'ಕಾಂತಾರ' ಚಿತ್ರದ ಮೂಲಕ ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಇದೀಗ 'ಕಾಂತಾರ 3' ಚಿತ್ರದ ಮೂಲಕ ಮತ್ತೆ ಮರಳುವುದಾಗಿ ಎಂದು ಅಧಿಕೃತವಾಗಿ ದೃಢಪಡಿಸಿದ್ದಾರೆ.
ತಮ್ಮ ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆ ಇತ್ತೀಚೆಗೆ ಮಲಯಾಳಂ ನಟ ಅಹಾನಾ ಕೃಷ್ಣ ಅವರ ವಿವಾಹದಲ್ಲಿ ಭಾಗವಹಿಸಲು ತಿರುವನಂತಪುರಂಗೆ ರಿಷಭ್ ಬಂದಿದ್ದರು. ಈವೇಳೆ ದಂಪತಿ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ಮತ್ತು ಅಟ್ಟುಕಲ್ ಭಗವತಿ ದೇವಾಲಯಗಳಿಗೆ ಭೇಟಿ ನೀಡಿದರು. ಆಗ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂತಾರ: ಅಧ್ಯಾಯ 1ರ ಅಂತ್ಯದಲ್ಲಿ ಉಳಿದುಕೊಂಡಿರುವ ಪ್ರಶ್ನೆಗೆ ಉತ್ತರಿಸಿದರು.
ಮೂರನೇ ಭಾಗದ ಚಿತ್ರೀಕರಣದ ಸಮಯ ಮತ್ತು ಸ್ವರೂಪದ ಬಗ್ಗೆ ಕೇಳಿದಾಗ, 'ಹೌದು, ಕಾಂತಾರ 3 ಖಂಡಿತವಾಗಿಯೂ ನಮ್ಮ ಮುಂದಿದೆ. ಕಾಂತಾರ: ಅಧ್ಯಾಯ 1ರಲ್ಲಿ ಕೊನೆಗೊಂಡಂತೆ, ಇದರ ಮುಂದುವರಿದ ಭಾಗ ನಿರ್ಮಾಣವಾಗಲಿದೆ. ಅದು ಯಾವಾಗ ತೆರೆಗೆ ಬರುತ್ತದೆ ಮತ್ತು ಅದು ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ನಾನು ಈ ಹಂತದಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಸರಿಯಾದ ಸಮಯ ಬಂದಾಗ, ಎಲ್ಲವೂ ಬಹಿರಂಗಗೊಳ್ಳುತ್ತದೆ' ಎಂದು ಹೇಳಿದರು.
ಸದ್ಯ, ರಿಷಬ್ ಮತ್ತೊಂದು ಬೃಹತ್ ಪ್ಯಾನ್-ಇಂಡಿಯಾ ಯೋಜನೆಯಾದ ಪ್ರಶಾಂತ್ ವರ್ಮಾ ನಿರ್ದೇಶನದ 'ಜೈ ಹನುಮಾನ್' ಚಿತ್ರದೊಂದಿಗೆ ಕೆಲಸ ಮಾಡುತ್ತಿದ್ದಾರೆ. 'ಇದೀಗ, ನನ್ನ ಸಂಪೂರ್ಣ ಗಮನ ಜೈ ಹನುಮಾನ್ ಮೇಲಿದೆ. ನಾವು ಈಗಾಗಲೇ ಎರಡು ನಿರ್ಣಾಯಕ ಶೂಟಿಂಗ್ ವೇಳಾಪಟ್ಟಿಗಳನ್ನು ಮುಗಿಸಿದ್ದೇವೆ ಮತ್ತು ಚಿತ್ರೀಕರಣ ಸರಾಗವಾಗಿ ನಡೆಯುತ್ತಿದೆ' ಎಂದು ಹೇಳಿದರು.
'ಕಾಂತಾರ' ಮತ್ತು ಅದರ ಪ್ರೀಕ್ವೆಲ್ 'ಕಾಂತಾರ: ಅಧ್ಯಾಯ 1' ಎರಡನ್ನೂ ಸಮಾನ ಉತ್ಸಾಹದಿಂದ ಸ್ವೀಕರಿಸಿದ ಕೇರಳದ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಲು ರಿಷಬ್ ಈ ಅವಕಾಶವನ್ನು ಬಳಸಿಕೊಂಡರು. 'ನಮಗೆ ಇಷ್ಟೊಂದು ಪ್ರೀತಿಯನ್ನು ನೀಡಿದ್ದಕ್ಕಾಗಿ ನಾವು ಮಲಯಾಳಂ ಪ್ರೇಕ್ಷಕರಿಗೆ ತುಂಬಾ ಕೃತಜ್ಞರಾಗಿರುತ್ತೇವೆ. ನಿಮ್ಮ ಕಠಿಣ ಪರಿಶ್ರಮವನ್ನು ಇಷ್ಟು ಪ್ರೀತಿಯಿಂದ ಸ್ವೀಕರಿಸಿದಾಗ ಅದು ಅಪಾರ ಸಂತೋಷವನ್ನು ತರುತ್ತದೆ. ಕನ್ನಡ ಮತ್ತು ಮಲಯಾಳಂ ಉದ್ಯಮಗಳು ಉತ್ತಮ ಸೃಜನಶೀಲ ಬಾಂಧವ್ಯವನ್ನು ಹಂಚಿಕೊಳ್ಳುತ್ತವೆ. ವಾಸ್ತವವಾಗಿ, ಕಾಂತಾರದಲ್ಲಿನ ನಮ್ಮ ತಾಂತ್ರಿಕ ಸಿಬ್ಬಂದಿಯ ಗಮನಾರ್ಹ ಭಾಗವು ಕೇರಳದವರು' ಎಂದರು.
ಕನ್ನಡ ಮತ್ತು ಮಲಯಾಳಂ ಚಿತ್ರೋದ್ಯಮಗಳ ನಡುವಿನ ತಂಡದ ಕೆಲಸವು 'ಕಾಂತಾರ: ಅಧ್ಯಾಯ 1' ನಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಈ ಚಿತ್ರವು ಕೇರಳದ ಸಾಂಪ್ರದಾಯಿಕ ಸಮರ ಕಲೆ ಕಲರಿಪಯಟ್ಟು ಅನ್ನು ಬಳಸಿಕೊಂಡಿದ್ದು, ಇದಕ್ಕಾಗಿ ತಂಡವು ಕೇರಳದ ಮಾಸ್ಟರ್‌ಗಳಿಂದ ವಿಶೇಷ ತರಬೇತಿ ಪಡೆದುಕೊಂಡಿದೆ. ಮತ್ತು ಪ್ರಸಿದ್ಧ ಮಲಯಾಳಂ ನಟ ಜಯರಾಮ್ ಕೂಡ ಇದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
'ಕಾಂತಾರ 3' ಗಾಗಿ ರಿಷಬ್ ಶೆಟ್ಟಿ ಈಗಲೇ ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳುವುದಿಲ್ಲವಾದ್ದರಿಂದ ಅಭಿಮಾನಿಗಳು ಸ್ವಲ್ಪ ಸಮಯ ಕಾಯಬೇಕಾಗಿದೆ. ಆದರೆ, ಈ ಕಥೆ ಇನ್ನೂ ಮುಕ್ತಾಯಗೊಂಡಿಲ್ಲ ಎಂಬುದು ಇದೀಗ ಖಚಿತವಾಗಿದೆ.