ಬೆಂಗಳೂರು: ಕನ್ನಡ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 13' ರಂಗೇರುತ್ತಿದ್ದು, ದೊಡ್ಮನೆಯಲ್ಲಿ ಪ್ರತಿದಿನವೂ ಹೊಸ ಬಿರುಗಾಳಿ ಏಳುತ್ತಿದೆ.
ಇತ್ತೀಚಿನ 'ಪವರ್ ಕಾಯಿನ್ಸ್' ಟಾಸ್ಕ್ನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಘಾಟಿ ಗಾನವಿ ಗೌಡ ಆಡಿದ ಸ್ವಾರ್ಥದ ಆಟ ಮತ್ತು ತಂತ್ರಗಾರಿಕೆ ಇಡೀ ಮನೆಯನ್ನು ಕೆರಳಿಸಿದ್ದು, ಸಹ ಸ್ಪರ್ಧಿಗಳಿಗೆ ಮಹಾಮೋಸ ಮಾಡಿದ್ದಾರೆ.
ದೊಡ್ಮನೆಯಲ್ಲಿ ನಡೆದ ಪವರ್ ಕಾಯಿನ್ ಟಾಸ್ಕ್ನಲ್ಲಿ ಗಾನವಿ ಅವರಿದ್ದ 'ಒಂಟಿ' ತಂಡವು ಟಾಸ್ಕ್ ಗೆದ್ದು 30 ಪವರ್ ಕಾಯಿನ್ಗಳನ್ನು ಗಳಿಸಿತ್ತು. ಈ ಕಾಯಿನ್ಗಳನ್ನು ತಂಡದೊಳಗೆ ಹೇಗೆ ಹಂಚಿಕೊಳ್ಳಬೇಕು ಎಂಬ ಚರ್ಚೆ ಬಂದಾಗ ಗಾನವಿ ಭಾವುಕ ತಂತ್ರ ಹೂಡಿದ್ದರು.
"ಬಹುಮತದ ಆಧಾರದಲ್ಲಿ ನನಗೆ ಎಂದಿಗೂ ಅವಕಾಶ ಸಿಗುವುದಿಲ್ಲ, ದಯವಿಟ್ಟು ಈ ಬಾರಿ ನನಗೆ ಚಾನ್ಸ್ ಕೊಡಿ" ಎಂದು ತಂಡದವರ ಮುಂದೆ ಮನವಿ ಮಾಡಿಕೊಂಡಿದ್ದರು.
ತಂಡದ ಪ್ರಮುಖ ಸ್ಪರ್ಧಿ ಗಗನ್ ಚಿನ್ನಪ್ಪ ಎಲ್ಲರಿಗೂ ತಲಾ 6 ಕಾಯಿನ್ಸ್ ಕೊಡುವುದಾಗಿ ಹೇಳಿದಾಗ, ಗಾನವಿ ಕೂಡ ತಾನು ಎಲ್ಲರಿಗೂ ಸಮಾನವಾಗಿ ಕಾಯಿನ್ಸ್ ಹಂಚುವುದಾಗಿ ತಂಡಕ್ಕೆ ಭರವಸೆ (ಪ್ರಾಮಿಸ್) ನೀಡಿದ್ದರು.
ಗಾನವಿ ಅವರ ಮಾತನ್ನು ನಂಬಿದ ಒಂಟಿ ತಂಡದ ಸದಸ್ಯರು ಅವರನ್ನೇ ಕಾಯಿನ್ ಹಂಚಲು ಕಳುಹಿಸಿಕೊಟ್ಟರು. ಆದರೆ, ಕೊನೆ ಕ್ಷಣದಲ್ಲಿ ತನ್ನ ಸ್ವಂತ ಲಾಭ ಹಾಗೂ ಸ್ವಾರ್ಥಕ್ಕಾಗಿ ಗಾನವಿ ಇಡೀ ತಂಡದ ಲೆಕ್ಕಾಚಾರವನ್ನೇ ಉಲ್ಟಾ ಮಾಡಿ, ನಿಯಮ ಬದಲಿಸಿ 30 ಕಾಯಿನ್'ಗಳ ಪೈಕಿ 15 ಕಾಯಿನ್ ಗಳನ್ನು ಎಗರಿಸುವ ಮೂಲಕ ತಂಡಕ್ಕೆ ಬಿಗ್ ಶಾಕ್ ಕೊಟ್ಟರು.
