ಪ್ರೇಮದ ಊರಲಿ ಚಿತ್ರ 
ಸಿನಿಮಾ ಸುದ್ದಿ

Silent ಆಗಿ ಕ್ರಾಂತಿ ಸೃಷ್ಟಿಸುತ್ತಿರುವ ‘ಪ್ರೇಮದ ಊರಲಿ’ ಚಿತ್ರ: ದೊಡ್ಡ ಸ್ಟಾರ್‌ಗಳಿಲ್ಲದಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು, ಏನಿದರ ಗೆಲುವಿನ ಗುಟ್ಟು..?

ಬಿಡುಗಡೆಯಾದ ಮೊದಲ ದಿನ ಕೇವಲ 45 ಶೋಗಳನ್ನು ಹೊಂದಿದ್ದ ಈ ಚಿತ್ರ, ಸದ್ಯ ಪ್ರೇಕ್ಷಕರ ಅಭೂತಪೂರ್ವ ಬೆಂಬಲದಿಂದಾಗಿ ಕರ್ನಾಟಕದಾದ್ಯಂತ ದಿನಕ್ಕೆ 450 ಕ್ಕೂ ಹೆಚ್ಚು ಶೋಗಳನ್ನು ಕಾಣುವ ಮೂಲಕ ದಾಖಲೆ ಬರೆದಿದೆ.

Manjula VN

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸದ್ಯ ‘ಪ್ರೇಮದ ಊರಲಿ’ ಸಿನಿಮಾದ್ದೇ ಕಾರುಬಾರು. ಯಾವುದೇ ದೊಡ್ಡ ಸ್ಟಾರ್ ನಟರಿಲ್ಲದೆ, ಅಬ್ಬರದ ಪ್ರಚಾರವೂ ಇಲ್ಲದೆ ಕಳೆದ ಸೆಪ್ಟೆಂಬರ್ 25 ರಂದು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದ ಈ ಪುಟ್ಟ ಸಿನಿಮಾ ಈಗ ಗಲ್ಲಾಪೆಟ್ಟಿಗೆಯಲ್ಲಿ ಸುನಾಮಿ ಎಬ್ಬಿಸಿದೆ.

ಸೆಪ್ಟೆಂಬರ್ 25ರಂದು ಯಾವುದೇ ಅಬ್ಬರವಿಲ್ಲದೆ ತೆರೆಕಂಡ ಚಿತ್ರಕ್ಕೆ ಆರಂಭದಲ್ಲಿ ಆತಂಕ ಎದುರಾದರೂ, ಬಾಯಿಮಾತಿನ ಪ್ರಚಾರದ ಮೂಲಕ ಪ್ರದರ್ಶನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು.

ಬಿಡುಗಡೆಯಾದ ಮೊದಲ ದಿನ ಕೇವಲ 45 ಶೋಗಳನ್ನು ಹೊಂದಿದ್ದ ಈ ಚಿತ್ರ, ಸದ್ಯ ಪ್ರೇಕ್ಷಕರ ಅಭೂತಪೂರ್ವ ಬೆಂಬಲದಿಂದಾಗಿ ಕರ್ನಾಟಕದಾದ್ಯಂತ ದಿನಕ್ಕೆ 450 ಕ್ಕೂ ಹೆಚ್ಚು ಶೋಗಳನ್ನು ಕಾಣುವ ಮೂಲಕ ದಾಖಲೆ ಬರೆದಿದೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಚಿತ್ರದ ನಿರ್ದೇಶಕ ಮನೋಜ್ ಕುಮಾರ್, ರಂಗಾಯಣ ರಘು ಸೇರಿದಂತೆ ಪ್ರಮುಖ ಕಲಾವಿದರು ‘ಪ್ರೇಮದ ಊರಲಿ’ ರೂಪುಗೊಂಡ ಹಿಂದಿನ ಕಷ್ಟ, ಭಾವನೆ ಮತ್ತು ಗೆಲುವಿನ ಕಥೆಯನ್ನು ಹಂಚಿಕೊಂಡಿದ್ದಾರೆ.

