ಒಂದು ಸಿನಿಮಾ ಯಶಸ್ವಿಯಾಗಲು ದೊಡ್ಡ ಬಜೆಟ್, ಖ್ಯಾತ ನಟರು ಅಥವಾ ದೊಡ್ಡ ನಿರ್ಮಾಣ ಸಂಸ್ಥೆಯ ಬೆಂಬಲವೇ ಬೇಕೆಂಬ ಕಲ್ಪನೆಯನ್ನು 'ಹನುಮಾನ್ ಅಂಶ' ಸಂಪೂರ್ಣವಾಗಿ ತಲೆಕೆಳಗಾಗಿಸಿದೆ. ಪ್ರೇಕ್ಷಕರೇ ತಮಗೆ ಇಷ್ಟವಾದ ಚಿತ್ರಗಳಿಗೆ ನೇರವಾಗಿ ಸಾಥ್ ಕೊಡುತ್ತಾರೆ ಎಂದು ನಿರ್ದೇಶಕ ವಿಶಾಲ್ ಚತುರ್ವೇದಿ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ವಿಶಾಲ್ ಚತುರ್ವೇದಿ, ತಾವು ಇನ್ನೂ ‘ರಾಮಾಯಣ’ ಸಿನಿಮಾ ನೋಡಿಲ್ಲ ಎಂದು ಹೇಳಿದ್ದಾರೆ. ಸಿನಿಮಾ ಎನ್ನುವುದು ಪ್ರೇಕ್ಷಕರಿಗಾಗಿ ಇರುವ ಮಾಧ್ಯಮ. ಒಂದು ಚಿತ್ರ ಚೆನ್ನಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಅಂತಿಮವಾಗಿ ಪ್ರೇಕ್ಷಕರೇ ನಿರ್ಧರಿಸುತ್ತಾರೆ. ಹಿಂದೆ ವಿಮರ್ಶಕರು ಮತ್ತು ಸಾಮಾಜಿಕ ಜಾಲತಾಣಗಳ ಅಭಿಪ್ರಾಯಗಳು ಸಿನಿಮಾಗಳ ಬಗ್ಗೆ ಜನರ ನಿರ್ಧಾರವನ್ನು ಪ್ರತಿಬಿಂಬಿಸುತ್ತಿದ್ದವು ಎಂದಿದ್ದಾರೆ.
ಕೆಲಸದ ಒತ್ತಡದಿಂದ ನನಗೆ ಇನ್ನೂ ಸಮಯ ಸಿಕ್ಕಿಲ್ಲ. ಆದರೆ ರಾಮಾಯಣ ಸಿನಿಮಾವನ್ನು ನೋಡಲು ನಾನು ಬಹಳ ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಇದೇ ವೇಳೆ ಸಿನಿಮಾವೊಂದರ ಗೆಲುವಿನಲ್ಲಿ ಬಜೆಟ್ ನಿಯಂತ್ರಣ ಎಷ್ಟು ಮುಖ್ಯ ಎಂಬುದನ್ನು ವಿವರಿಸುವ ಮೂಲಕ ದೊಡ್ಡ ಬಜೆಟ್ ಸಿನಿಮಾಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 442 ಕೋಟಿ ರೂ. ಕಲೆಕ್ಷನ್ ಕಂಡು ಹೊಸ ದಾಖಲೆಯನ್ನು ನಿರ್ಮಿಸಿದೆ. ಕೇವಲ 2 ಕೋಟಿ ಬಜೆಟ್ನ ಚಿತ್ರವು ಟಾಕ್ಸಿಕ್ ಸೇರಿದಂತೆ ಸ್ಟಾರ್ ನಟರ ಸಿನಿಮಾಗಳಿಗೆ ಕೊಟ್ಟ ಪೈಪೋಟಿ ಸಿನಿಪ್ರೇಮಿಗಳ ಹುಬ್ಬೇರಿಸಿತು. ಇಷ್ಟೆಲ್ಲ ಮೈಲಿಗಲ್ಲು ತಲುಪಿ, ಭರ್ಜರಿ ಸಕ್ಸಸ್ ತಂದುಕೊಟ್ಟರೂ ಬಾಲಿವುಡ್ ಮಂದಿಯಿಂದ ಮಾತ್ರ ಕಿಂಚಿತ್ತು ಗೌರವ ಸಿಗದಿರುವ ಬಗ್ಗೆ ನಿರ್ದೇಶಕರು ಬೇಸರ ಹೊರಹಾಕಿದ್ದಾರೆ.
