ಬೆಂಗಳೂರು: ಬಿಗ್ ಬಾಸ್ ಕನ್ನಡ ಮನೆಯಲ್ಲಿ ದಿನದಿಂದ ದಿನಕ್ಕೆ ಗಲಾಟೆಗಳು ಹೆಚ್ಚಾಗುತ್ತಿದ್ದು, ಸ್ಪರ್ಧಿಗಳ ನಡುವಿನ ವಾಗ್ವಾದ ಈಗ ಅವಾಚ್ಯ ಪದಗಳ ಬಳಕೆಯವರೆಗೂ ತಲುಪಿದೆ.
ಈ ವಾರದ ಪಂಚಾಯ್ತಿ ನಡೆಸಲು ಬಿಗ್ ಬಾಸ್ ವೇದಿಕೆಗೆ ಕಿಚ್ಚ ಸುದೀಪ್ ಅವರ ಆಗಮನವಾಗಿದ್ದು, ಈ ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಸುದೀಪ್ ಅವರು ಮಾತನಾಡಿದ್ದಾರೆ.
ಈ ನಡುವೆ ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊ ಹಂಚಿಕೊಂಡಿದ್ದು, ಬಿಗ್‌ಬಾಸ್ ಮನೆಯಿಂದ ಮಂಜುನಾಥ್ ಹೊರಬಂದಿರುವುದು ಕಂಡು ಬಂದಿದೆ.
ಅವಾಚ್ಯ ಪದಗಳ ಬಳಕೆ, ಅತಿರೇಕದ ವರ್ತನೆಯಿಂದಾಗಿ ಬಿಗ್‌ಬಾಸ್ ಮನೆಯ ಮಾಡರ್ನ್ ಮಹಾಕವಿ ಮಂಜುನಾಥ್ ಹೊರಗೆ ಬಂದಿದ್ದಾರೆ ಎನ್ನಲಾದ ಪ್ರೋಮೋ ಬಿಡುಗಡೆಯಾಗಿದೆ.
ಮೂಲ ನಿಯಮಗಳ ಉಲ್ಲಂಘನೆಯ ಕಾರಣಗಳನ್ನು ನೀಡಿ ಮನೆಯಿಂದ ಹೊರಗೆ ಬರುವಂತೆ ಸೂಚಿಸಲಾಗಿದೆ. ಹಾಗೆಯೇ ಮಂಜು ಸಹ ಮುಖ್ಯದ್ವಾರದಿಂದ ಹೊರಗೆ ಬಂದಿದ್ದಾರೆ.
ಶನಿವಾರದ ವೀಕೆಂಡ್ ಪಂಚಾಯ್ತಿ ಬಳಿಕ ಈ ಪ್ರಕ್ರಿಯೆ ನಡೆದಿದ್ದು, ನಿಜವಾಗ್ಲೂ ಮಂಜುನಾಥ್ ಮನೆಯಿಂದ ಹೊರಗೆ ಬಂದ್ರಾ ಎಂಬುದರ ಬಗ್ಗೆ ಇನ್ನೂ ಪ್ರೇಕ್ಷಕರಲ್ಲಿ ಗೊಂದಲಗಳಿವೆ.
ಮತ್ತೊಂದು ಕಡೆ ಬಿಗ್‌ಬಾಸ್ ಮನೆಯ ಸೂಚನೆಯನ್ನು ಕೇಳಿಸಿಕೊಂಡು ಇನ್ನುಳಿದ ಸ್ಪರ್ಧಿಗಳು,ಸಂತೋಷದಿಂದ ಒಬ್ಬರಿಗೊಬ್ಬರು ತಬ್ಬಿಕೊಂಡು ನಿಟ್ಟಿಸಿರು ಬಿಟ್ಟಿರುವುದು ವೀಡೀಯೋದಲ್ಲಿ ಕಂಡು ಬಂದಿದೆ.
ಇತ್ತ ಮಂಜು ಜೊತೆಯಲ್ಲಿ ನೇರವಾಗಿ ಕಣಕ್ಕಿಳಿದಿದ್ದ ಯಶಸ್, ಸಿಹಿ ತಿನ್ನುವ ಮೂಲಕ ಆ ಕ್ಷಣವನ್ನು ಸಂಭ್ರಮಿಸಿದ್ದಾರೆ.
ಇನ್ನುಳಿದಂತೆ ಮಂಜು ಜೊತೆ ಆಟದ ಹೊರತಾಗಿ ಉತ್ತಮ ಒಡನಾಟ ಹೊಂದಿದ್ದ ಸ್ಪರ್ಧಿಗಳು ಬೇಸರದ ಜೊತೆ ಶಾಕ್ ಹೊರಗೆ ಹಾಕಿದ್ದಾರೆ. ಆದರೆ, ಈ ಪ್ರೋಮೋ ಎಷ್ಟು ಸತ್ಯ ಎಂಬುದರ ಬಗ್ಗೆ ವೀಕ್ಷಕರಲ್ಲಿ ಗೊಂದಲಗಳಿವೆ. ಕೆಲವರು ಮಂಜುನಾಥ್ ಅವರು ಸೀಕ್ರೆಟ್ ರೂಮ್ ನಲ್ಲಿರಬಹುದು ಎಂದು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.