ದೊಡ್ಡ ತಾರೆಯರಿಲ್ಲದೆ, ಅಬ್ಬರದ ಪ್ರಚಾರವೂ ಇಲ್ಲದೆ ಬಿಡುಗಡೆಯಾಗುವ ಸಣ್ಣ ಕನ್ನಡ ಚಿತ್ರವೊಂದು ಸಾಮಾನ್ಯವಾಗಿ ಮೊದಲ ದಿನದ ಮಧ್ಯಾಹ್ನದ ವೇಳೆಗೆ ಸೋಲಿನ ಹಣೆಪಟ್ಟಿ ಹೊತ್ತುಕೊಳ್ಳುತ್ತದೆ. ಆದರೆ, ಜನರ ದೈನಂದಿನ ಬದುಕಿನ ನೆಲೆಯಿಂದ ಹುಟ್ಟಿದ ಪ್ರಾಮಾಣಿಕ ಕಥೆಯೊಂದು ಈ ಎಲ್ಲ ಲೆಕ್ಕಾಚಾರವನ್ನೇ ಬದಲಿಸಿದೆ.

ನಟ ರಂಗಾಯಣ ರಘು, ನಿರ್ದೇಶಕ ಮನೋಜ್ ಕುಮಾರ್, ನಾಯಕ ನಟ ಶ್ರೀರಾಮ್ (ಸಂತು), ರಾಮಿಕಾ ಶಿವು (ವಸಂತ) ಹಾಗೂ ತಪಸ್ವಿನಿ ಪೂಣಚ್ಚ (ರುಕ್ಮಿಣಿ) ಅವರು ನಡೆಸಿದ ಮುಕ್ತ ಸಂವಾದದಲ್ಲಿ, ಈ ಜನಮನ್ನಣೆ ಗಳಿಸಿದ ಚಿತ್ರವನ್ನು ಕಟ್ಟಿಕೊಟ್ಟ ಪರಿಶ್ರಮ, ಆತಂಕ ಹಾಗೂ ಕಲಾತ್ಮಕತೆಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಪ್ರಚಾರಕ್ಕೆ ಬಜೆಟ್ ಇಲ್ಲದಿರುವುದನ್ನು ಹೇಗೆ ಎದುರಿಸಿದಿರಿ? ಆ ಸಂದರ್ಭದಲ್ಲಿ ನಿಮ್ಮ ಮನಸ್ಸಿನಲ್ಲಿ ಏನಿತ್ತು?

ರಂಗಾಯಣ ರಘು: ಭಯ. ಸೆಪ್ಟೆಂಬರ್ 25ರಂದು ಇಡೀ ತಂಡ ನಿದ್ದೆಯಿಲ್ಲದೆ ಉಳಿದಿದ್ದ ಭರವಸೆಯನ್ನು ಹಿಡಿದುಕೊಂಡು ಕುಳಿತಿತ್ತು. ಪ್ರಚಾರಕ್ಕೆ ಹಣವಿಲ್ಲದ ಕಾರಣ, ಈ ಹುಡುಗರು ಮದುವೆ ಆಮಂತ್ರಣ ಪತ್ರಿಕೆಗಳ ರೀತಿಯಲ್ಲಿ ಕಾರ್ಡ್‌ಗಳನ್ನು ಮುದ್ರಿಸಿ, ಬಸ್ ಮತ್ತು ರೈಲುಗಳಲ್ಲಿ ಸಂಚರಿಸಿ, ಪ್ರಯಾಣಿಕರಿಗೆ ಅವುಗಳನ್ನು ಹಂಚಿ ಚಿತ್ರಕ್ಕೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಆಟೋರಿಕ್ಷಾಗಳಿಗೆ ಪೋಸ್ಟರ್‌ಗಳನ್ನು ಅಂಟಿಸಿದರು.

ಆ ಚಾಲಕರಿಗೆ ನಾವು ನಿಜವಾಗಿಯೂ ಋಣಿಯಾಗಿದ್ದೇವೆ. ಶುಕ್ರವಾರ ಬೆಳಗ್ಗೆ 10.30ಕ್ಕೆ ಯಾವುದೇ ಸದ್ದಿರಲಿಲ್ಲ. ಮಧ್ಯಾಹ್ನ 1.30ಕ್ಕೂ ಸಂಪೂರ್ಣ ಮೌನ. ಆದರೆ ಸಂಜೆ 6.30ರ ಪ್ರದರ್ಶನದ ವೇಳೆಗೆ ಬಾಯಿಮಾತಿನ ಪ್ರಚಾರ ಹೆಚ್ಚಾಯಿತು. ಆರಂಭದಲ್ಲಿ ಸುಮಾರು 60 ಕೇಂದ್ರಗಳಲ್ಲಿ ಪ್ರದರ್ಶನಗೊಂಡಿದ್ದ ಚಿತ್ರ ಭಾನುವಾರದ ವೇಳೆಗೆ 450 ಕೇಂದ್ರಗಳಿಗೆ ಏರಿತು. ದಾರಿ ತೆರವುಗೊಳಿಸಲು ಜೆಸಿಬಿಯಂತೆ ಜಯಣ್ಣ ಕಂಬೈನ್ಸ್ ತಂಡಕ್ಕೆ ಬೆಂಬಲವಾಗಿ ನಿಂತಿತು. ವಿತರಕ ಜಯಣ್ಣ ಅವರು, “ಅಕ್ಟೋಬರ್ 4ರವರೆಗೆ ಭಾನುವಾರದವರೆಗಿನ ಪ್ರತಿಯೊಂದು ಪ್ರದರ್ಶನವೂ ಹೌಸ್‌ಫುಲ್. ನಿಮಗೇ ಟಿಕೆಟ್ ಸಿಗುವುದಿಲ್ಲ” ಎಂದು ಹೇಳಿದರು.

ಎಲ್ಲರೂ ರಕ್ತಪಾತ ಮತ್ತು ಹಿಂಸೆಯತ್ತ ಸಾಗುತ್ತಿದ್ದಾಗ, ಕುಟುಂಬದ ಭಾವನೆಗಳನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರ ಮಾಡಲು ಹೇಗೆ ನಿರ್ಧರಿಸಿದಿರಿ?

ಮನೋಜ್ ಕುಮಾರ್: ‘ಅಕ್ಷಿ’ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಂತರವೂ ನನಗೆ ಕೆಲಸ ಸಿಗಲಿಲ್ಲ. ಕಲಾತ್ಮಕ ಚಿತ್ರ ನಿರ್ದೇಶಕನನ್ನು ಬೆಂಬಲಿಸಿದರೆ ಹಣ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಾವನೆ ಜನರಲ್ಲಿತ್ತು. ಆಗ ನಮ್ಮ ಸಹಲೇಖಕ ಹಾಗೂ ನಿರ್ಮಾಪಕ ದೇವೇಂದ್ರ ತಮ್ಮ ಉಳಿತಾಯದ ಹಣದೊಂದಿಗೆ ಮುಂದೆ ಬಂದರು. ನಾವು ಇಬ್ಬರೂ ಸೇರಿ ಚಿತ್ರಕಥೆ ಬರೆಯಲು ಆರಂಭಿಸಿದಾಗ ನನ್ನ ಆಯ್ಕೆ ಸ್ಪಷ್ಟವಾಗಿತ್ತು.

ಎಲ್ಲರೂ ರಕ್ತಪಾತ, ಮಚ್ಚು-ಕತ್ತಿ ಹಾಗೂ ಕತ್ತಲೆಯ ದೃಶ್ಯ ವಿನ್ಯಾಸದತ್ತ ಓಡುತ್ತಿರುವಾಗ, ನಾವು ಸ್ವಚ್ಛವಾದ, ಪ್ರಾಮಾಣಿಕ ಕುಟುಂಬದ ಭಾವನೆಗಳ ಮೂಲಕ ಈ ಆಟವನ್ನೇ ಬದಲಿಸಬೇಕು ಎಂದುಕೊಂಡೆವು. ಚಿತ್ರದಲ್ಲಿ ಒಂದೇ ಒಂದು ಹನಿ ರಕ್ತವಾಗಲಿ, ಅತಿರಂಜಿತ ಹಿಂಸೆಯಾಗಲಿ ಇರಬಾರದು ಎಂಬುದು ನಮ್ಮ ಉದ್ದೇಶವಾಗಿತ್ತು.

