ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಹಾಗೂ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ಜನ ನಾಯಗನ್ ಚಿತ್ರಗಳ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ವಿರುದ್ಧ ಬಲರಾಮನ ದಿನಗಳು ಸಿನಿಮಾದ ವಿತರಣೆಗೆ ಸಂಬಂಧಿಸಿದಂತೆ ಪದ್ಮಾವತಿ ಫಿಲ್ಮ್ಸ್ ನಿರ್ಮಾಪಕರು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಮೆಟ್ಟಿಲೇರಿದ್ದು, ಕೆವಿಎನ್ ಪ್ರೊಡಕ್ಷನ್ಸ್ ನಿಂದ ಉಂಟಾಗಿರುವ ಆರ್ಥಿಕ ನಷ್ಟಕ್ಕೆ ₹2 ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ವಂಚನೆ ನಡೆದಿದ್ದು ಹೇಗೆ?
ಪದ್ಮಾವತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಬಲರಾಮನ ದಿನಗಳು ಚಿತ್ರದ ಚಿತ್ರಮಂದಿರಗಳ ಬಿಡುಗಡೆ ಹಾಗೂ ವಿತರಣೆಯ ಜವಾಬ್ದಾರಿಯನ್ನು ಕೆವಿಎನ್ ಸಂಸ್ಥೆ ಹೊತ್ತುಕೊಂಡಿತ್ತು. ಆದರೆ ಸಿನಿಮಾ ಬಿಡುಗಡೆಯಾದ ಬಳಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮತ್ತು ಆದಾಯ ಹಂಚಿಕೆಯ ಸೂಕ್ತ ಲೆಕ್ಕಪತ್ರಗಳನ್ನು ನೀಡದೆ ಬಾಕಿ ಹಣ ಪಾವತಿಸಿಲ್ಲ ಎಂದು ನಿರ್ಮಾಪಕರಾದ ಶ್ರೇಯಸ್ ಮತ್ತು ಪದ್ಮಾವತಿ ಆರೋಪಿಸಿದ್ದಾರೆ. ಜೊತೆಗೆ, ಚಿತ್ರಕ್ಕೆ ಸಾಕಷ್ಟು ಚಿತ್ರಮಂದಿರಗಳ ಬೆಂಬಲ ನೀಡದೆ, ಕೆವಿಎನ್ ಸಂಸ್ಥೆಗೆ ಸಂಬಂಧಿಸಿದ ಚಿತ್ರಮಂದಿರಗಳಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡಿ ಚಿತ್ರಕ್ಕೆ ಹಿನ್ನಡೆಯಾಗುವಂತೆ ಮಾಡಲಾಗಿದೆ ಎಂದು ದೂರಲಾಗಿದ್ದು, ಸಿನಿಮಾದ ಒಟಿಟಿ ಮತ್ತು ಸ್ಯಾಟಲೈಟ್ ಹಕ್ಕುಗಳ ನಿರ್ವಹಣೆ ಹಾಗೂ ಎಸ್‌ಎಸ್‌ಎಸ್ ಎಂಟರ್‌ಪ್ರೈಸಸ್ ಮೂಲಕ ನಡೆಸಿರುವ ಹಣಕಾಸು ವಹಿವಾಟಿನಲ್ಲಿ ಅಕ್ರಮಗಳು ನಡೆದಿವೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.
ಮುಂದುವರೆದು, ಕೆವಿಎನ್ ಸಂಸ್ಥೆ ಹಾಗೂ ಸಂಬಂಧಪಟ್ಟವರ ವ್ಯವಹಾರದಿಂದ ತಮಗೆ ಭಾರಿ ಆರ್ಥಿಕ ನಷ್ಟ ಸಂಭವಿಸಿದ್ದು, ತಕ್ಷಣವೇ ₹2 ಕೋಟಿ ರೂಪಾಯಿ ಪರಿಹಾರ ಕೊಡಿಸಬೇಕೆಂದು ನಿರ್ಮಾಪಕರು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಬಳಿ ಮನವಿ ಮಾಡಿದ್ದಾರೆ.