ಬೆಂಗಳೂರು: ಇದೇ ಸೆಪ್ಟೆಂಬರ್ 30 ರಿಂದ ಸಿನಿಮಾ ಟಿಕೆಟ್ ಬೆಲೆ ಹೆಚ್ಚಾಗೋದು ಪಕ್ಕಾ! ಯಾಕಂದ್ರೆ, ರಾಜ್ಯಸರ್ಕಾರವು ಈ ಹಿಂದೆ ಜಾರಿಗೆ ತಂದಿದ್ದ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ, 2024ರ ಅಡಿಯಲ್ಲಿ, ಕರ್ನಾಟಕದಲ್ಲಿ ಸಿನಿಮಾ ಟಿಕೆಟ್‌ಗಳ ಮೇಲೆ ಶೇಕಡಾ 2 ರಷ್ಟು ಹೆಚ್ಚುವರಿ ಸೆಸ್ (ಉಪಕರ) ವಿಧಿಸುವ ನಿಯಮವು ಸೆಪ್ಟೆಂಬರ್ 30 ರಿಂದ ಜಾರಿ ಮಾಡಿದೆ. ಇದರಿಂದಾಗಿ ರಾಜ್ಯದ ಸಿನಿಪ್ರಿಯರಿಗೆ ಟಿಕೆಟ್ ದರದಲ್ಲಿ ಮತ್ತಷ್ಟು ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಈ ಹೆಚ್ಚುವರಿ ಸೆಸ್ ವಿಧಿಸುತ್ತಿರುವುದು ಯಾಕೆ?
ರಾಜ್ಯ ಸರ್ಕಾರವು ಜಾರಿಗೆ ತಂದಿರುವ 'ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ-2024' ಅಡಿಯಲ್ಲಿ ಈ ಸೆಸ್ ಸಂಗ್ರಹಿಸಲಾಗುತ್ತಿದೆ. ಇದರಿಂದ ಬರುವ ಹಣವನ್ನು, ಕನ್ನಡ ಚಿತ್ರರಂಗದ ಕಾರ್ಮಿಕರು, ತಂತ್ರಜ್ಞರು ಮತ್ತು ಸಾಂಸ್ಕೃತಿಕ ಕಲಾವಿದರ ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ನೆರವಿಗಾಗಿ ಪ್ರತ್ಯೇಕ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಈ ನಿಧಿಗೆ ಹಣ ಸಂಗ್ರಹಿಸುವ ಉದ್ದೇಶದಿಂದ ಸಿನಿಮಾ ಟಿಕೆಟ್‌ಗಳ ಮೇಲೆ 2% ಸೆಸ್ ವಿಧಿಸಲಾಗುತ್ತಿದೆ. ಅದರಲ್ಲೂ, ಈ ಸೆಸ್ ಕೇವಲ ಥಿಯೇಟರ್ ಟಿಕೆಟ್‌ಗಳಿಗೆ ಮಾತ್ರವಲ್ಲದೆ, ಒಟಿಟಿ ಚಂದಾದಾರಿಕೆ ಮತ್ತು ದೂರದರ್ಶನ ವಾಹಿನಿಗಳ ಆದಾಯದ ಮೇಲೂ ಅನ್ವಯವಾಗುವ ಸಾಧ್ಯತೆಯಿದೆ.
ಟಿಕೆಟ್ ದರ ಎಷ್ಟು ಹೆಚ್ಚಾಗಬಹುದು?
