ನಟ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಕುರಿತ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಬೆನ್ನಲ್ಲೇ, ಕನ್ನಡ ನಟಿ ಹಾಗೂ ಬಿಗ್ಬಾಸ್ ಮಾಜಿ ಸ್ಪರ್ಧಿ ಅಶ್ವಿನಿ ಗೌಡ ಅವರು ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ಕಲಾವಿದರ ಅಭಿಮಾನಿಗಳು ಅವರ ಕುಟುಂಬದವರನ್ನೂ ಗೌರವಿಸಬೇಕು ಎಂದು ಮನವಿ ಮಾಡಿದ್ದಾರೆ.
ಒಬ್ಬ ಕಲಾವಿದನನ್ನು ಪ್ರೀತಿಸುವ ಅಭಿಮಾನಿಗಳು, ಆ ಕಲಾವಿದನ ಜೊತೆಗಿರುವ ಕುಟುಂಬವನ್ನೂ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅದರಲ್ಲೂ ಪತ್ನಿ, ಮಕ್ಕಳು ಸೇರಿದಂತೆ ಕುಟುಂಬದ ಹೆಣ್ಣುಮಕ್ಕಳನ್ನು ಗೌರವಿಸುವುದು ನಮ್ಮ ಸಂಸ್ಕಾರದ ಭಾಗವಾಗಬೇಕು ಎಂದು ಹೇಳಿದ್ದಾರೆ.
ಸಂಬಂಧಗಳಲ್ಲಿ ಮನಸ್ತಾಪ ಉಂಟಾದಾಗ, ಇಷ್ಟು ದಿನ ಹಂಚಿಕೊಂಡ ಪ್ರೀತಿ, ವಿಶ್ವಾಸ ಹಾಗೂ ಕಷ್ಟ-ಸುಖಗಳನ್ನು ಮರೆತು, ಅದೇ ಸಂಬಂಧಗಳನ್ನು ನೋಯಿಸುವ ಅಸ್ತ್ರಗಳನ್ನಾಗಿ ಬಳಸುವುದು ನೋವಿನ ಸಂಗತಿ. ಒಬ್ಬ ಹೆಣ್ಣಿನ ಮೌನವನ್ನು ದೌರ್ಬಲ್ಯವೆಂದು ಭಾವಿಸಬಾರದು. ಕುಟುಂಬದ ಗೌರವವನ್ನು ಮಾತುಗಳಿಂದ ಅಳೆಯಬಾರದು. ಭಿನ್ನಾಭಿಪ್ರಾಯಗಳು ಇರಬಹುದು, ಆದರೆ, ಯಾವುದೇ ಹೆಣ್ಣಿನ ಘನತೆಗೆ ಧಕ್ಕೆ ತರುವ ಹಕ್ಕು ಯಾರಿಗೂ ಇಲ್ಲ. ಅಭಿಮಾನವೆಂದರೆ ಕೇವಲ ಕಲಾವಿದರ ಹೆಸರನ್ನು ಕೂಗುವುದಲ್ಲ, ಅವರ ಮೇಲಿನ ಪ್ರೀತಿಯನ್ನು ಗೌರವದಿಂದ ಉಳಿಸಿಕೊಳ್ಳುವುದೂ ಆಗಿದೆ ಎಂದು ತಿಳಿಸಿದ್ದಾರೆ.
ನಿಜವಾದ ಅಭಿಮಾನಿ ಕಲಾವಿದರ ಯಶಸ್ಸಿನಲ್ಲಿ ಸಂಭ್ರಮಿಸುತ್ತಾನೆ, ಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಲ್ಲುತ್ತಾನೆ. ಆದರೆ, ಬೇರೆಯವರನ್ನು ನೋಯಿಸುವ ಮೂಲಕ ತನ್ನ ಅಭಿಮಾನವನ್ನು ಸಾಬೀತುಪಡಿಸಲು ಪ್ರಯತ್ನಿಸುವುದಿಲ್ಲ. ಅಭಿಮಾನ ಇರಲಿ, ಆದರೆ, ಮಾನವೀಯತೆ ಕಳೆದುಹೋಗದಿರಲಿ.
ಪ್ರೀತಿ ಇರಲಿ ಆದರೆ, ಹೆಣ್ಣಿನ ಗೌರವಕ್ಕೆ ಭಂಗ ಬರದಿರಲಿ. ನಂಟು ಇರಲಿ, ಆದರೆ ಮನಸ್ಸುಗಳನ್ನು ಮುರಿಯುವಷ್ಟು ದ್ವೇಷ ಬೆಳೆಯದಿರಲಿ. ಅದೇ ನಿಜವಾದ ಅಭಿಮಾನ ಮತ್ತು ಮನುಷ್ಯತ್ವ ಎಂದಿದ್ದಾರೆ.
ಇತ್ತೀಚೆಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಧನ್ವೀರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಜಯಲಕ್ಷ್ಮಿ ಮತ್ತು ಧನ್ವೀರ್ ನಡುವಿನ ವಿವಾದಕ್ಕೆ ಹಣಕಾಸಿನ ವ್ಯವಹಾರವೇ ಕಾರಣ ಎಂಬ ಆರೋಪವೂ ಕೇಳಿಬಂದಿದೆ.