ವಸಂತ ಪಾತ್ರದ ಬಗ್ಗೆ ಹೇಳಬಹುದೇ?

ಮನೋಜ್ ಕುಮಾರ್: ಕುತೂಹಲದ ಸಂಗತಿಯೆಂದರೆ, ನಮ್ಮ ಮೊದಲ ಕರಡು ಕಥೆಯಲ್ಲಿ ವಸಂತ ಪಾತ್ರವೇ ಇರಲಿಲ್ಲ. ಸಂಪೂರ್ಣ ಕಥೆಯನ್ನು ಬರೆದ ನಂತರ ಏನೋ ಕೊರತೆಯಿದೆ ಎಂದೆನಿಸಿತು. ಆ ಮನೆಯಲ್ಲಿ ಯುವತಿಯೊಬ್ಬಳು ಇಲ್ಲದಿದ್ದರೆ ಮನೆಗೆ ಜೀವಂತಿಕೆ ಇಲ್ಲದಂತಾಗುತ್ತಿತ್ತು. ಕಥೆಯು ಕೇವಲ ತಂದೆ-ಮಗನ ಒಣ ಸಂಬಂಧಕ್ಕೆ ಸೀಮಿತವಾಗುತ್ತಿತ್ತು. ಹೀಗಾಗಿ ವಸಂತ ಪಾತ್ರ ಹುಟ್ಟಿಕೊಂಡಿತು.

ರಾಮಿಕಾ ಶಿವು: ನಾನು ವಸಂತಳನ್ನು ಒಬ್ಬ ವ್ಯಕ್ತಿಯ ಸಂಪೂರ್ಣ ಜೀವನಚಕ್ರದಂತೆ ನೋಡಿದೆ. ಪಂಚೆ-ಶರ್ಟ್ ಧರಿಸಿ ತುಂಟತನದಿಂದ ಆರಂಭವಾಗುವ ಆಕೆ, ಹದಿಹರೆಯದಲ್ಲಿ ಮೊದಲ ಪ್ರೀತಿಯ ಬಿರುಗಾಳಿಯನ್ನು ಎದುರಿಸುತ್ತಾಳೆ. ಇಪ್ಪತ್ತರ ಹರೆಯದಲ್ಲಿ ಸ್ವೀಕಾರದ ಹಂತ ತಲುಪಿ, ನಂತರ ಇತರರಿಗೆ ಮಾರ್ಗದರ್ಶನ ನೀಡುವ ಹಂತಕ್ಕೆ ಬರುತ್ತಾಳೆ. ಮಹಿಳೆಗೆ ತನ್ನ ಕುಟುಂಬದೊಂದಿಗೆ ಇರುವ ಬಾಂಧವ್ಯ ಬಹಳ ಆಳವಾದದ್ದು. ತಂದೆ-ತಾಯಿ ಕಣ್ಣೀರು ಹಾಕಿದರೆ, ಅವರ ನೆಮ್ಮದಿಗಾಗಿ ತನ್ನ ಸಂತೋಷವನ್ನೇ ತ್ಯಾಗ ಮಾಡಲು ಆಕೆ ಸಿದ್ಧಳಾಗುತ್ತಾಳೆ. ಕೆಲವೊಮ್ಮೆ ಪ್ರೇಕ್ಷಕರು ನನ್ನನ್ನು ‘ವಸಂತ’ ಎಂದು ಕರೆಯುತ್ತಾರೆ. ಆ ಗೌರವ ಗಳಿಸಿರುವುದು ನನಗೆ ತುಂಬಾ ಸಂತೋಷ ಕೊಡುತ್ತದೆ.

ನಾಯಕತ್ವವನ್ನು ದುರ್ಬಲತೆ ಮತ್ತು ಕ್ಷಮೆಯ ಮೂಲಕ ತೋರಿಸುವ ಬಗ್ಗೆ ಹೇಳಬಹುದೇ?

ಶ್ರೀರಾಮ್: ರಘು ಸರ್ ಅವರೊಂದಿಗೆ ಕೆಲಸ ಮಾಡಿದ್ದು ಸಂಪೂರ್ಣವಾಗಿ ಪಾತ್ರಕ್ಕೆ ಶರಣಾಗುವುದನ್ನು ಕಲಿಸಿತು. ಸಾಮಾನ್ಯವಾಗಿ ನಟರು ತಮ್ಮ ಸಂಭಾಷಣೆಗಳನ್ನು ಪದೇಪದೆ ಅಭ್ಯಾಸ ಮಾಡುತ್ತಾರೆ. ಆದರೆ. ಅವರೊಂದಿಗೆ ಕೆಲಸ ಮಾಡುವಾಗ ಖಾಲಿ ಹಾಳೆಯಂತೆ ಸೆಟ್‌ಗೆ ಬರಬೇಕು. ಅವರು ನಟಿಸುವುದಿಲ್ಲ; ಆ ಕ್ಷಣವನ್ನೇ ಬದುಕುತ್ತಾರೆ. ಅವರ ನಾಗಣ್ಣ ಪಾತ್ರ ಮಳೆ ಸುರಿಯುತ್ತಿರುವಾಗ ಕಲ್ಲಿನ ಬೆಂಚ್ ಮೇಲೆ ಕುಳಿತು ಯಾವುದೇ ನಾಟಕೀಯ ಸಂಭಾಷಣೆಯಿಲ್ಲದೆ ಮೌನವನ್ನು ಹಿಡಿದಿಟ್ಟುಕೊಳ್ಳುತ್ತದೆ. ನಾಯಕತ್ವ ಎಂದರೆ ಜೋರಾದ ಪಂಚ್‌ಲೈನ್‌ಗಳನ್ನು ಹೇಳುವುದಲ್ಲ, ಕೆಲವೊಮ್ಮೆ ಅದು ದುರ್ಬಲತೆಯನ್ನು ಒಪ್ಪಿಕೊಳ್ಳುವಲ್ಲಿ, ಕ್ಷಮಿಸುವಲ್ಲಿ ಮತ್ತು ಕಥೆಯ ಮೇಲಿನ ನಂಬಿಕೆಯಲ್ಲಿ ಅಡಗಿರುತ್ತದೆ ಎಂಬುದನ್ನು ಅವರಿಂದ ಕಲಿಯುತ್ತೀರಿ.

ಬಜೆಟ್ ಸಮಸ್ಯೆಗಳನ್ನು ಹೇಗೆ ನಿಭಾಯಿಸಿದಿರಿ?

ತಪಸ್ವಿನಿ ಪೂಣಚ್ಚ: ಅದು ನಿಜಕ್ಕೂ ಕಠಿಣ ಅನುಭವವಾಗಿತ್ತು. ಸಂಜೆ 6.30ರ ಸಮಯ, ಬೆಳಕು ಕಡಿಮೆಯಾಗುತ್ತಿತ್ತು. ನಾವು ಕೃತಕ ಮಳೆಗಾಗಿ ಬಳಸುತ್ತಿದ್ದ ನೀರು ಸಂಪೂರ್ಣ ಖಾಲಿಯಾಗಿತ್ತು. ಸ್ಥಳೀಯ ಗ್ರಾಮಸ್ಥರು ತಮ್ಮ ಕೊಳವೆಬಾವಿಯಿಂದ ನೀರು ಪಂಪ್ ಮಾಡಿ ನಮಗೆ ಸಹಾಯ ಮಾಡಿದರು. ಅದೇ ಸಂದರ್ಭದಲ್ಲಿ ಮನೋಜ್ ಸರ್ ತಮ್ಮ ತಾಯಿಗೆ ಕರೆ ಮಾಡಲು ಪಕ್ಕಕ್ಕೆ ಹೋದರು. ನಾನು ಮತ್ತು ಶ್ರೀರಾಮ್ ಅವರು ಮಾತನಾಡಿದ್ದನ್ನು ಕೇಳಿಸಿಕೊಂಡೆವು. “ನಾಳೆ ತಾಳಿ ಸರ ಒತ್ತೆ ಇಡಲು ಸಿದ್ಧವಾಗಿಟ್ಟುಕೋ. ಇಂದಿನ ಬಜೆಟ್ ಮುಗಿದಿದೆ. ಈಗಲೇ ಈ ದೃಶ್ಯವನ್ನು ಚಿತ್ರೀಕರಿಸದಿದ್ದರೆ ಶೂಟಿಂಗ್ ವಿಸ್ತರಿಸಬೇಕಾಗುತ್ತದೆ” ಎಂದು ಅವರು ತಾಯಿಗೆ ಹೇಳುತ್ತಿದ್ದರು. ಅದು ನಮ್ಮನ್ನು ಭಾವನಾತ್ಮಕವಾಗಿ ಕುಗ್ಗಿಸಿತು.

