ಇಪ್ಪತ್ತೈದು ವರ್ಷಗಳ ಹಿಂದೆ 'ನೆನಪಿರಲಿ' ಚಿತ್ರದ ಮೂಲಕ ತಮಗೆ ಸಿಕ್ಕ 'ಲವ್ಲಿ ಸ್ಟಾರ್' ಎಂಬ ಬಿರುದಿನಿಂದ ಪ್ರೇಮ್ ಎಂದಿಗೂ ದೂರ ಸರಿದಿಲ್ಲ. ಅದನ್ನು ಅವರು ಕೃತಜ್ಞತೆಯಿಂದಲೇ ಸ್ವೀಕರಿಸಿದ್ದಾರೆ. ಜನರು ಅಪಾರ ಪ್ರೀತಿಯಿಂದ ನೀಡಿದ ಬಿರುದು ಅದು. ಅದನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಆರಂಭಿಕ ಯಶಸ್ಸು ಕೆಲವೊಮ್ಮೆ ಒಂದು ಬಗೆಯ ಬಂಧನದಂತೆ (ಟ್ರ್ಯಾಪ್) ಭಾಸವಾಗಬಹುದು. ನಮ್ಮ ಚಿತ್ರರಂಗದಲ್ಲಿ, 'ಲವರ್ ಬಾಯ್' (ಪ್ರೇಮಿ ಪಾತ್ರ) ಆಗಿ ಹಿಟ್ ನೀಡಿದ ಮರುದಿನವೇ, ಅದೇ ರೀತಿಯ ಇಪ್ಪತ್ತು ಕಥೆಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ.
ವೃತ್ತಿಜೀವನದಲ್ಲಿ ನೆಲೆ ಕಂಡುಕೊಳ್ಳುವ ಹಂತದಲ್ಲಿರುವಾಗ, ಸಿಕ್ಕ ಅವಕಾಶಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಆಗಿರುವುದಿಲ್ಲ. ನನ್ನ ಅಭಿಮಾನಿಗಳೂ ಕೂಡ, 'ಸರ್, ನಿಮ್ಮ ವ್ಯಕ್ತಿತ್ವಕ್ಕೆ ಇತರ ಪಾತ್ರಗಳೂ ಒಪ್ಪುತ್ತವೆ. ಕೇವಲ ಲವರ್ ಬಾಯ್ ಪಾತ್ರವನ್ನೇ ಏಕೆ ಮಾಡುತ್ತೀರಿ?' ಎಂದು ಕೇಳುತ್ತಿದ್ದರು. 'ಸ್ಪಾರ್ಕ್' (Spark) ಚಿತ್ರ ನನಗೆ ಆ ಚೌಕಟ್ಟಿನಿಂದ ಹೊರಬರುವ ಅವಕಾಶವನ್ನು ನೀಡಿತು. ಪ್ರೇಕ್ಷಕರು ಉತ್ಸುಕರಾಗಿದ್ದರು. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಜನರು 'ಲವ್ಲಿ ಸ್ಟಾರ್' ಬದಲಿಗೆ 'ರಾಕರ-ಕರ-ರಾಕ್ಷಸ!' ಎಂದು ಘೋಷಣೆ ಕೂಗಿದಾಗ ನನ್ನ ಮಗ ತಮಾಷೆಯಾಗಿ ಪ್ರತಿಕ್ರಿಯಿಸಿದ್ದೂ ಉಂಟು ಎಂದು ಹೇಳಿದ್ದಾರೆ.
ಡಾ. ಗರಿಮಾ ಮತ್ತು ಅವಿನಾಶ್ ವಸಿಷ್ಠ ನಿರ್ಮಿಸಿರುವ, ಡಿ. ಮಹಂತೇಶ್ ಹಂದ್ರಲ್ ನಿರ್ದೇಶನದ 'ಸ್ಪಾರ್ಕ್' ಚಿತ್ರದಲ್ಲಿ ಪ್ರೇಮ್ ನಟಿಸಿದ್ದಾರೆ. ಸೆಪ್ಟೆಂಬರ್ 25 ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ, ಅವರು ನಿರಂಜನ್ ಸುಧೀಂದ್ರ ವಿರುದ್ಧ ಕ್ರೂರ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಸಿಗಾರ್ ಹಿಡಿದು, ಸೌಮ್ಯ ನಗುವಿನ ಬದಲಿಗೆ ಕಠಿಣ ಹಾಗೂ ನಿರ್ದಯ ನೋಟವನ್ನು ಅವರು ಇಲ್ಲಿ ಅಳವಡಿಸಿಕೊಂಡಿದ್ದಾರೆ. ಧೂಮಪಾನದ ಅಭ್ಯಾಸವೇ ಇಲ್ಲದ ಅವರಿಗೆ, ಈ ಪಾತ್ರಕ್ಕಾಗಿ ಮಾಡಿಕೊಂಡ ಬದಲಾವಣೆ ದೈಹಿಕವಾಗಿ ಸಾಕಷ್ಟು ತೊಂದರೆಯನ್ನೂ ನೀಡಿತಂತೆ.
