ಪತ್ನಿ ಅನಾರೋಗ್ಯ ಕಂಡು ಕಣ್ಣೀರಿಟ್ಟ ಹಾಸ್ಯನಟ ಅಲಿ 
ಸಿನಿಮಾ ಸುದ್ದಿ

ಪತ್ನಿ ಆರೋಗ್ಯ ಗಂಭೀರ: ಬಿಕ್ಕಿ ಬಿಕ್ಕಿ ಅತ್ತ ಸ್ಟಾರ್ ಹಾಸ್ಯ ನಟ, Video ವೈರಲ್!

ಪತ್ನಿ ಜುಬೇದಾ ಸುಲ್ತಾನಾ ಬೇಗಂ ಅವರ ಆರೋಗ್ಯದ ಸಮಸ್ಯೆ ಹಾಗೂ ಶಸ್ತ್ರಚಿಕಿತ್ಸೆಯ ಸಂದರ್ಭದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳು ಭಾವುಕರಾಗಿದ್ದಾರೆ.

ಹೈದರಾಬಾದ್‌: ಖ್ಯಾತ ತೆಲುಗು ಹಾಸ್ಯ ನಟ ಅಲಿ ಬಿಕ್ಕಿ ಬಿಕ್ಕಿ ಅತ್ತ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದ್ದು, ಅವರ ಪತ್ನಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ತೆಲುಗು ಚಿತ್ರರಂಗದಲ್ಲಿ ತಮ್ಮ ಹಾಸ್ಯಪಾತ್ರಗಳ ಮೂಲಕ ದಶಕಗಳಿಂದ ಪ್ರೇಕ್ಷಕರನ್ನು ನಗಿಸುತ್ತ ಬಂದಿರುವ ಖ್ಯಾತ ನಟ ಹಾಗೂ ಹಾಸ್ಯ ಕಲಾವಿದ ಅಲಿ, ಪತ್ನಿಯ ಅನಾರೋಗ್ಯದ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಅವರ ಪತ್ನಿ ಜುಬೇದಾ ಸುಲ್ತಾನಾ ಬೇಗಂ ಅವರ ಆರೋಗ್ಯದ ಸಮಸ್ಯೆ ಹಾಗೂ ಶಸ್ತ್ರಚಿಕಿತ್ಸೆಯ ಸಂದರ್ಭದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳು ಭಾವುಕರಾಗಿದ್ದಾರೆ.

ವರದಿಗಳ ಪ್ರಕಾರ, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಜುಬೇದಾ ಅವರಿಗೆ ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಸದ್ಯ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪತ್ನಿಯ ನೋವು ಕಂಡು ಕಣ್ಣೀರಿಟ್ಟ ನಟ

ಯೂಟ್ಯೂಬರ್‌ ಹಾಗೂ ವ್ಲಾಗರ್‌ ಆಗಿರುವ ಜುಬೇದಾ, ಶಸ್ತ್ರಚಿಕಿತ್ಸೆಯ ಸಂದರ್ಭದ ಕಷ್ಟದ ಕ್ಷಣಗಳನ್ನು ದಾಖಲಿಸಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಪತ್ನಿ ನೋವಿನಿಂದ ಬಳಲುತ್ತಿರುವುದನ್ನು ಕಂಡು ಅಲಿ ಕಣ್ಣೀರು ತಡೆಯಲು ಸಾಧ್ಯವಾಗದೆ ಭಾವುಕರಾಗಿರುವ ದೃಶ್ಯಗಳಿವೆ. ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲಿಯೂ ಅವರು ಭಾವುಕರಾಗಿರುವುದು ಕಂಡುಬಂದಿದೆ.

ಈ ವಿಡಿಯೊ ವೀಕ್ಷಿಸಿದ ಅಭಿಮಾನಿಗಳು ಹಲವು ಭಾವನಾತ್ಮಕ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ತೆರೆ ಮೇಲೆ ಸದಾ ನಗಿಸುತ್ತಿದ್ದ ಹಿರಿಯ ಹಾಸ್ಯನಟನ ಈ ಭಾವನಾತ್ಮಕ ಮುಖವನ್ನು ಕಂಡು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪತ್ನಿಯ ಮೇಲಿನ ಅವರ ಪ್ರೀತಿ ಹಾಗೂ ಕಾಳಜಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ಪತಿಯ ಪ್ರೀತಿಗೆ ಮನಸೋತ ಜುಬೇದಾ

ತಮ್ಮ ಕಷ್ಟದ ಸಮಯದಲ್ಲಿ ಪತಿ ನೀಡಿದ ಬೆಂಬಲದ ಬಗ್ಗೆ ಜುಬೇದಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಷ್ಟದ ಸಂದರ್ಭದಲ್ಲೂ ತಮ್ಮ ಬೆನ್ನಿಗೆ ನಿಂತು ಕಾಳಜಿ ವಹಿಸುವ ಪತಿಯನ್ನು ಪಡೆದಿರುವುದು ಅದೃಷ್ಟ ಎಂದು ಅವರು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪ್ರೀತಿ ಮತ್ತು ಬೆಂಬಲ ನೀಡುವ ಸಂಗಾತಿ ಜೊತೆಯಲ್ಲಿದ್ದರೆ ಮಹಿಳೆಯೊಬ್ಬರು ಆತ್ಮವಿಶ್ವಾಸದಿಂದ ತಮ್ಮ ಕನಸುಗಳನ್ನು ಬೆನ್ನಟ್ಟಲು ಹಾಗೂ ಜೀವನದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂಬ ಅರ್ಥದಲ್ಲಿಯೂ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

1994ರಲ್ಲಿ ವಿವಾಹವಾಗಿದ್ದ ಅಲಿ-ಜುಬೇದಾ

ಮೂಲತಃ ಮೊಹಮ್ಮದ್ ಅಲಿ ಬಾಷಾ ಎಂಬ ಹೆಸರಿನ ಅಲಿ, 1994ರ ಜನವರಿ 23ರಂದು ಜುಬೇದಾ ಸುಲ್ತಾನಾ ಬೇಗಂ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಫಾತಿಮಾ ರಮೀಝುನ್ ಮತ್ತು ಜುವೇರಿಯಾ ಮೀಥಿ ಎಂಬ ಇಬ್ಬರು ಪುತ್ರಿಯರು ಹಾಗೂ ಮೊಹಮ್ಮದ್ ಅಬ್ದುಲ್ ಸುಭಾನ್ ಎಂಬ ಪುತ್ರನಿದ್ದಾನೆ.

ತೆಲುಗು ಚಿತ್ರರಂಗದ ಪ್ರಮುಖ ಹಾಸ್ಯ ಕಲಾವಿದರಲ್ಲಿ ಒಬ್ಬರಾಗಿರುವ ಅಲಿ, ತಮ್ಮ ವೃತ್ತಿಜೀವನದಲ್ಲಿ ಹಲವು ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 (2019) ಚಿತ್ರದಲ್ಲಿಯೂ ಅವರು ಅಲ್ಪಾವಧಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಪತ್ನಿಯ ಅನಾರೋಗ್ಯದ ಸಂದರ್ಭದಲ್ಲಿ ಅಲಿ ಕಣ್ಣೀರಿಟ್ಟಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ದಂಪತಿಯ ನಡುವಿನ ಪ್ರೀತಿ ಮತ್ತು ಬಾಂಧವ್ಯದ ಕುರಿತು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಮೋದಿ ಕಾ ಬಾಪ್ ಭಿ ಜಾಯೇಗಾ": ಖರ್ಗೆ ಹೇಳಿಕೆ ಖಂಡಿಸಿ ದೇಶಾದ್ಯಂತ ಬಿಜೆಪಿ ಪ್ರತಿಭಟನೆ; ಕ್ಷಮೆಯಾಚಿಸಬೇಕು ಎಂದು ಆಗ್ರಹ!

ಮದುವೆಯಾದ ಮೇಲೂ ‘ಮತ್ತೆ ಮತ್ತೆ ಮದುವೆಯಾಗೋಣವೇ?’ ಎಂದು ಕೇಳುವಷ್ಟು ಪ್ರೀತಿ ಇದೆ: ಟ್ರೋಲ್ ಬಗ್ಗೆ ರಶ್ಮಿಕಾ ಸುದೀರ್ಘ ಪೋಸ್ಟ್!

ಕನ್ನಡಿಗರಿಗೆ ಉದ್ಯೋಗ ಸಿಗಬೇಕು ನಿಜ: ಮೊದಲು ಉತ್ತಮ ಶಿಕ್ಷಣ, ಕೌಶಲ ತರಬೇತಿ ಕೊಡಿ; ಸರ್ಕಾರಕ್ಕೆ ಉದ್ಯಮಿ ಮೋಹನ್ ದಾಸ್ ಪೈ

'ಮೋದಿ ಏನ್ ಅವರ ಅಪ್ಪನೂ ಹೋಗುತ್ತಾನೆ': ತಂದೆ ಹೇಳಿಕೆ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

ರಾಮಾಯಣ ಚಿತ್ರದಲ್ಲಿ ಕವ್ವಾಲಿ ಝಲಕ್; ಹಾಡುಗಳು ಇಸ್ಲಾಮೀಕರಣ: AR Rahman ವಿರುದ್ಧ ಭುಗಿಲೆದ್ದ ನೆಟ್ಟಿಗರ ಅಸಮಾಧಾನ!