ಗಾನವಿ ಅವರ ಈ ನಂಬಿಕೆದ್ರೋಹದ ಆಟದಿಂದ ಒಂಟಿ ತಂಡದ ಪಂಟರ್ಸ್ ಸಂಪೂರ್ಣವಾಗಿ ಶಾಕ್'ಗೆ ಒಳಗಾದರು. ಅದರಲ್ಲೂ ವಿಶೇಷವಾಗಿ ಗಗನ್ ಚಿನ್ನಪ್ಪ ತೀವ್ರವಾಗಿ ಕೆರಳಿದ್ದು, "ಗೆಲ್ಲುವುದಕ್ಕೆ ಆಟ ಆಡಬೇಕು, ಆದರೆ ಇಷ್ಟು ಕೆಳಮಟ್ಟಕ್ಕೆ ಇಳಿದು ಗೆಲ್ಲಬಾರದು" ಎಂದು ಗಾನವಿ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸಿದರು. ಟಾಸ್ಕ್ ಮುಗಿದ ಬಳಿಕ ಇಬ್ಬರ ನಡುವೆ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಮಟ್ಟದ ಮಾತಿನ ಚಕಮಕಿ ನಡೆಯಿತು.
ಈ ನಡುವೆ ಹೆಚ್ಚು ಪವರ್ ಕಾಯಿನ್ ಪಡೆದ ಒಂಟಿ ಹಾಗೂ ಜಂಟಿ ತಂಡಕ್ಕೆ ಬಿಗ್ ಬಾಸ್ ಟಾಸ್ಕ್ ವೊಂದನ್ನು ನೀಡಿದ್ದು, ಎರಡೂ ತಂಡದಲ್ಲಿ ಹೆಚ್ಚು ಕಾಯಿನ ಹೊಂದಿದ್ದ ಗಗನ್, ಗಾನವಿ, ಕಿರಣ್ ಶಾಸ್ತ್ರಿ ಹಾಗೂ ಯಶಸ್ ಅವರು ಕ್ಯಾಪ್ಟೆನ್ಸಿ ಆಟವಾಡಲು ಆಯ್ಕೆಯಾದರು. ಟಾಸ್ಕ್ ನಲ್ಲಿ ಮೊದಲು ಕಿರಣ್ ಶಾಸ್ತ್ರಿ ಹೊರಗೆ ಬಂದರೆ, ಕರ್ಮ ರಿಟರ್ನ್ಸ್ ಎಂಬಂತೆ ಗಾನವಿ ಕೂಡ ಹೊರ ಬಂದರು. ಬಳಿಕ ಯಶಸ್ ಹಾಗೂ ಗಗನ್ ನಡುವೆ ಸ್ಪರ್ಧೆ ನಡೆದು, ಅಂತಿಮವಾಗಿ ಗಗನ್ ಚಿನ್ನಪ್ಪ ಅವರು ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ, ಈ ವಾರದ ಕ್ಯಾಪ್ಟೆನ್ ಆಗಿ ಆಯ್ಕೆಯಾದರು.
ಇದರ ಬೆನ್ನಲ್ಲೇ ಗಾನವಿ ಗೌಡ ಅವರ ವರ್ತನೆಗೆ ಕೇವಲ ಮನೆಯೊಳಗಿನ ಸ್ಪರ್ಧಿಗಳು ಮಾತ್ರವಲ್ಲದೆ, ಹೊರಗಡೆ ಬಿಗ್ ಬಾಸ್ ವೀಕ್ಷಕರು ಮತ್ತು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಗಾನವಿ ವಿರುದ್ಧ ಕಮೆಂಟ್ಗಳ ಸುರಿಮಳೆಯಾಗುತ್ತಿದ್ದು, "ನಂಬಿದ ತಂಡಕ್ಕೆ ಬೆನ್ನಿಗೆ ಚೂರಿ ಹಾಕುವುದು ಆಟವಲ್ಲ, ಇದು ಕನ್ನಿಂಗ್ ಬುದ್ಧಿ" ಎಂದು ಕಿಡಿಕಾರುತ್ತಿದ್ದಾರೆ.
ಹಿಂದಿನ ವಾರವಷ್ಟೇ ಗಗನ್ ತಾಯಿಯ ಬಗ್ಗೆ ಅವಾಚ್ಯ ಪದ ಬಳಸಿ ಕಿಚ್ಚ ಸುದೀಪ್ ಅವರಿಂದ ತರಾಟೆಗೆ ಒಳಗಾಗಿದ್ದ ಗಾನವಿ, ಕಣ್ಣೀರಿಟ್ಟು ಗಗನ್ ಬಳಿ ಕ್ಷಮೆ ಕೇಳಿ ಸಂಧಾನ ಮಾಡಿಕೊಂಡಿದ್ದರು. ಆದರೆ, ಈಗ ಕಾಯಿನ್ ಟಾಸ್ಕ್ನಲ್ಲಿ ಮತ್ತೆ ಸ್ವಾರ್ಥದ ಆಟವಾಡಿ ಇಡೀ ಮನೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.