ನನಗೂ ಮದುವೆಯಾಗುವ ಆಸೆಯಿದೆ, ಆದರೆ...: ಲವ್, ರಿಲೇಶನ್‌ಶಿಪ್ ಬಗ್ಗೆ ಸೌತ್ ಬ್ಯೂಟಿ ನಿತ್ಯಾ ಮೆನನ್ ಮಾತು ವೈರಲ್!
ನಿತ್ಯ ಮೆನನ್ ತಮ್ಮ ಅದ್ಭುತ ನಟನೆಯಿಂದ ದಕ್ಷಿಣ ಭಾರತದಲ್ಲಿ ಅನೇಕ ಅಭಿಮಾನಿಗಳನ್ನು ಗಳಿಸಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲೂ ಅವರಿಗೆ ಸ್ಪಷ್ಟ ಅಭಿಪ್ರಾಯಗಳಿವೆ.
ಪ್ರೀತಿ, ರಿಲೇಶನ್‌ಶಿಪ್ ಹಾಗೂ ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿರುವ ದಕ್ಷಿಣ ಭಾರತದ ಖ್ಯಾತ ನಟಿ ನಿತ್ಯಾ ಮೆನನ್ ಅವರು, ತಮ್ಮನ್ನು, ನಿಯಂತ್ರಿಸುವ ಸಂಗಾತಿಯನ್ನು ಬಿಡುವುದೇ ಉತ್ತಮ ಎಂದು ಹೇಳಿದ್ದಾರೆ.
ನಿತ್ಯ ಮೆನನ್ ತಮ್ಮ ಅದ್ಭುತ ನಟನೆಯಿಂದ ದಕ್ಷಿಣ ಭಾರತದಲ್ಲಿ ಅನೇಕ ಅಭಿಮಾನಿಗಳನ್ನು ಗಳಿಸಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲೂ ಅವರಿಗೆ ಸ್ಪಷ್ಟ ಅಭಿಪ್ರಾಯಗಳಿವೆ. ವಿಶೇಷವಾಗಿ ಅವರ ಮದುವೆಯ ಸುದ್ದಿಗಳು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತವೆ.
ಇತ್ತೀಚೆಗೆ, ಪಾಡ್‌ಕ್ಯಾಸ್ಟ್‌ನಲ್ಲಿ ನಿತ್ಯಾ ಮೆನನ್ ಅವರು ಪ್ರೀತಿ, ಸಂಬಂಧಗಳು ಮತ್ತು ಮದುವೆಯ ಕುರಿತು ಮಾಡಿದ ಕಾಮೆಂಟ್‌ಗಳು ಈಗ ವೈರಲ್ ಆಗುತ್ತಿವೆ.
ನಾನು ಮದುವೆ ಬೇಡ ಎಂದು ಯಾವತ್ತೂ ಹೇಳಿಲ್ಲ. ನನಗೂ ಮದುವೆಯಾಗುವ ಆಸೆ ಇದೆ. ಆದರೆ ತನ್ನನ್ನು ಅರ್ಥಮಾಡಿಕೊಳ್ಳುವ ಸರಿಯಾದ ವ್ಯಕ್ತಿಗಾಗಿ ಕಾಯುತ್ತಿದ್ದೇನೆ ಎಂದು ನಿತ್ಯಾ ತಿಳಿಸಿದ್ದಾರೆ.
ಈ ಪಾಡ್‌ಕ್ಯಾಸ್ಟ್ ಸಂದರ್ಶನದಲ್ಲಿ, ನಿತ್ಯಾ ಮೆನನ್ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದು, ಹಿಂದಿನ ಸಂಬಂಧಗಳಲ್ಲಿನ ತನ್ನ ಅನುಭವಗಳು, ಸಂಗಾತಿಯಿಂದ ತಾನು ಬಯಸುವ ಸ್ವಾತಂತ್ರ್ಯ ಮತ್ತು ಮದುವೆಯ ಬಗ್ಗೆ ತನ್ನ ಅಭಿಪ್ರಾಯಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ.
ವೈಯಕ್ತಿಕ ಸ್ವಾತಂತ್ರ್ಯ ಮತ್ತು ವ್ಯಕ್ತಿತ್ವಕ್ಕೆ ಬೆಲೆ ನೀಡದ ಸಂಬಂಧಗಳು ತಮ್ಮನ್ನು ಕಟ್ಟಿಹಾಕಿದ ಅನುಭವವನ್ನು ನಿತ್ಯಾ ಬಿಚ್ಚಿಟ್ಟಿದ್ದಾರೆ. ಅಂತಹ ಸಂಬಂಧಗಳಿಂದ ಹೊರಬರುವುದು ಆರಂಭದಲ್ಲಿ ಕಠಿಣ ನಿರ್ಧಾರವೆನಿಸಿದರೂ, ಆ ಸಂಬಂಧಗಳಲ್ಲಿ ಮುಂದುವರಿಯುವುದು ತಮ್ಮ ವೈಯಕ್ತಿಕ ಬೆಳವಣಿಗೆಗೆ ದೊಡ್ಡ ಮಾರಕವಾಗುತ್ತದೆ ಎಂಬುದನ್ನು ತಾವು ತಡವಾಗಿ ಅರಿತುಕೊಂಡಿದ್ದಾಗಿ ನಿತ್ಯಾ ಹೇಳಿದ್ದಾರೆ.
ಇದೇ ವೇಳೆ, ತಮಗೆ ಮದುವೆಯ ಬಗ್ಗೆ ಆಸಕ್ತಿಯಿಲ್ಲ ಎಂಬ ವರದಿಗಳಿಗೂ ನಿತ್ಯಾ ಮೆನನ್ ಸ್ಪಷ್ಟನೆ ನೀಡಿದ್ದಾರೆ. "ನಾನು ಒಂಟಿಯಾಗಿದ್ದೇನೆ ಎಂದು ಹೇಳಿದಾಗ, ನಾನು ಮದುವೆಯ ವಿರೋಧಿ ಅಥವಾ ನನಗೆ ಮದುವೆಯಾಗಲು ಇಷ್ಟವಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಅದು ನಿಜವಲ್ಲ, ನನಗೆ ಮದುವೆಯಾಗಲು ಇಷ್ಟವಿಲ್ಲ ಎಂದು ನಾನು ಎಂದಿಗೂ ಹೇಳಿಲ್ಲ. ನನಗೆ ಮದುವೆಯಾಗುವ ಆಸೆಯಿದೆ, ಆದರೆ ಜೀವನದಲ್ಲಿ ನನಗೆ ಏನು ಬೇಕು ಎಂಬುದರ ಬಗ್ಗೆ ನನಗೆ ಸ್ಪಷ್ಟ ಕಲ್ಪನೆಯಿದೆ. ನನಗೆ ಕೇವಲ ಒಂದು ಮದುವೆ ಬೇಕಾಗಿಲ್ಲ, ಬದಲಾಗಿ ಸರಿಯಾದ ಪಾಲುದಾರಿಕೆ ಬೇಕಾಗಿದೆ. ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ವ್ಯಕ್ತಿ ಸಿಗುವವರೆಗೂ ನಾನು ಮದುವೆಯಾಗುವುದಿಲ್ಲ ಎಂದಿದ್ದಾರೆ.
ನಿತ್ಯಾ ಕನ್ನಡದಲ್ಲಿ ಜೋಶ್, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ.