ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

Pak ವೆಬ್ ಸರಣಿ ‘Jo Bachay Hain Sang Samait Lo’ ವಿವಾದ: Netflix ವಿರುದ್ಧ ಒಗ್ಗೂಡಿದ ಭಾರತೀಯ ಚಿತ್ರರಂಗ, ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಆಗ್ರಹ..!

ಸರಣಿಯ ಬಿಡುಗಡೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿರುವ ಸಂಘಟನೆಗಳು, ನೆಟ್‌ಫ್ಲಿಕ್ಸ್ ವಿರುದ್ಧ ಹೋರಾಟದ ಎಚ್ಚರಿಕೆಯನ್ನೂ ನೀಡಿವೆ.

ಸಂಗ್ರಹ ಚಿತ್ರ
Manjula VN
Updated On : 28 Nov 2026, 12:31 pm

ನವದೆಹಲಿ: ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಪಾಕಿಸ್ತಾನಿ ವೆಬ್ ಸರಣಿ ‘Jo Bachay Hain Sang Samait Lo’ ಇದೀಗ ಭಾರತದಲ್ಲಿ ವಿವಾದಕ್ಕೆ ಕಾರಣವಾಗಿದೆ.

ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನ ಸಂಬಂಧ ಹಾಗೂ ಭದ್ರತಾ ಆತಂಕಗಳನ್ನು ಮುಂದಿಟ್ಟುಕೊಂಡು ಸರಣಿಯ ಪ್ರಸಾರಕ್ಕೆ ಭಾರತೀಯ ಚಿತ್ರರಂಗದ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಸರಣಿಯ ಬಿಡುಗಡೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿರುವ ಸಂಘಟನೆಗಳು, ನೆಟ್‌ಫ್ಲಿಕ್ಸ್ ವಿರುದ್ಧ ಹೋರಾಟದ ಎಚ್ಚರಿಕೆಯನ್ನೂ ನೀಡಿವೆ.

Advertisement

Advertisement

ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (ಎಫ್‌ಡಬ್ಲ್ಯುಐಸಿಇ) ಮತ್ತು ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ (ಎಐಸಿಡಬ್ಲ್ಯುಎ) ಸೇರಿದಂತೆ ಭಾರತೀಯ ಚಿತ್ರರಂಗದ ಹಲವು ಸಂಘಟನೆಗಳು ಹಾಗೂ ಬಾಲಿವುಡ್ ಕಲಾವಿದರು ಸರಣಿಯ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿ ಹಾಗೂ ಪುಲ್ವಾಮಾ ಮತ್ತು ಮುಂಬೈ ದಾಳಿಗಳಂತಹ ಭಯೋತ್ಪಾದಕ ಘಟನೆಗಳನ್ನು ಉಲ್ಲೇಖಿಸಿರುವ ಈ ಸಂಘಟನೆಗಳು, ಭಾರತದಲ್ಲಿ ಸರಣಿಯ ಪ್ರಸಾರ ತಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದಿವೆ.

ಈ ಕುರಿತು ಮಾತನಾಡಿರುವ ಎಫ್‌ಡಬ್ಲ್ಯುಐಸಿಇ ಅಧ್ಯಕ್ಷ ಬಿಎನ್ ತಿವಾರಿ ಅವರು, ಭಾರತದಲ್ಲಿ ಈ ವೆಬ್ ಸರಣಿಯನ್ನು ಬಿಡುಗಡೆ ಮಾಡಿದರೆ ನೆಟ್‌ಫ್ಲಿಕ್ಸ್‌ನ ವ್ಯವಹಾರದ ಮೇಲೆ ದೊಡ್ಡ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಮಾರುಕಟ್ಟೆ ಏಷ್ಯಾದಲ್ಲೇ ನೆಟ್‌ಫ್ಲಿಕ್ಸ್‌ಗೆ ಪ್ರಮುಖವಾಗಿದ್ದು, ಸರಣಿಯನ್ನು ಪ್ರಸಾರ ಮಾಡದಂತೆ ಮನವಿ ಮಾಡಿದ್ದಾರೆ.

ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅವರು, ನೆಟ್‌ಫ್ಲಿಕ್ಸ್ ತಮ್ಮ ಮನವಿಗೆ ಸ್ಪಂದಿಸದಿದ್ದರೆ ಭಾರತೀಯ ಚಿತ್ರರಂಗದ 38 ಸಂಘಟನೆಗಳು ಒಟ್ಟಾಗಿ ವಿರೋಧಿಸಲಿವೆ ಎಂದು ಹೇಳಿದ್ದಾರೆ. ಡಿಸೆಂಬರ್ 4ರಂದು ಸರಣಿಯನ್ನು ಪ್ರಸಾರ ಮಾಡಿದರೆ, ಡಿಸೆಂಬರ್ 5ರಿಂದ ನೆಟ್‌ಫ್ಲಿಕ್ಸ್‌ನ ಮುಂದಿನ ಚಿತ್ರೀಕರಣಗಳಿಗೆ ಅಡ್ಡಿಯಾಗಬಹುದು ಎಂದು ಎಚ್ಚರಿಸಿದ್ದಾರೆ.

ನಮ್ಮ ತಂತ್ರಜ್ಞರು, ಕಲಾವಿದರು ಮತ್ತು ಸಿನಿಮಾ ಕಾರ್ಮಿಕರು ನಮ್ಮ ಶಕ್ತಿ. ರಾಷ್ಟ್ರ ಮೊದಲು ಎಂಬ ನಿಲುವಿಗೆ ವಿರುದ್ಧವಾಗಿ ನಡೆದುಕೊಳ್ಳುವ ಭಾರತೀಯ ಕಲಾವಿದರು, ನಿರ್ಮಾಪಕರು ಅಥವಾ ವಾಹಿನಿಗಳನ್ನೂ ಪಾಕಿಸ್ತಾನದವರಂತೆ ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ.

ಎಫ್‌ಡಬ್ಲ್ಯುಐಸಿಇನ ಚಿತ್ರ ನಿರ್ದೇಶಕ ಅಶೋಕ್ ಪಂಡಿತ್ ಕೂಡ ಸರಣಿಯ ಬಿಡುಗಡೆ ವಿರೋಧಿಸುವ ನಿರ್ಧಾರಕ್ಕೆ ರಾಷ್ಟ್ರೀಯ ಭದ್ರತೆ ಮತ್ತು ಸಶಸ್ತ್ರ ಪಡೆಗಳ ಗೌರವವೇ ಕಾರಣ ಎಂದು ತಿಳಿಸಿದ್ದಾರೆ.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಿರುವ ಭದ್ರತಾ ಸಿಬ್ಬಂದಿ, ದಾಳಿಗಳಲ್ಲಿ ಮೃತಪಟ್ಟವರು ಹಾಗೂ ಸಂತ್ರಸ್ತ ಕುಟುಂಬಗಳ ಭಾವನೆಗಳಿಗೆ ಗೌರವ ನೀಡಬೇಕಿದೆ. ಹೀಗಾಗಿ ಭಾರತದಲ್ಲಿ ಪಾಕಿಸ್ತಾನಿ ಸರಣಿಯ ಪ್ರಸಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

Also Read

26/11 ದಾಳಿ ರೂವಾರಿ ಹಫೀಜ್ ಜೊತೆ Pak ನಟ Selfie: Netflix ವಿರುದ್ಧ ತಿರುಗಿಬಿದ್ದ ಭಾರತೀಯರು; 'Jo Bachay Hain Sang Samait Lo' ನಿಷೇಧಕ್ಕೆ ಆಗ್ರಹ..!

ಮಂಗಳವಾರ ಎಐಸಿಡಬ್ಲ್ಯುಎ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು, ಡಿಸೆಂಬರ್ 4ರಂದು ನೆಟ್‌ಫ್ಲಿಕ್ಸ್ ಇಂಡಿಯಾದಲ್ಲಿ ಸರಣಿ ಬಿಡುಗಡೆಯಾಗದಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತ್ತು. ಅಲ್ಲದೆ, ಭಾರತೀಯ ವೇದಿಕೆಗಳಲ್ಲಿ ಪಾಕಿಸ್ತಾನದ ಕಲಾವಿದರು ಮತ್ತು ಮನರಂಜನಾ ಕಾರ್ಯಕ್ರಮಗಳ ಪ್ರಸಾರವನ್ನು ನಿಷೇಧಿಸುವ ಶಾಶ್ವತ ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸಿತ್ತು.

ಈ ಕುರಿತು ಎಕ್ಸ್‌ನಲ್ಲಿ ಹೇಳಿಕೆ ಹಂಚಿಕೊಂಡಿದ್ದ ಸಂಘಟನೆ, “ಭಯೋತ್ಪಾದನೆಗೆ ಚಪ್ಪಾಳೆ ಇಲ್ಲ, ರಾಷ್ಟ್ರವೇ ಮೊದಲು. ಪಾಕಿಸ್ತಾನದ ಧಾರಾವಾಹಿಗಳು, ಸಿನಿಮಾಗಳು, ಹಾಡುಗಳು, ಪಾಡ್‌ಕಾಸ್ಟ್‌ಗಳು ಸೇರಿದಂತೆ ಯಾವುದೇ ವಿಷಯಕ್ಕೂ ಭಾರತೀಯ ಪರದೆಗಳಲ್ಲಿ ಅವಕಾಶ ಇರಬಾರದು. ಇಂತಹ ವಿಷಯಗಳನ್ನು ಪ್ರಸಾರ ಮಾಡುವುದನ್ನು ತಡೆಯಲು ಕಠಿಣ ಶಿಕ್ಷೆಗಳನ್ನು ಒಳಗೊಂಡ ಶಾಶ್ವತ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿತ್ತು.

ಗುರುವಾರ ಎಫ್‌ಡಬ್ಲ್ಯುಐಸಿಇ ಕೂಡ ಪ್ರಧಾನಿ ಮೋದಿಗೆ ಪತ್ರ ಬರೆದು, ಸರಣಿಯ ಬಿಡುಗಡೆ ತಡೆಯಲು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿತ್ತು. 2025ರ ಮೇ 8ರಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿದ್ದ ಸಲಹೆಯನ್ನು ಪತ್ರದಲ್ಲಿ ಉಲ್ಲೇಖಿಸಿತ್ತು.

ರಾಷ್ಟ್ರೀಯ ಭದ್ರತೆ ಮತ್ತು ಅಂದಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪಾಕಿಸ್ತಾನ ಮೂಲದ ವೆಬ್ ಸರಣಿಗಳು, ಸಿನಿಮಾಗಳು, ಹಾಡುಗಳು, ಪಾಡ್‌ಕಾಸ್ಟ್‌ಗಳು ಹಾಗೂ ಇತರ ಪ್ರಸಾರ ವಿಷಯಗಳನ್ನು ಸ್ಥಗಿತಗೊಳಿಸುವಂತೆ ಆ ಸಲಹೆಯಲ್ಲಿ ಸೂಚಿಸಲಾಗಿತ್ತು ಎಂದು ಸಂಘಟನೆ ತಿಳಿಸಿತ್ತು.

ಭಾರತೀಯ ಚಿತ್ರರಂಗವು ಲಕ್ಷಾಂತರ ಕಲಾವಿದರು, ತಂತ್ರಜ್ಞರು ಮತ್ತು ದಿನಗೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಸೂಚನೆಗಳು ಮತ್ತು ಚಿತ್ರರಂಗದ ಭಾವನೆಗಳನ್ನು ಪರಿಗಣಿಸದೆ ಪಾಕಿಸ್ತಾನಿ ನಿರ್ಮಾಣಗಳು ಭಾರತೀಯ ಮಾರುಕಟ್ಟೆಯಿಂದ ವಾಣಿಜ್ಯ ಲಾಭ ಪಡೆಯಲು ಅವಕಾಶ ನೀಡುವುದು ಕಳವಳಕಾರಿ ಎಂದು ಪತ್ರದಲ್ಲಿ ಹೇಳಲಾಗಿತ್ತು.

ಚಿತ್ರರಂಗದ ಸಂಘಟನೆಗಳು ಮತ್ತು ಕಲಾವಿದರಿಂದ ನಿರಂತರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಭಾರತದಲ್ಲಿ ಪಾಕಿಸ್ತಾನ ಮೂಲದ ವಿಷಯಗಳು ಲಭ್ಯವಾಗದಂತೆ ನೋಡಿಕೊಳ್ಳಬೇಕೆಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗುರುವಾರ ನೆಟ್‌ಫ್ಲಿಕ್ಸ್‌ಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. 2025ರ ಮೇ 8ರಂದು ಹೊರಡಿಸಿದ್ದ ಸಲಹೆಯನ್ನು ಪಾಲಿಸುವಂತೆ ಸಚಿವಾಲಯ ನೆಟ್‌ಫ್ಲಿಕ್ಸ್‌ಗೆ ನೆನಪಿಸಿದೆ.