ಕರ್ನಾಟಕದ ಎಲ್ಲಾ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಮತ್ತು ಐಷಾರಾಮಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೂ ಇದು ಅನ್ವಯಿಸುತ್ತದೆ. ಅದರಂತೆ, ಪ್ರಸ್ತುತ ಇರುವ ಟಿಕೆಟ್ ದರದ ಮೇಲೆ ಶೇ. 2 ರಷ್ಟು ಸೆಸ್ ಬೀಳಲಿದೆ. ಉದಾಹರಣೆಗೆ, ನೀವು ₹250 ಬೆಲೆಯ ಟಿಕೆಟ್ ಖರೀದಿಸಿದರೆ ₹5 ಹೆಚ್ಚುವರಿ ಸೆಸ್ ಸೇರಿದಂತೆ ಒಟ್ಟು ₹255 ಪಾವತಿಸಬೇಕಾಗಬಹುದು. ಮತ್ತೊಂದಡೆ, ಚಿತ್ರಮಂದಿರಗಳ ಮಾಲೀಕರು ಈ ಹೊರೆಯನ್ನು ತಾವೇ ಭರಿಸಬೇಕೇ ಅಥವಾ ಗ್ರಾಹಕರಿಗೆ ವರ್ಗಾಯಿಸಬೇಕೇ ಎಂಬ ಬಗ್ಗೆಯೂ ಚರ್ಚಿಸುತ್ತಿದ್ದಾರೆ.
ಮುಂದುವರೆದು, ಸರ್ಕಾರದ ಈ ನಿರ್ಧಾರಕ್ಕೆ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಮಾಲೀಕರ ಒಕ್ಕೂಟವಾದ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತೀವ್ರ ಕಳವಳ ವ್ಯಕ್ತಪಡಿಸಿದೆ ಮತ್ತು ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದೆ. ಅದರಂತೆ, ಜಿಎಸ್‌ಟಿ ವ್ಯವಸ್ಥೆಯು ತೆರಿಗೆಯ ಮೇಲೆ ತೆರಿಗೆ ಬೀಳುವುದನ್ನು ತಡೆಯಲು ಬಂದಿರುವುದಾಗಿದೆ. ಆದರೆ ಈಗಾಗಲೇ ಜಿಎಸ್‌ಟಿ ವ್ಯಾಪ್ತಿಯಲ್ಲಿರುವ ಸಿನಿಮಾ ಟಿಕೆಟ್‌ಗಳ ಮೇಲೆ ಮತ್ತೆ ಸೆಸ್ ವಿಧಿಸುವುದು ಜಿಎಸ್‌ಟಿ ಮೂಲ ತತ್ವಕ್ಕೆ ವಿರುದ್ಧವಾಗಿದೆ ಎಂದು MAI ಅಧ್ಯಕ್ಷ ಕಮಲ್ ಜಿಯಾಂಚಂದಾನಿ ತಿಳಿಸಿದ್ದಾರೆ.
ಏತನ್ಮಧ್ಯೆ, ಈ ಮೊದಲು ಸರ್ಕಾರವು ಸೆಪ್ಟೆಂಬರ್ 1 ರಿಂದಲೇ ಸೆಸ್ ಸಂಗ್ರಹಿಸುವಂತೆ ಸುತ್ತೋಲೆ ಹೊರಡಿಸಿತ್ತು. ಆದರೆ, ಕಾಯ್ದೆಯು ಅಧಿಕೃತವಾಗಿ ಜಾರಿಗೆ ಬರುವ ಮುನ್ನವೇ ಸುತ್ತೋಲೆ ಹೊರಡಿಸಿದ್ದನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಒಕ್ಕೂಟವು ಹೈಕೋರ್ಟ್ ಮೆಟ್ಟಿಲೇರಿತ್ತು. ಆಗ ತಾಂತ್ರಿಕ ಕಾರಣಗಳಿಂದಾಗಿ ಕರ್ನಾಟಕ ಹೈಕೋರ್ಟ್ ಆ ಸುತ್ತೋಲೆಯನ್ನು ರದ್ದುಗೊಳಿಸಿತ್ತು. ಇದೀಗ ಸರ್ಕಾರ ಎಲ್ಲ ಸಿದ್ಧತೆಗಳೊಂದಿಗೆ ಸೆಪ್ಟೆಂಬರ್ 30 ರಿಂದ ಅಧಿಕೃತವಾಗಿ ಜಾರಿಗೊಳಿಸಲು ಮುಂದಾಗಿದೆ.