾಮ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದು, ಇನ್ನೂ ಹೆಸರಿಡದ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಚಿತ್ರಕ್ಕೆ ನಾಗರಾಜ್ ಪೀಣ್ಯ ಆ್ಯಕ್ಷನ್ ಕಟ್ ಹೇಳುತ್ತಿದ್ದು, 2024ರ ನಂತರ ನವರಸ ನಾಯಕ ಜಗ್ಗೇಶ್ ಮತ್ತೊಮ್ಮೆ ಬೆಳ್ಳಿ ಪರದೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.
ಸದ್ಯ ಬಹುಭಾಷಾ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ರಚಿತಾ ರಾಮ್, ರಜನಿಕಾಂತ್ ನಟನೆಯ ತಮಿಳಿನ ಕೂಲಿ ಚಿತ್ರದ ಪಾತ್ರಕ್ಕಾಗಿ ಮೆಚ್ಚುಗೆ ಪಡೆದರು. ಅವರು ಕೊನೆಯದಾಗಿ ಸತೀಶ್ ನೀನಾಸಂ ನಟನೆಯ 'ಅಯೋಗ್ಯ 2' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ, ರಚಿತಾ ಅವರು ಮೊದಲ ಬಾರಿಗೆ ನಿರ್ದೇಶಕಿಯಾಗುತ್ತಿರುವ ನಟಿ ಮಾನ್ವಿತಾ ಕಾಮತ್ ಅವರ ಮುಂಬರುವ ಯೋಜನೆಯಲ್ಲಿಯೂ ನಟಿಸಲಿದ್ದಾರೆ. ಅಲ್ಲದೆ, ವಿಜಯ್ ಪ್ರಸಾದ್ ಅವರ ಮುಂದಿನ ಚಿತ್ರಕ್ಕೂ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಜಗ್ಗೇಶ್ ಅವರ ಇತ್ತೀಚಿನ ಕೆಲವು ಚಿತ್ರಗಳು ಅರ್ಥಪೂರ್ಣ ಕಥೆಯನ್ನು ಒಳಗೊಂಡಿದ್ದರೂ, ಅವು ವಯಸ್ಕರ ಹಾಸ್ಯ ಮತ್ತು ದ್ವಂದ್ವ ಅರ್ಥ ಬರುವ ರೀತಿಯಲ್ಲಿದ್ದವು. ಹೀಗಾಗಿ, ನಿರ್ದೇಶಕ ಮತ್ತು ನಟ ಇಬ್ಬರೂ ಮುಂಬರುವ ಯೋಜನೆಯನ್ನು ಪ್ರಜ್ಞಾಪೂರ್ವಕವಾಗಿ ಕೌಟುಂಬಿಕ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲು ಯೋಜಿಸಿದ್ದಾರೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಆಪ್ತ ಮೂಲಗಳು ಬಹಿರಂಗಪಡಿಸುತ್ತವೆ.
ಪದೇ ಪದೇ, ಭೂತಯ್ಯನ ಮೊಮ್ಮೊಗ ಅಯ್ಯು ಮತ್ತು ನಮಕ್ ಹರಾಮ್ ಚಿತ್ರಗಳನ್ನು ನಿರ್ದೇಶಿಸಿದ್ದ ನಾಗರಾಜ್ ಪೀಣ್ಯ ಅವರು ಸದ್ಯ ನಿರೂಪ್ ಭಂಡಾರಿ ನಟನೆಯ 'ಅತಿಕಾಯ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಅವರು ಜಗ್ಗೇಶ್ ಮತ್ತು ರಚಿತಾ ರಾಮ್ ಚಿತ್ರಕ್ಕಾಗಿ ಸ್ಕ್ರಿಪ್ಟ್ ಅನ್ನು ಅಂತಿಮಗೊಳಿಸಿದ್ದಾರೆ. ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಭರದಿಂದ ಸಾಗುತ್ತಿದೆ.
2027ರ ಆರಂಭದಲ್ಲಿ ಚಿತ್ರೀಕರಣ ಪ್ರಾರಂಭಿಸಲು ಚಿತ್ರತಂಡ ಯೋಜಿಸುತ್ತಿರುವುದರಿಂದ, ಶೀರ್ಷಿಕೆ, ಪಾತ್ರವರ್ಗ ಮತ್ತು ಸಿಬ್ಬಂದಿ ವಿವರಗಳನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ.