ಜೈ ಭಜರಂಗಬಲಿ ಸಿನೆಮಾ ಸ್ಟಿಲ್ 
ಸಿನಿಮಾ ವಿಮರ್ಶೆ

ಜೈ ಭಜರಂಗಬಲಿ: ಕನ್ನಡ ಪ್ರೇಕ್ಷಕ ಇದಕ್ಕೆ ಬಲಿ!

ಕನ್ನಡ ಪ್ರೇಕ್ಷಕ ಇದಕ್ಕೆ ಬಲಿ! ಬಿಡುಗಡೆಗೆ ಮುಂಚೆಯೆ ಹಿಂದಿ ಡಬ್ಬಂಗ್...

ಬೆಂಗಳೂರು: ಬಿಡುಗಡೆಗೆ ಮುಂಚೆಯೆ ಹಿಂದಿ ಡಬ್ಬಂಗ್ ಹಕ್ಕುಗಳು ಮಾರಾಟವಾಗಿವೆ ಎಂದು ಪ್ರಚಾರ ಪಡೆದಿದ್ದ ರವಿವರ್ಮ ನಿರ್ದೇಶನದ ದ್ವಿತೀಯ ಚಿತ್ರ ಅಜಯ್ ರಾವ್ ಮತ್ತು ಸಿಂಧು ಲೋಕನಾಥ್ ಅಭಿನಯದ ಬಹು ನಿರೀಕ್ಷಿತ ಸಿನೆಮಾ ಜೈ ಭಜರಂಗ ಬಲಿ ಇಂದು ಬಿಡುಗಡೆಯಾಗಿದ್ದು, ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿದೆ.

ತಮ್ಮ ಈ ಸಿನೆಮಾದಲ್ಲಿ ಸೃಷ್ಟಿಸಿರುವ ಹಾಗು ಅನಂತನಾಗ್ ಪೋಷಿಸಿರುವ ಆಯುರ್ವೇದ ಪಂಡಿತ-ಜ್ಯೋತಿಷಿ, ಎಲ್ಲರಿಗೂ ಅವರ ಟೈಮ್ ಬಗ್ಗೆ ಭವಿಷ್ಯ ಹೇಳುತ್ತಿರುತ್ತಾನೆ. ಎಲ್ಲ ವಿಭಾಗಗಳಲ್ಲೂ ಇಷ್ಟು ಕೆಟ್ಟದಾಗಿ ಸಿನೆಮಾ ಮಾಡುವುದಕ್ಕೆ ಮುಂಚೆ ಬಹುಶಃ ನಿರ್ದೇಶಕರು ತಮ್ಮ ಈ ಪಾತ್ರದಿಂದಲೆ ತಮ್ಮ ಭವಿಷ್ಯ ಕೇಳಬೇಕಿತ್ತೇನೊ!

ಅಜಯ್ (ಅಜಯ್ ಕೃಷ್ಣ ರಾವ್) ನಿರುದ್ಯೋಗಿ ಯುವಕ. ತನ್ನ ನಾಲ್ಕು ಗೆಳೆಯರೊಂದಿಗೆ, ದುಡ್ಡಿಗಾಗಿ ಏನು ಕೆಲಸವನ್ನು ಬೇಕಾದರೂ ಮಾಡಬಲ್ಲವನು. ಒಂದು ರೌಡಿ ಗುಂಪಿಗೆ ಬೇಕಾದ ಇನ್ನೊಬ್ಬ ರೌಡಿಯನ್ನು ಎಳೆದು ತಂದು ಕಟ್ಟಿಹಾಕಬಲ್ಲವನು. ನಾಯಕಿ (ಸಿಂಧು ಲೋಕನಾಥ್) ಮಲೇಶಿಯಾದಲ್ಲಿ ಓದುತ್ತಿರುವ ಹುಡುಗಿ. ತಂದೆ ಆಯುರ್ವೇದ ಪಂಡಿತ(ಅನಂತನಾಗ್) ಮತ್ತು ಜ್ಯೋತಿಷಿ. ತಾಯಿ ಅಲೋಪತಿ ಡಾಕ್ಟರ್. ತಂದೆ ಭಾರತದಲ್ಲಿ. ತಾಯಿ ಮಲೇಶಿಯಾದಲ್ಲಿ. ತಂದೆಯನ್ನು ಭೇಟಿ ಮಾಡಲು ಮಗಳು ಭಾರತಕ್ಕೆ ಬರುತ್ತಾಳೆ. ಅವಳು ಬಂದ ಸಮಯ ಪರೀಕ್ಷಿಸಿ ತಂದೆ, ಅವಳು ಮತ್ತೆ ವಿದೇಶಕ್ಕೆ ಹಿಂದಿರುಗುವುದಿಲ್ಲ ಎಂದು ಭವಿಷ್ಯ ನುಡಿಯುತ್ತಾನೆ. ಹೀಗೆ ಸಾಗುವ ಸಿನೆಮಾದಲ್ಲಿ ಮೊದಲಾರ್ಧ ಅಜಯ್ ಮತ್ತು ಈ ನಾಯಕ ನಟಿಯ ಭೇಟಿ, ಸುತ್ತಾಟಗಳು ಕೆಲವು ಹೊಡೆದಾಟಗಳು ಹಾಡುಗಳು. ಈ ಮಧ್ಯೆ ತನ್ನ ತಂದೆ ತಾಯಿ ಒಂದಾಗಬೇಕು ಎಂದು ಹಲವಾರು ಬಾರಿ ಆಂಜನೇಯೆ ಸ್ವಾಮಿ ದೇವಸ್ಥಾನಕ್ಕೆ ಇಬ್ಬರೂ ಹೋಗಿ ಬರುತ್ತಿರುತ್ತಾರೆ. ಆದರೆ ಹೀರೋ ರಸ್ತೆಯ ಮಧ್ಯ ರೌಡಿಗಳ ಜೊತೆ ಹೊಡೆದಾಡುವದನ್ನು ನೋಡಿ ನಾಯಕಿ ಬೇಸತ್ತು ಮಲೇಶಿಯಾಕ್ಕೆ ಹಿಂದಿರುಗಲು ಆಣಿಯಾಗುತ್ತಾಳೆ. ಆದರೆ ಅದಕ್ಕೂ ಮುಂಚೆ ಇಬ್ಬರೂ ಅರೆಸ್ಟ್ ಆಗುತ್ತಾರೆ. ಮಧ್ಯಂತರ. ಆಂಜನೇಯ ಸ್ವಾಮಿ ದೇವರನ್ನು ಕದ್ದ ಆರೋಪದಲ್ಲಿ ಇಬ್ಬರು ನ್ಯಾಯಾಲಯಕ್ಕೆ ಹಾಜರಾಗುತ್ತಾರೆ. ನಂತರ ಒಬ್ಬ ಕಳ್ಳನ (ಬುಲೆಟ್ ಪ್ರಕಾಶ್) ಸಹಾಯದಿಂದ ತಪ್ಪಿಸಿಕೊಳ್ಳುತ್ತಾರೆ. ಇನ್ನೂ ಹಲವಾರು ಪಾತ್ರಗಳು ಬಂದು ಹೋಗುತ್ತವೆ. ಕೊನೆಗೆ ವಿಗ್ರಹ ಕದ್ದವರಾರು ಎಂಬುದೇ ಕಥೆ. ಸಂತಸದ ಅಂತ್ಯ ಕೂಡ ಸಿಗುತ್ತದೆ.

ಡಿಸೆಂಬರ್ ಮಧ್ಯಭಾಗದಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಬಹುಷಃ, ಈ ವರ್ಷದ ಅಂತ್ಯವನ್ನು ಸಂಭ್ರಮಿಸಲು ಒಳ್ಳೆಯ ಸರಕು ನೀಡಿಲ್ಲ. ಅತೀ ಸಾಧಾರಣ ಕಥೆ ಇಟ್ಟುಕೊಂಡು, ಅನಗತ್ಯ ಘಟನೆಗಳನ್ನು ಜೋಡಿಸಿ ಮಾಡಿರುವ ಈ ಸಿನೆಮಾ ಕನ್ನಡ ಪ್ರೇಕ್ಷಕರನ್ನು ಬಲಿ ಹಾಕುತ್ತದೆ. ಪೇಲವ ಸಂಭಾಷಣೆ, ಬಹುಶಃ ಅದನ್ನು ಮರೆಮಾಚಲು ಕರ್ಣ ಕಠೋರ ಹಿನ್ನಲೆ ಸಂಗೀತ, ಹರಿಕೃಷ್ಣ ಅವರ ಮತ್ತದೇ ಟ್ಯೂನ್ ಗಳು, ಯೋಗರಾಜ್ ಭಟ್ ಅವರ ಸತ್ವವಿಲ್ಲದ ಹಾಡುಗಳು ಬೇಸರ ತರಿಸುತ್ತವೆ. ಟೆನ್ನಿಸ್ ರ್ಯಾಕೆಟ್ ಹಿಡಿಯಲೂ ಬರದ ನಾಯಕಿ ಟೆನ್ನಿಸ್ ಆಡುವ ದೃಶ್ಯ, ಕ್ಲೀಷೆ ಎನಿಸುವ ಅದದೇ ರೌಡಿಸಂ ಮ್ಯಾನರಿಸಂಗಳು, ಸಿನೆಮಾ ನೋಡುವ ಉತ್ಸಾಹವನ್ನೇ ಒಣಗಿಸುವ ಹಾಸ್ಯ ಸನ್ನಿವೇಶಗಳು ಪ್ರೇಕ್ಷಕನನ್ನು ಗಡಿಯಾರವನ್ನೆ ತದೇಕಚಿತ್ತದಂತೆ ನೋಡುವಂತೆ ಮಾಡುತ್ತದೆ. ಕಥೆಯಲ್ಲಿ ಸತ್ವವಿಲ್ಲದೆ ಹೋದಾಗ ನಟರಲ್ಲಿ ಅಭಿನಯ ಚತುರತೆಯನ್ನು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ. ಆದುದರಿಂದ ಅಭಿನಯದ ಬಗ್ಗೆ ಪ್ರತಿಕ್ರಿಯಿಸುವ ಅವಶ್ಯಕತೆಯೇ ಇಲ್ಲ.

ಕನ್ನಡ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಇತ್ತೀಚೆಗಷ್ಟೇ ಮುಗಿದ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕನ್ನಡ ಚಲನಚಿತ್ರಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಒದಗಿಸಿಕೊಡುವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದಿದ್ದರು. ಹೊಸತನ, ಸಿನೆಮಾ ಸೌಂದರ್ಯ, ಕೊನೆಯ ಪಕ್ಷ  ಮನರಂಜನೆಯನ್ನೂ ಮರೆತಿರುವ ನಮ್ಮ ಇಂತಹ ಚಲನಚಿತ್ರಗಳಿಗೆ ಪ್ರಾದೇಶಿಕ ಮಾರುಕಟ್ಟೆಯೂ ಸಿಗುವುದು ಕಷ್ಟವಾಗಬೇಕು. ಆಗಲೇ ನಿರ್ದೇಶಕರು ತಮ್ಮ ಅದೇ ಪ್ರಾಚೀನ ಕಥಾ ಹಂದರಗಳು ಮತ್ತು ಹಳಸಿದ ಸಿನೆಮಾ ನಿರೂಪಣಾ ತಂತ್ರಗಳಿಂದ ಹೊರಬಂದು ಹೊಸತನದ ತುಡಿತಕ್ಕೆ ನಾಂದಿ ಹಾಡುವುದು!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

ಮೊದಲು ಪರಮೇಶ್ವರ್ ಕೂಲಿ ಚುಕ್ತಾ ಮಾಡಲಿ: ನಂತರ ವಿಧಾನಸಭೆ ವಿಸರ್ಜಿಸಿ ಡಿಕೆಶಿ ನೇತೃತ್ವದಲ್ಲೇ ಚುನಾವಣೆಗೆ ಹೋಗೋಣ!

SCROLL FOR NEXT