ಹೂಡಿಕೆ ಮತ್ತು ಲಾಭದ ಲೆಕ್ಕಾಚಾರದ ಬಗ್ಗೆ ಮಾತನಾಡಿದ ವಿಶಾಲ್, ‘ನಮ್ಮ ಚಿತ್ರರಂಗದಲ್ಲಿ ಕಾಗದದ ಮೇಲೆ ಲೆಕ್ಕಾಚಾರ ಸರಿ ಇದ್ದರೆ ಮಾತ್ರ ಸಿನಿಮಾ ಮಾಡಬೇಕು. ನೀವು ಒಂದು ಸಿನಿಮಾಗೆ 200 ಕೋಟಿ ರೂಪಾಯಿ ಹೂಡಿಕೆ ಮಾಡಿ, ಅದು 400 ಕೋಟಿ ಗಳಿಸದಿದ್ದರೆ ಅದನ್ನು ಫ್ಲಾಪ್ ಎಂದೇ ಕರೆಯಲಾಗುತ್ತದೆ. ಹೂಡಿಕೆಗೆ ತಕ್ಕ ಪ್ರತಿಫಲ ಬಂದರೆ ಮಾತ್ರ ಸಿನಿಮಾ ಗೆದ್ದಂತೆ’ ಎಂದು ನೇರವಾಗಿ ಹೇಳಿದ್ದಾರೆ.
ದೊಡ್ಡ ಬಜೆಟ್ ಸಿನಿಮಾಗಳು ಯಾಕೆ ಸೋಲುತ್ತವೆ ಎಂಬುದಕ್ಕೂ ಅವರು ಕಾರಣ ನೀಡಿದ್ದಾರೆ. ನಿರ್ದೇಶಕರು ಸಿನಿಮಾ ಮಾಡುವಾಗ ಒಟ್ಟು ಬಜೆಟ್ ಬಗ್ಗೆ ಬಹಳ ಎಚ್ಚರಿಕೆಯಿಂದಿರಬೇಕು. ಕೆಲವೊಮ್ಮೆ ಭಾರಿ ಬಜೆಟ್‌ನಲ್ಲಿ ನಿರ್ಮಾಣವಾದ ಅದ್ಭುತ ಸಿನಿಮಾಗಳು ಕೂಡ ನಿರೀಕ್ಷಿತ ಗಳಿಕೆ ಕಾಣದೆ ಬಾಕ್ಸ್ ಆಫೀಸ್‌ನಲ್ಲಿ ಸೋಲುತ್ತವೆ. ಹೀಗಾಗಿ ಬಜೆಟ್ ಜೊತೆಗೆ ಚಿತ್ರಕಥೆ ಕೂಡ ಅಷ್ಟೇ ಮುಖ್ಯವಾಗಿರುತ್ತದೆ’ ಎಂದು ವಿಶಾಲ್ ಚತುರ್ವೇದಿ ಅಭಿಪ್ರಾಯಪಟ್ಟಿದ್ದಾರೆ.
ಬಾಲಿವುಡ್‌ನಲ್ಲಿ ಒಂದು ಸಿನಿಮಾ ಯಶಸ್ವಿ ಆಗಬೇಕಾದರೆ ದೊಡ್ಡ ಬಜೆಟ್, ಸ್ಟಾರ್ ನಟರು ಮತ್ತು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳ ಬೆಂಬಲ ಇರಲೇಬೇಕು ಎಂಬುದು ಬಹುತೇಕರಿಗೆ ಗೊತ್ತೇ ಇರುವ ವಿಷಯ. ಆದರೆ, ಈ ನಂಬಿಕೆಯನ್ನು ಸುಳ್ಳು ಮಾಡಿದ್ದು 'ಹನುಮಾನ್ ಅಂಶ' ಸಿನಿಮಾ. ನೀಮ್ ಕರೋಲಿ ಬಾಬಾ ಅವರ ಜೀವನ ಕಥೆಯನ್ನು ಆಧರಿಸಿದ ಈ ಭಕ್ತಿಪ್ರಧಾನ ಚಿತ್ರ ಕೇವಲ 2 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿ, ಇಂದು 452.86 ಕೋಟಿ ರೂ. ಗಳಿಸಿದೆ. ಈ ಮಟ್ಟಿಗಿನ ಯಶಸ್ಸು ಕಂಡಿದ್ದರೂ ಬಾಲಿವುಡ್‌ನ ಪ್ರಮುಖ ನಿರ್ಮಾಣ ಸಂಸ್ಥೆಗಳಿಂದ ಯಾವುದೇ ಅಧಿಕೃತ ಅಭಿನಂದನೆ ಅಥವಾ ಪ್ರತಿಕ್ರಿಯೆ ಬಂದಿಲ್ಲ ಎಂದು ವಿಶಾಲ್ ಚತುರ್ವೇದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.