26/11 ದಾಳಿ ರೂವಾರಿ ಹಫೀಜ್ ಜೊತೆ ಪಾಕ್ ನಟನ Selfie: Netflix ವಿರುದ್ಧ ತಿರುಗಿಬಿದ್ದ ಭಾರತೀಯರು, 'Jo Bachay Hain Sang Samait Lo' ನಿಷೇಧಕ್ಕೆ ಆಗ್ರಹ..!

ಮುಂಬೈ/ನವದೆಹಲಿ: ಒಟಿಟಿ ದೈತ್ಯ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿರುವ ಪಾಕಿಸ್ತಾನಿ ವೆಬ್ ಸರಣಿ 'ಜೋ ಬಚೇ ಹೈಂ ಸಂಗ್ ಸಮೇಟ್ ಲೋ' ಈಗ ಭಾರೀ ವಿವಾದದ ಸುಳಿಯಲ್ಲಿ ಸಿಲುಕಿದೆ.
ಈ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪಾಕಿಸ್ತಾನಿ ನಟ ಹಮ್ಜಾ ಅಲಿ ಅಬ್ಬಾಸಿ ಅವರು 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ಮೈಂಡ್ ಹಾಗೂ ಉಗ್ರ ಹಫೀಜ್ ಸಯೀದ್ ಜೊತೆ ತೆಗೆಸಿಕೊಂಡಿದ್ದ 2017ರ ಹಳೆಯ ಸೆಲ್ಫಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ವೆಬ್ ಸರಣಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
2017ರಲ್ಲಿ ಹಮ್ಜಾ ಅಲಿ ಅಬ್ಬಾಸಿ ಅವರು 26/11 ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ಜೊತೆಗಿನ ಸೆಲ್ಫಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಆಗ ಸಯೀದ್ ಅವರನ್ನು 'ಅತ್ಯಂತ ಒಳ್ಳೆಯ ವ್ಯಕ್ತಿಗಳಲ್ಲಿ ಒಬ್ಬರು' ಎಂದು ಬಣ್ಣಿಸಿದ್ದ ಅವರು, ಪಾಕಿಸ್ತಾನದಲ್ಲಿ ಅತಿ ಹೆಚ್ಚು ತಪ್ಪಾಗಿ ಅರ್ಥೈಸಲ್ಪಟ್ಟ ವ್ಯಕ್ತಿ ಎಂದೂ ಹೇಳಿದ್ದರು.
ಅಬ್ಬಾಸಿ ಅವರ ಎಕ್ಸ್ ಖಾತೆ ಭಾರತದಲ್ಲಿ ನಿರ್ಬಂಧಿತವಾಗಿರುವುದರಿಂದ, ಅವರ ಹಳೆಯ ಪೋಸ್ಟ್ನ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ನೆಟ್ಫ್ಲಿಕ್ಸ್ ವಿರುದ್ಧ ಕಿಡಿಕಾರಿರುವ ಒಬ್ಬ ಬಳಕೆದಾರ, "ನಿಮ್ಮ ವೇದಿಕೆಯಲ್ಲಿ ಭಯೋತ್ಪಾದಕರನ್ನು ಪ್ರಚಾರ ಮಾಡುತ್ತಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.