ಸರ್ ನನಗೆ ರುಕ್ಮಿಣಿಯ ಕಣ್ಣೀರು ಹರಿಯಬಾರದು, ಕಣ್ಣಿನಲ್ಲೇ ತುಂಬಿ ನಿಲ್ಲಬೇಕು ಎಂದು ಹೇಳಿದ್ದರು. ಆ ಒಂದೇ ಟೇಕ್‌ನಲ್ಲಿ ಮಳೆ, ಕ್ಯಾಮೆರಾ ಕೋನಗಳು ಹಾಗೂ ನಮ್ಮ ಭಾವನೆಗಳು ಒಂದೇ ಸಮಯದಲ್ಲಿ ಸರಿಯಾಗಿ ಹೊಂದಿಕೊಂಡವು. ಅವರು ‘ಕಟ್’ ಎಂದು ಹೇಳಿ ನಮ್ಮನ್ನು ಅಪ್ಪಿಕೊಂಡು, ತಮ್ಮ ತಾಯಿಗೆ “ತಾಳಿ ಸರವನ್ನು ಇಟ್ಟುಕೋ, ಒಂದೇ ಟೇಕ್‌ನಲ್ಲಿ ಮುಗಿಸಿದ್ದೇವೆ” ಎಂದು ಹೇಳಿದಾಗ ನನಗೆ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲಾಗದೆ ಅಳಲು ಬಂತು.

ಸಿನಿಮಾ ನೈತಿಕ ಪಾಠಗಳನ್ನು ನೀಡುವ ಹೊಣೆ ಹೊತ್ತಿರಬೇಕು ಎಂದು ನೀವು ಭಾವಿಸುತ್ತೀರಾ?

ರಂಗಾಯಣ ರಘು: ಸಿನಿಮಾದ ನೈತಿಕತೆಯನ್ನು ದಪ್ಪ ಮಾರ್ಕರ್‌ನಿಂದ ಅಂಡರ್‌ಲೈನ್ ಮಾಡಿದ ಕ್ಷಣವೇ ಸಿನಿಮಾ ಸಾಯುತ್ತದೆ. ಪಾತ್ರಗಳು ಸಹಜವಾಗಿ ಬದುಕಲು ಬಿಡಬೇಕು. ಶಿಕ್ಷಣ ಎಂದರೆ ಲಂಡನ್‌ಗೆ ಓಡಿ ಹೋಗುವುದು ಅಥವಾ ನಗರದಲ್ಲಿ ಉದ್ಯೋಗ ಹುಡುಕುವುದು ಎಂದೇ ಏಕೆ ಆಗಬೇಕು? ಗ್ರಾಮೀಣ ಮನೆಯನ್ನು ನಡೆಸುತ್ತಾ ಸ್ಥಳೀಯ ತಾಲೂಕು ಕಚೇರಿಯಲ್ಲೂ ಗೌರವ ಗಳಿಸುವ ವಿದ್ಯಾವಂತ ಮಹಿಳೆ ವ್ಯವಸ್ಥೆಗೆ ನಿಜವಾದ ಘನತೆಯನ್ನು ತರುತ್ತಾಳೆ. ಮಂಡ್ಯ ಅಥವಾ ಸಕಲೇಶಪುರದ ವಾಸ್ತವ ಸ್ಥಿತಿಯನ್ನು ನೋಡಿ. 30 ಎಕರೆ ಕಾಫಿ ತೋಟ ಹೊಂದಿರುವ ಪುರುಷರು ಕೇವಲ ತಾವು ರೈತರು ಎಂಬ ಕಾರಣಕ್ಕೆ ಮದುವೆಗೆ ಹೆಣ್ಣು ಸಿಗದೆ ಪರದಾಡುವ ಪರಿಸ್ಥಿತಿಯೂ ಇದೆ.