ನನಗೆ ಧೂಮಪಾನವೆಂದರೆ ಅಸಹ್ಯ," ಎಂದು ನೇರವಾಗಿ ಹೇಳುವ ಪ್ರೇಮ್, "ಚಿತ್ರೀಕರಣದ ನಂತರ ತೀವ್ರ ಗಂಟಲು ಸೋಂಕಿನಿಂದ ಚೇತರಿಸಿಕೊಳ್ಳಲು ನಾನು ಒಂದು ತಿಂಗಳು ಕಳೆಯಬೇಕಾಯಿತು," ಎಂದು ವಿವರಿಸಿದ್ದಾರೆ. ಕಣ್ಣುಗಳು ಮತ್ತು ದೇಹಭಾಷೆಯ ಮೂಲಕ ನಟಿಸಬಹುದು, ಆದರೆ ಒಂದು ವಸ್ತು (ಪ್ರಾಪ್) ಪಾತ್ರದ ಆಂತರಿಕ ಹತಾಶೆಯನ್ನು ದೃಢಪಡಿಸುತ್ತದೆ. ಜನರು ಧೂಮಪಾನ ಮಾಡುವಾಗ, ತಮ್ಮ ಕುಟುಂಬದ ಮೇಲೆ ತೋರಿಸಲಾಗದ ಕೋಪವನ್ನು ಅದರ ಮೂಲಕ ಹೊರಹಾಕುತ್ತಾರೆ. ಹೊಗೆಯೊಂದಿಗೆ ಅದನ್ನು ಹೊರಬಿಡುತ್ತಾರೆ. ಆ ಸಿಗಾರ್ ಈ ಪಾತ್ರದ ಆಕ್ರೋಶದ ಸಂಕೇತವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಆದರೆ ಒಂದು ಮಾತು, ಅದು ಕೇವಲ ಚಿತ್ರಮಂದಿರಕ್ಕೆ ಮಾತ್ರ ಸೀಮಿತ; ನಿಜ ಜೀವನದಲ್ಲಿ ಅದನ್ನು ಅನುಸರಿಸಬೇಡಿ ಎಂದು ಸಲಹೆ ನೀಡಿದ್ದಾರೆ. ಯುವ ನಟನೊಬ್ಬನಿಗೆ ಎದುರಾಳಿಯಾಗಿ ಖಳನಾಯಕನ ಪಾತ್ರವನ್ನು ಒಪ್ಪಿಕೊಳ್ಳಲು ಹಿರಿಯ ನಟರೊಬ್ಬರು ಹಿಂಜರಿಯುವ ಸಾಧ್ಯತೆಯಿತ್ತು, ಆದರೆ ಪ್ರೇಮ್ ಆರಂಭದಲ್ಲೇ ಆ ಆಲೋಚನೆಯನ್ನು ಬದಿಗಿಟ್ಟು ಮುಂದುವರಿದರು. 'ಸ್ಪಾರ್ಕ್' ಚಿತ್ರದಲ್ಲಿ ನಿರಂಜನ್ ಅವರೊಂದಿಗೆ ರಚನಾ ಇಂದರ್ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ, ವಕೀಲೆಯ ಪಾತ್ರದಲ್ಲಿ ಭಾವನಾ ಅವರು ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ ಮತ್ತು ಧರ್ಮಣ್ಣ ಕಡೂರು ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
"ಚಿತ್ರೀಕರಣದ ಸ್ಥಳಕ್ಕೆ (ಸೆಟ್‌ಗೆ) ಕಾಲಿಟ್ಟ ತಕ್ಷಣ, ಅಹಂಕಾರವನ್ನು ಬದಿಗಿಡಲೇಬೇಕು," ಎಂದು ಅವರು ಒತ್ತಿ ಹೇಳುತ್ತಾರೆ. ನಾನು ಇಪ್ಪತ್ತೈದು ವರ್ಷಗಳ ಅನುಭವ ಹೊಂದಿದ್ದೇನೆ, ಅವನು ಈಗಷ್ಟೇ ಆರಂಭಿಸುತ್ತಿದ್ದಾನೆ, ಹೀಗಿರುವಾಗ ನಾನು ಅವನಿಗೆ ಅಧೀನನಾಗಿ ಏಕೆ ನಟಿಸಬೇಕು?' ಎಂದು ಯೋಚಿಸಿದರೆ ಸಾಕು, ಆ ದೃಶ್ಯದ ಜೀವಂತಿಕೆಯೇ ಸತ್ತುಹೋಗುತ್ತದೆ ಎಂದಿದ್ದಾರೆ. ನಿರಂಜನ್ ನಾಯಕ, ನಾನು ಖಳನಾಯಕ. ನಾಯಕನಿಗೆ ನೂರಾರು ಮಿತಿಗಳಿರುತ್ತವೆ. ಅವನು ಉದಾತ್ತನಾಗಿರಬೇಕು, ದುಶ್ಚಟಗಳಿಂದ ದೂರವಿರಬೇಕು ಮತ್ತು ಎಲ್ಲರನ್ನೂ ಮೆಚ್ಚಿಸಬೇಕು. ಆದರೆ ಖಳನಾಯಕನಿಗೆ ಅಂತಹ ಯಾವುದೇ ಬಂಧನಗಳಿರುವುದಿಲ್ಲ. ಅವನು ಸಂಪೂರ್ಣವಾಗಿ ತನ್ನದೇ ಆದ ನಿಯಮಗಳ ಪ್ರಕಾರ ಬದುಕುತ್ತಾನೆ ಒಬ್ಬ ನಟನಾಗಿ ಆ ಸ್ವಾತಂತ್ರ್ಯ ಸಿಗುವುದು ದೊಡ್ಡ ವಿಷಯ ಎಂದಿದ್ದಾರೆ.
ಅವರ ಆತ್ಮವಿಶ್ವಾಸಕ್ಕೆ ಮಹಂತೇಶ್ ಅವರ ಚಿತ್ರಕಥೆಯ ಬಗೆಗಿನ ಶಿಸ್ತು ಪ್ರಮುಖ ಕಾರಣವಾಗಿತ್ತು. "ನಾನು ಪಾತ್ರದ ಶೈಲಿ, ಧಾಟಿ ಮತ್ತು ಮಿತಿಗಳ ಬಗ್ಗೆ ಅವರನ್ನು ಪದೇ ಪದೇ ಪ್ರಶ್ನಿಸುತ್ತಿದ್ದೆ. ಪಾತ್ರದ ಮೂಲ ಸ್ವರೂಪವನ್ನೇ ಬದಲಿಸುವಂತಹ ಯಾವುದಾದರೂ ಹೊಸ ಪ್ರಯೋಗವನ್ನು (improvisation) ನಾನು ಸೂಚಿಸಿದಾಗಲೆಲ್ಲಾ, ಅವರು 'ಸರ್, ಕಥೆಯ ಹಾದಿ ತಪ್ಪುವಷ್ಟು ವಿಭಿನ್ನವಾಗಿ ಯೋಚಿಸಬೇಡಿ' ಎಂದು ಹೇಳುತ್ತಿದ್ದರು. ಆ ಸ್ಪಷ್ಟತೆಯು, ಕೇವಲ ನಾಯಕನಿಗೆ ಪೂರಕವಾಗಿ ನಿಲ್ಲಲು ಮಾತ್ರ ನನ್ನನ್ನು ಆಯ್ಕೆ ಮಾಡಲಾಗಿಲ್ಲ ಎಂಬ ಭರವಸೆಯನ್ನು ನನಗೆ ನೀಡಿತು."
ತಮ್ಮ ವೃತ್ತಿಜೀವನವನ್ನು ಹಿಂತಿರುಗಿ ನೋಡುವಾಗ, ಹಿರಿಯ ನಟರಿಗೆ ಉತ್ತಮ ಪಾತ್ರಗಳು ಸಿಗುತ್ತಿಲ್ಲ ಎಂಬ ದೂರನ್ನು ಅವರು ಒಪ್ಪುವುದಿಲ್ಲ. "ಹೋರಾಟದ ಮೂಲಕ ನೆಲಮಟ್ಟದಿಂದ ಮೇಲೆದ್ದು, ಬದುಕುಳಿಯುವುದು ಹೇಗೆ ಎಂದು ಕಲಿತಾಗ ಮಾತ್ರ ಯಶಸ್ಸಿಗೆ ನಿಜವಾದ ಅರ್ಥವಿರುತ್ತದೆ," ಎಂದು ಅವರು ಹೇಳುತ್ತಾರೆ. "ಉತ್ತಮ ಪಾತ್ರಗಳು ಮಾಯವಾಗುತ್ತಿಲ್ಲ. ನೀವು ವಾಸ್ತವವನ್ನು ಅರಿತುಕೊಳ್ಳಬೇಕು, ಹಳೆಯ ಸಾಧನೆಗಳನ್ನೇ ನೆಚ್ಚಿಕೊಳ್ಳುವುದನ್ನು ಬಿಡಬೇಕು ಮತ್ತು ಹೊಸ ಪ್ರಯೋಗಗಳಿಗೆ ಸಿದ್ಧರಾಗಬೇಕು," ಎಂದು ಪ್ರೇಮ್ ಸಲಹೆ ನೀಡಿದ್ದಾರೆ.