ನಟ ಎಂದು ಹೇಳಿಕೊಳ್ಳುವ ಹಮ್ಜಾ ಅಲಿ ಅಬ್ಬಾಸಿ, ಜಾಗತಿಕವಾಗಿ ಗುರುತಿಸಲ್ಪಟ್ಟ ಉಗ್ರ ಹಫೀಜ್ ಸಯೀದ್ ಅವರನ್ನು ಬಹಿರಂಗವಾಗಿ ಬೆಂಬಲಿಸಿ ಸಮರ್ಥಿಸಿಕೊಂಡಿದ್ದಾರೆ. ಈಗ ಭಯೋತ್ಪಾದಕರಿಗೆ ಮಾನವೀಯತೆಯ ವಿರುದ್ಧ ಪ್ರಚಾರ ಮಾಡಲು ವೇದಿಕೆ ಕಲ್ಪಿಸಲಾಗುತ್ತಿದೆಯೇ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಇನ್ನೊಬ್ಬ ಬಳಕೆದಾರ, 26/11 ದಾಳಿಯ ಸಂಚುಕೋರ ಹಫೀಜ್ ಸಯೀದ್ ಜೊತೆಗಿರುವ ಪಾಕಿಸ್ತಾನಿ ಸರಣಿಯ ಪ್ರಮುಖ ನಟ ಹಮ್ಜಾ ಅಲಿ ಅಬ್ಬಾಸಿ ಅವರ ಫೋಟೋ ನೋಡಿದರೆ ಆಘಾತವಾಗುತ್ತದೆ. ಹಫೀಜ್ ಸಯೀದ್ ಅಭಿಮಾನಿಯಾಗಿರುವ ನಟನನ್ನು ಒಳಗೊಂಡ ಪಾಕಿಸ್ತಾನಿ ನೆಟ್ಫ್ಲಿಕ್ಸ್ ಸರಣಿಯನ್ನು ಪ್ರಚಾರ ಮಾಡುತ್ತಿರುವುದಕ್ಕೆ ಫಿಲ್ಮ್ಫೇರ್ ನಾಚಿಕೆಪಡಬೇಕು ಎಂದು ಟೀಕಿಸಿದ್ದಾರೆ.
ಮತ್ತೊಬ್ಬರು, ಜಾಗತಿಕವಾಗಿ ಗುರುತಿಸಲ್ಪಟ್ಟ ಉಗ್ರ ಹಫೀಜ್ ಸಯೀದ್ನ ಅಭಿಮಾನಿಯಾಗಿರುವ ಹಮ್ಜಾ ಅಲಿ ಅಬ್ಬಾಸಿ ಕೂಡ ಈ ಸರಣಿಯಲ್ಲಿದ್ದಾರೆ. ಇವರಿಗೆ ಏನಾಗಿದೆ?" ಎಂದು ಬರೆದುಕೊಂಡಿದ್ದಾರೆ.
ಈ ಟೀಕೆಗಳು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಪಾಕಿಸ್ತಾನದ ಕೆಲ ಬಳಕೆದಾರರೂ ಸರಣಿಯಲ್ಲಿ ಅಬ್ಬಾಸಿ ಅವರನ್ನು ಸೇರಿಸಿಕೊಂಡಿರುವುದಕ್ಕೆ ನೆಟ್ಫ್ಲಿಕ್ಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ವಕೀಲ ಹಾಗೂ ಲೇಖಕ ಮುನೀಬ್ ಖಾದಿರ್, ಅಬ್ಬಾಸಿ ಅವರ ಫೋಟೋ ವಿಚಾರದಲ್ಲಿ ಭಾರತೀಯ ಸಾಮಾಜಿಕ ಜಾಲತಾಣ ಬಳಕೆದಾರರು ವ್ಯಕ್ತಪಡಿಸಿರುವ ಆಕ್ಷೇಪಕ್ಕೆ ತಾನು ಸಹಮತ ಹೊಂದಿರುವುದಾಗಿ ಹೇಳಿದ್ದಾರೆ.
ವಿಶ್ವಸಂಸ್ಥೆಯೇ ಜಾಗತಿಕ ಮಟ್ಟದಲ್ಲಿ ಖಂಡಿಸಿರುವ ವ್ಯಕ್ತಿಯೊಂದಿಗೆ ಅವರು ಏಕೆ ಫೋಟೋ ತೆಗೆಸಿಕೊಂಡಿದ್ದರು ಎಂಬುದಕ್ಕೆ ಹಮ್ಜಾ ಅಲಿ ಅಬ್ಬಾಸಿ ಸ್ಪಷ್ಟನೆ ನೀಡಬೇಕು. ಇಂತಹ ವ್ಯಕ್ತಿಯನ್ನು ಹೊಗಳಿದ್ದಕ್ಕಾಗಿ ಅವರು ಕ್ಷಮೆಯಾಚಿಸಬೇಕು ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದಿದ್ದಾರೆ.
ಮತ್ತೊಬ್ಬ ಪಾಕಿಸ್ತಾನಿ ಬಳಕೆದಾರ, ವಿಶ್ವಸಂಸ್ಥೆಯಿಂದ ಉಗ್ರ ಎಂದು ಘೋಷಿಸಲ್ಪಟ್ಟಿರುವ, ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಸಂಸ್ಥಾಪಕ ಹಾಗೂ 26/11 ದಾಳಿಯ ಸಂಚುಕೋರ ಹಫೀಜ್ ಸಯೀದ್ ಜೊತೆ ಹಮ್ಜಾ ಅಲಿ ಅಬ್ಬಾಸಿ ಫೋಟೋ ತೆಗೆಸಿಕೊಂಡಿದ್ದರು.
ಅವರನ್ನು ಅತ್ಯಂತ ಒಳ್ಳೆಯ, ವಿನಯಶೀಲ ವ್ಯಕ್ತಿ ಎಂದು ಹೊಗಳಿ, ಸಹಿಷ್ಣುತೆ ಮತ್ತು ಮಾನವೀಯತೆಯನ್ನು ಉತ್ತೇಜಿಸುವವರು ಎಂದಿದ್ದರು. ಈಗ ಅದೇ ನಟ ಡಿಸೆಂಬರ್ 4ರಂದು ಬಿಡುಗಡೆಯಾಗಲಿರುವ ನೆಟ್ಫ್ಲಿಕ್ಸ್ನ ಪಾಕಿಸ್ತಾನಿ ಸರಣಿ 'ಜೋ ಬಚೇ ಹೈ ಸಂಗ್ ಸಮೇಟ್ ಲೋ'ದಲ್ಲಿ ನಟಿಸುತ್ತಿದ್ದಾರೆ. ಮಾತಿನಲ್ಲಿ ಸಹಿಷ್ಣುತೆ, ಆದರೆ ಉಗ್ರನಿಗೆ ವೇದಿಕೆ. ಇದೇ ದ್ವಂದ್ವ ನಿಲುವು ಎಂದು ಟೀಕಿಸಿದ್ದಾರೆ.
ಹಮ್ಜಾ ಅಲಿ ಅಬ್ಬಾಸಿ ಹಫೀಜ್ ಸಯೀದ್ ಜೊತೆ ಫೋಟೋ ತೆಗೆಸಿಕೊಂಡಿದ್ದೇಕೆ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
'ಜೋ ಬಚೇ ಹೈ ಸಂಗ್ ಸಮೇಟ್ ಲೋ' ಸರಣಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ 'ಆಲ್ ದ ಲವ್ ಅವರ್ ಹಾರ್ಟ್ಸ್ ಕ್ಯಾರಿ' ಎಂಬ ಹೆಸರಿನಲ್ಲಿಯೂ ಪ್ರಚಾರ ಮಾಡಲಾಗುತ್ತಿದೆ.
ಪಾಕಿಸ್ತಾನಿ ಲೇಖಕಿ ಫರ್ಹತ್ ಇಶ್ತಿಯಾಕ್ ಅವರ ಇದೇ ಹೆಸರಿನ ಜನಪ್ರಿಯ ಉರ್ದು ಕಾದಂಬರಿಯನ್ನು ಆಧರಿಸಿ ಈ ಪ್ರೇಮಕಥಾ ಸರಣಿ ನಿರ್ಮಿಸಲಾಗಿದೆ. ಫವಾದ್ ಖಾನ್, ಮಹಿರಾ ಖಾನ್, ಸನಮ್ ಸಯೀದ್, ಅಹದ್ ರಜಾ ಮೀರ್, ಹಾನಿಯಾ ಆಮಿರ್, ಹಮ್ಜಾ ಅಲಿ ಅಬ್ಬಾಸಿ, ಇಕ್ರಾ ಅಜೀಜ್, ಮಾಯಾ ಅಲಿ ಮತ್ತು ಬಿಲಾಲ್ ಅಶ್ರಫ್ ಸೇರಿದಂತೆ ಹಲವು ಖ್ಯಾತ ಕಲಾವಿದರು ಇದರಲ್ಲಿ ನಟಿಸಿದ್ದಾರೆ.
ನೆಟ್ಫ್ಲಿಕ್ಸ್ನ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ವಿಭಾಗ ಈ ಸರಣಿಗೆ ಅನುಮೋದನೆ ನೀಡಿದ್ದು, ಪಾಕಿಸ್ತಾನ, ಇಟಲಿ ಮತ್ತು ಬ್ರಿಟನ್ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಡಿಸೆಂಬರ್ 4ರಂದು ಜಾಗತಿಕ ಮಟ್ಟದಲ್ಲಿ ಸರಣಿ ಬಿಡುಗಡೆಯಾಗಲಿದೆ.
ಆದರೆ, ಭಾರತದಲ್ಲಿ ಪಾಕಿಸ್ತಾನಿ ಮೂಲದ ಯಾವುದೇ ವಿಷಯ ಪ್ರಸಾರವಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ನೆಟ್ಫ್ಲಿಕ್ಸ್ಗೆ ಸೂಚಿಸಿದೆ.
ಭಾರತದಲ್ಲಿ ಈ ಸರಣಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಕುರಿತು ಹಲವು ದೂರುಗಳು ಮತ್ತು ಮನವಿಗಳು ಬಂದ ಹಿನ್ನೆಲೆಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಸೂಚನೆ ನೀಡಿದೆ.
ಮೂಲಗಳ ಪ್ರಕಾರ, ಮೇ 8, 2025ರಂದು ಹೊರಡಿಸಿದ್ದ ಸಲಹಾ ಸೂಚನೆಯನ್ನು ಪಾಲಿಸುವಂತೆ ಸಚಿವಾಲಯ ನೆಟ್ಫ್ಲಿಕ್ಸ್ಗೆ ತಿಳಿಸಿದೆ. ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಓಟಿಟಿ ವೇದಿಕೆಗಳು, ಮಾಧ್ಯಮ ಪ್ರಸಾರ ಸೇವೆಗಳು ಮತ್ತು ಡಿಜಿಟಲ್ ಮಧ್ಯವರ್ತಿಗಳು ಪಾಕಿಸ್ತಾನ ಮೂಲದ ವಿಷಯಗಳ ಪ್ರಸಾರವನ್ನು ಸ್ಥಗಿತಗೊಳಿಸಬೇಕು ಎಂದು ಈ ಸೂಚನೆಯಲ್ಲಿ ನಿರ್ದೇಶಿಸಲಾಗಿತ್ತು.
ರಾಷ್ಟ್ರೀಯ ಭದ್ರತೆಯ ಕಾಳಜಿಯನ್ನು ಉಲ್ಲೇಖಿಸಿ ಹೊರಡಿಸಲಾಗಿದ್ದ ಈ ಸೂಚನೆಯು, 2025ರ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾದ ಸಂದರ್ಭದಲ್ಲಿ ಜಾರಿಗೆ ಬಂದಿತ್ತು.
ಇನ್ನು, ಭಾರತದಲ್ಲಿ ಪಾಕಿಸ್ತಾನ ಮೂಲದ ಯಾವುದೇ ಸಿನಿಮಾ ಅಥವಾ ಸರಣಿಯನ್ನು ತನ್ನ ಚಂದಾದಾರರಿಗೆ ಲಭ್ಯವಾಗುವಂತೆ ಮಾಡಿಲ್ಲ ಎಂದು ನೆಟ್ಫ್ಲಿಕ್ಸ್ ಕಳೆದ ವರ್ಷದ ಜೂನ್ನಲ್ಲಿ ಸಚಿವಾಲಯಕ್ಕೆ ತಿಳಿಸಿತ್ತು. ಈ ಹಿಂದಿನ ಬದ್ಧತೆಗೆ ನೆಟ್ಫ್ಲಿಕ್ಸ್ ಬದ್ಧವಾಗಿರಬೇಕು ಮತ್ತು ಅಂದು ತಿಳಿಸಿದ್ದ ನಿಲುವನ್ನು ಮುಂದುವರಿಸಬೇಕು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