ಕಳೆದ ವರ್ಷ ಜೂನ್‌ನಲ್ಲಿ ನೆಟ್‌ಫ್ಲಿಕ್ಸ್ ಭಾರತದಲ್ಲಿನ ಚಂದಾದಾರರಿಗೆ ಪಾಕಿಸ್ತಾನ ಮೂಲದ ಯಾವುದೇ ಸಿನಿಮಾ ಅಥವಾ ಸರಣಿಯನ್ನು ಲಭ್ಯವಾಗುವಂತೆ ಮಾಡಿಲ್ಲ ಎಂದು ಸಚಿವಾಲಯಕ್ಕೆ ತಿಳಿಸಿತ್ತು. ಇದೀಗ ಆ ನಿಲುವಿಗೆ ಬದ್ಧವಾಗಿರುವಂತೆ ಸರ್ಕಾರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಸಚಿವಾಲಯದ ನಿರ್ಧಾರಕ್ಕೆ ಬಾಲಿವುಡ್‌ನ ಹಲವು ಕಲಾವಿದರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಟ ಮನೋಜ್ ಜೋಶಿ ಮಾತನಾಡಿ, ದೇಶದ ಹಿತಾಸಕ್ತಿಯೇ ಮೊದಲ ಆದ್ಯತೆಯಾಗಬೇಕು. ಸರ್ಕಾರ ನಿರ್ಧಾರ ಕೈಗೊಂಡಿದ್ದರೆ ಅದಕ್ಕೆ ಕಾರಣವಿರುತ್ತದೆ ಮತ್ತು ಅದನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಭಾರತದಲ್ಲೇ ಹೇಳಲು ಸಾಕಷ್ಟು ಕಥೆಗಳಿದ್ದು, ಅವುಗಳನ್ನು ಪ್ರೋತ್ಸಾಹಿಸುವತ್ತ ಗಮನ ಹರಿಸಬೇಕು ಎಂದಿದ್ದಾರೆ.

ನೆಟ್‌ಫ್ಲಿಕ್ಸ್ ಸೇರಿದಂತೆ ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಒಟಿಟಿ ವೇದಿಕೆಗಳು ದೇಶದ ನಿಯಮಗಳು ಮತ್ತು ನೀತಿಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.

ನಟ ವಿಂದು ದಾರಾ ಸಿಂಗ್ ಕೂಡ ಭಾರತ-ಪಾಕಿಸ್ತಾನ ಗಡಿಯಲ್ಲಿ ಪರಿಸ್ಥಿತಿ ಶಾಂತಿಯುತವಾಗುವವರೆಗೆ ಪಾಕಿಸ್ತಾನಿ ಸರಣಿಗಳನ್ನು ಪ್ರೋತ್ಸಾಹಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಭಾರತದ ವಿರುದ್ಧದ ಚಟುವಟಿಕೆಗಳು ನಿಲ್ಲುವವರೆಗೆ ಇಂತಹ ಕಾರ್ಯಕ್ರಮಗಳಿಗೆ ಬೆಂಬಲ ನೀಡಬಾರದು ಎಂಬುದು ತಮ್ಮ ಅಭಿಪ್ರಾಯ ಎಂದು ತಿಳಿಸಿದ್ದಾರೆ.

ಫರ್ಹತ್ ಇಶ್ತಿಯಾಕ್ ಅವರ ಇದೇ ಹೆಸರಿನ ಉರ್ದು ಕಾದಂಬರಿಯನ್ನು ಆಧರಿಸಿ ‘ಜೋ ಬಚೇ ಹೈ ಸಾಂಗ್ ಸಮೇಟ್ ಲೋ’ ಸರಣಿ ನಿರ್ಮಿಸಲಾಗಿದೆ. ಫವಾದ್ ಖಾನ್, ಮಹಿರಾ ಖಾನ್ ಮತ್ತು ಹಾನಿಯಾ ಆಮಿರ್ ಸೇರಿದಂತೆ ಹಲವು ಕಲಾವಿದರು ಇದರಲ್ಲಿ ನಟಿಸಿದ್ದಾರೆ. ನೆಟ್‌ಫ್ಲಿಕ್ಸ್‌ನ ಮೊದಲ ಪಾಕಿಸ್ತಾನಿ ಮೂಲದ ಸರಣಿಯಾಗಿ ಇದನ್ನು ಡಿಸೆಂಬರ್ 4ರಿಂದ ಬಿಡುಗಡೆ ಮಾಡಲು ಯೋಜಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement