ತಮ್ಮ ಚೊಚ್ಚಲ ಚಿತ್ರ 'ತತ್ಸಮ ತದ್ಭವ'ದ ಮೂಲಕ ವಿಮರ್ಶಕರ ಮೆಚ್ಚುಗೆ ಗಳಿಸಿದ್ದ ನಿರ್ದೇಶಕ ವಿಶಾಲ್ ಆತ್ರೇಯ, 'ಆಕ್ಷನ್ ಪ್ರಿನ್ಸ್' ಧ್ರುವ ಸರ್ಜಾ ಅವರೊಂದಿಗೆ ಹೊಸ ಚಿತ್ರವೊಂದರ ಕುರಿತು ಮಾತುಕತೆ ನಡೆಸುತ್ತಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು.
ಇದೀಗ ಈ ಪ್ಲಾನ್ ಫೈನಲ್ ಆಗಿದ್ದು ಇಬ್ಬರು ಸೇರಿ ಒಂದು ಪೂರ್ಣ ಪ್ರಮಾಣದ ಮನರಂಜನಾತ್ಮಕ ಚಿತ್ರವನ್ನು (complete entertainer) ನೀಡಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಧ್ರುವ ಅವರ ಆಕ್ಷನ್ ಪಾತ್ರಗಳಿಂದ ಭಿನ್ನವಾಗಿ, ಈ ಚಿತ್ರದಲ್ಲಿ ಅವರನ್ನು ಹೊಸ ಶೈಲಿಯಲ್ಲಿ ತೋರಿಸಲು ಯೋಜಿಸಲಾಗಿದೆ. 'ಪೀಪಲ್ ಮೀಡಿಯಾ ಫ್ಯಾಕ್ಟರಿ' ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವ ಪ್ರಸಾದ್ ನಿರ್ಮಿಸುತ್ತಿರುವ ಈ ಬೃಹತ್ ಯೋಜನೆಯ ಅಧಿಕೃತ ಘೋಷಣೆಯು ಧ್ರುವ ಸರ್ಜಾ ಅವರ ಹುಟ್ಟುಹಬ್ಬದಂದು ವಿಶೇಷ ಉಡುಗೊರೆಯಾಗಿ ಹೊರಬರಲಿದೆ.
ಈ ಸಿನಿಮಾ ಮೂಲಕ ನಭಾ ನಟೇಶ್ ಅವರ ಕನ್ನಡ ಚಿತ್ರರಂಗಕ್ಕೆ ಮರುಪ್ರವೇಶಿಸುತ್ತಿದ್ದಾರೆ. 2015ರಲ್ಲಿ 'ವಜ್ರಕಾಯ'ದಲ್ಲಿ ಶಿವರಾಜ್‌ಕುಮಾರ್ ಅವರಿಗೆ ನಾಯಕಿಯಾಗಿ ನಟಿಸುವ ಮೂಲಕ ನಭಾ ನಟೇಶ್ ಚೊಚ್ಚಲ ಪ್ರವೇಶ ಮಾಡಿದ್ದರು.
ಎ. ಹರ್ಷ ನಿರ್ದೇಶನದ ಈ ಚಿತ್ರವು ಅವರಿಗೆ "ಪಟಾಕ ಹುಡುಗಿ" ಎಂಬ ಜನಪ್ರಿಯ ಹಣೆಪಟ್ಟಿಯನ್ನು ತಂದುಕೊಟ್ಟಿತ್ತು. ನಂತರ ಅವರು 'ಲೀ' ಎಂಬ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸಿದರು. ತದನಂತರ ತೆಲುಗು ಚಿತ್ರರಂಗದತ್ತ ಮುಖಮಾಡಿದ ಅವರು, 'ನನ್ನು ದೋಚುಕುಂದುವಟೆ' ಚಿತ್ರದ ಮೂಲಕ ದೊಡ್ಡ ಯಶಸ್ಸನ್ನು ಕಂಡರು.
ನಂತರ ಪುರಿ ಜಗನ್ನಾಥ್ ಅವರ 'ಇಸ್ಮಾರ್ಟ್ ಶಂಕರ್' ಚಿತ್ರದಲ್ಲಿ ನಟಿಸಿದರು. ನಭಾ ಅವರು 'ಸೋಲೋ ಬ್ರತುಕೆ ಸೋ ಬೆಟರ್', 'ಡಿಸ್ಕೋ ರಾಜ', 'ಅಲ್ಲುಡು ಅಧುರ್ಸ್', 'ಮೇಸ್ಟ್ರೋ' ಮತ್ತು 'ಡಾರ್ಲಿಂಗ್' ಸೇರಿದಂತೆ ಹಲವು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಇತ್ತೀಚಿನ ಚಿತ್ರಗಳಲ್ಲಿ 'ನಗಬಂಧಮ್: ದಿ ಸೀಕ್ರೆಟ್ ಟ್ರೆಷರ್' ಮತ್ತು 'ಸ್ವಯಂಭು' ಸೇರಿವೆ. ಕಳೆದ ಕೆಲವು ವರ್ಷಗಳಲ್ಲಿ, ಅವರು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ವಿವಿಧ ಪ್ರಕಾರದ ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.