ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಯಾವುದೇ ಆರ್ಭಟವಿಲ್ಲದೆ ಬಿಡುಗಡೆಯಾಗಿ, ಪ್ರೇಕ್ಷಕರ ಮೌತ್ ಪಬ್ಲಿಸಿಟಿಯಿಂದಲೇ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ 'ಪ್ರೇಮದ ಊರಲಿ' ಸಿನಿಮಾ ಪ್ರತಿ ದಿನ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡುತ್ತಿದೆ.
ಪ್ರೇಕ್ಷಕರಿಂದ ಮಾತ್ರವಲ್ಲದೆ ಚಿತ್ರರಂಗದ ಗಣ್ಯರಿಂದಲೂ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇದೀಗ ʻಪ್ರೇಮದ ಊರಲಿʼ ಚಿತ್ರತಂಡವನ್ನು ಖುದ್ದು ಭೇಟಿ ಮಾಡಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ಅವರ ಪತ್ನಿ ರಾಧಿಕಾರಿ ಅವರು, ಚಿತ್ರವನ್ನು ಮನಸಾರೆ ಕೊಂಡಾಡಿದ್ದಾರೆ. ಚಿತ್ರ ತಂಡಕ್ಕೆ ಪ್ರೀತಿ ಮತ್ತು ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಫ್ಯಾಮಿಲಿ ಎಮೋಷನಲ್ ಡ್ರಾಮಾವನ್ನು ಕಣ್ತುಂಬಿಕೊಂಡು ಇಬ್ಬರೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ‘ಪ್ರೇಮದ ಊರಲಿ’ ಸಿನಿಮಾದ ಬಗ್ಗೆ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, “ಕನ್ನಡ ಚಿತ್ರರಂಗದ ಇಂದಿನ ಬೆಳವಣಿಗೆಯನ್ನು ಕಂಡು ನನಗೆ ಅತ್ಯಂತ ಸಂತೋಷವಾಗುತ್ತಿದೆ. ಇತ್ತೀಚೆಗಷ್ಟೇ ನಾನು ಪ್ರೇಮದ ಊರಲಿ ಚಿತ್ರತಂಡವನ್ನ ಖುದ್ದಾಗಿ ಭೇಟಿಯಾದೆ. ತಂಡದ ಕಣ್ಣುಗಳಲ್ಲಿ ಖುಷಿ ಕಂಡೆ” ಎಂದರು.
ನಮ್ಮ ಚಿತ್ರರಂಗ ಬೆಳೆಯಬೇಕಾದರೆ ದೊಡ್ಡ ಬಜೆಟ್ನ ಸಿನಿಮಾಗಳ ಜೊತೆಗೆ, ಗಡಿಗಳನ್ನ ದಾಟಿ ಸಾಧನೆ ಮಾಡುವ ಪ್ರಯತ್ನಗಳಷ್ಟೇ ಅಲ್ಲದೇ, ಗಟ್ಟಿ ಕಥಾವಸ್ತುವುಳ್ಳ ಸಣ್ಣ ಬಜೆಟ್ನ ಸಿನಿಮಾಗಳು ಅಷ್ಟೇ ಅಗತ್ಯ. ಇಂತಹ ಸಣ್ಣ ಸಿನಿಮಾಗಳು ಇಂಡಸ್ಟ್ರಿಯ ಅಡಿಪಾಯವನ್ನ ಬಲಪಡಿಸುತ್ತವೆ. ಹೊಸ ಹೊಸ ನಟರು, ನವ ನಿರ್ದೇಶಕರು ಹಾಗೂ ವಿಭಿನ್ನ ತಂತ್ರಜ್ಞರು ಚಿತ್ರರಂಗಕ್ಕೆ ಬಂದಾಗ ಮಾತ್ರ ರಂಗು ಮತ್ತಷ್ಟು ಹೆಚ್ಚುತ್ತದೆ” ಎಂದು ಯಶ್ ಹೇಳಿದ್ದಾರೆ.
"ಒಂದು ಸಣ್ಣ ಪ್ರಯತ್ನಕ್ಕೆ ಕನ್ನಡಿಗರು ನೀಡುತ್ತಿರುವ ಈ ಭವ್ಯ ಬೆಂಬಲ ನಿಜಕ್ಕೂ ಪ್ರತಿಯೊಬ್ಬ ಕಲಾವಿದನಿಗೂ ಧೈರ್ಯ ಮತ್ತು ಉತ್ಸಾಹ ತುಂಬುತ್ತೆ. ಈ ಪ್ರೋತ್ಸಾಹವೇ ನಮಗೆ ಮುಂದಿನ ದಿನಗಳಲ್ಲಿ ಹೊಸ ಸಾಧನೆಗಳನ್ನ ಮಾಡಲು ದೊಡ್ಡ ಛಲವನ್ನ ನೀಡುತ್ತದೆ” ಎಂದರು.