ನಮ್ಮದೇ ಕಥೆಗಳನ್ನು ಹೇಳುವುದು ಏಕೆ ಮುಖ್ಯ ಎಂದು ನೀವು ಭಾವಿಸುತ್ತೀರಿ?

ರಂಗಾಯಣ ರಘು: ಹಾಲಿವುಡ್ ತನ್ನ ಸಂಸ್ಕೃತಿಯ ಕಥೆಗಳನ್ನು ಹೇಳುತ್ತದೆ. ಬಾಲಿವುಡ್ ತನ್ನದೇ ಕಥೆಗಳನ್ನು ಹೇಳುತ್ತದೆ. ಹಾಗಿರುವಾಗ ನಾವು ಅವರು ಮಾಡುವುದನ್ನೇ ಏಕೆ ಬೆನ್ನಟ್ಟಬೇಕು? ನಮ್ಮದೇ ಕಥೆಗಳನ್ನು ಹೇಳಿ. ನಮ್ಮ ನೆಲ, ಭಾಷೆ ಮತ್ತು ಜನರೊಂದಿಗೆ ಆಳವಾಗಿ ಬೆಸೆದುಕೊಂಡಿರುವ ಸಿನಿಮಾಗಳನ್ನು ಮಾಡಿ. ಅದನ್ನು ಪ್ರಾಮಾಣಿಕತೆಯಿಂದ ಮಾಡಿದಾಗ ಪ್ರೇಕ್ಷಕರು ಅದಕ್ಕೆ ದುಪ್ಪಟ್ಟು ಪ್ರೀತಿಯನ್ನು ನೀಡುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಳ್ಳಾರಿಯಲ್ಲಿ ತೀವ್ರಗೊಂಡ SIR ಸಂಘರ್ಷ: ಬೂತ್ ಮಟ್ಟದ ಬಿಜೆಪಿ ಏಜೆಂಟ್ ವಿರುದ್ಧ Search warrant!

ಏಷ್ಯನ್ ಗೇಮ್ಸ್‌ 2026: ಭಾರತ ಚಿನ್ನದ ಪದಕ ಗೆದ್ದ ಬಳಿಕ ಜಪಾನ್‌ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ ಭಾರತೀಯ ಅಭಿಮಾನಿಗಳು! Video

'It Was Scripted': ದೇಶದಲ್ಲಿ ಈಗ ಶಾಂತಿಯ ಅನುಭವವಾಗುತ್ತಿಲ್ಲ, ಹೇಳಿಕೆಗೆ ಸ್ಪಷ್ಟನೆ ಕೊಟ್ಟ ಸಂಜಯ್ ದತ್!

ಕಳ್ಳತನಕ್ಕೆ ‘ಶಾಪದ ಶಿಕ್ಷೆ’: ಬಳ್ಳಾರಿಯಲ್ಲಿ ಅಪರೂಪದ ಶಾಸನ ಪತ್ತೆ..!

SIR Row: ನೋಟಿಸ್ ನೀಡದೆ, ವಿಚಾರಣೆಯಿಲ್ಲದೆ ಮತದಾರರ ಹೆಸರು ತೆಗೆದುಹಾಕುವಂತಿಲ್ಲ- ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್!