'ಮೆಲೋಡಿ' ಚಿತ್ರವಿಮರ್ಶೆ 
ಸಿನಿಮಾ ವಿಮರ್ಶೆ

'ಮೆಲೋಡಿ'ಯ ಕರ್ಕಶ ಶಬ್ದ

ಸಂಭಾಷಣೆಕಾರ ನಂಜುಂಡ ಕೃಷ್ಣ ೧೪ ವರ್ಷಗಳ ನಂತರ ಹಾಡುಗಾರರಾದ ರಾಜೇಶ್ ಕೃಷ್ಣನ್ ಮತ್ತು ಚೇತನ್ ಗಂಧರ್ವ ಅವರನ್ನು ಹಾಕಿಕೊಂಡು

ಬೆಂಗಳೂರು: ಸಂಭಾಷಣೆಕಾರ ನಂಜುಂಡ ಕೃಷ್ಣ ೧೪ ವರ್ಷಗಳ ನಂತರ ಹಾಡುಗಾರರಾದ ರಾಜೇಶ್ ಕೃಷ್ಣನ್ ಮತ್ತು ಚೇತನ್ ಗಂಧರ್ವ ಅವರನ್ನು ಹಾಕಿಕೊಂಡು 'ಮೆಲೋಡಿ' ಹೆಸರಿನ ಸಿನೆಮಾ, ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಬೀಳುತ್ತಿರುವ ಬೇಸಿಗೆ ಮಳೆಯಷ್ಟು ಹಿತವೇ? ಅಥವಾ ಈ ಮಳೆ ಮಾರ್ಕೆಟ್ ಪ್ರದೇಶಗಳಲ್ಲಿ ಸೃಷ್ಟಿಸುವ ಅವಾಂತರದಷ್ಟೇ ಕಿರಿಕಿರಿಯೇ? ಪೂರ್ಣ ಪ್ರಮಾಣದ ನಾಯಕರಾಗಿ ನಟಿಸಿರುವ ರಾಜೇಶ್ ಕೃಷ್ಣನ್ ಚಿತ್ರಕ್ಕೆ ತಮ್ಮ ವಿಶಿಷ್ಟವಾದ ಕೊಡುಗೆಯನ್ನೇನಾದರೂ ನೀಡಿದ್ದಾರೆಯೇ? ಎಲ್ ಎನ್ ಶಾಸ್ತ್ರಿ ಅವರ ಸಂಗೀತದಲ್ಲಿ ಮೆಲಡಿಯೇನಾದರೂ ಇದೆಯೇ?

ಕಿರಣ್ (ರಾಜೇಶ್ ಕೃಷ್ಣನ್) ಸಾಫ್ಟ್ವೇರ್ ತಂತ್ರಜ್ಞ. ಕೆಲಸವೇ ದೇವರು ಎಂದು ನಂಬುವ ಇವನಿಗೆ ಮದುವೆ ಎಂದರೆ ಉದಾಸೀನ. ಅವನ ಅಕ್ಕ ಮದುವೆ ಮಾಡಿಸಲು ಪರಿಪಾಟಲು ಪಡುತ್ತಿರುವಾಗ, ಡ್ಯಾನ್ಸರ್ ಅನು (ಕಾರ್ತಿಕಾ ಮೆನನ್) ಮೇಲೆ ಇವನಿಗೆ ಪ್ರೀತಿಯಾಗುತ್ತದೆ. ಆದರೆ ಅದನ್ನು ವ್ಯಕ್ತಪಡಿಸಲು ಪುಕ್ಕಲು. ತನ್ನ ಸ್ನೇಹಿತ ಮಧುವಿನ (ಚೇತನ್ ಗಂಧರ್ವ) ಮೊರೆ ಹೋಗುತ್ತಾನೆ. ಫೇಸ್ಬುಕ್ ನಲ್ಲಿ ಅನುವಿನ ಶಾಲಾ ಫೋಟೊ ಅಪ್ಲೋಡ್ ಮಾಡುವ ಮೂಲಕ ಸುಳ್ಳು ಹೇಳಿ ದೂರವಾಣಿ ಸಂಭಾಷಣೆ ಸಾಧಿಸುತ್ತಾನೆ. ಮಧು ತಾನೇ ಕಿರಣ್ ಎಂದು ಅನುವಿನ ಜೊತೆ ಸುದೀರ್ಘ ಫೋನ್ ಸಂಭಾಷಣೆಯಿಂದ ಅನುಳನ್ನು ಮೋಹಿಸುತ್ತಾನೆ. ಅನು ಕಿರಣ್ ಬಗ್ಗೆ ತಿಳಿಯಲು ತನ್ನ ಗೆಳತಿ ಬೆನ್ನಿಯನ್ನು (ಅಕ್ಷತಾ ಮಾರ್ಲಾ) ಕಳುಹಿಸುತ್ತಾಳೆ. ಅಲ್ಲಿ ಬೆನ್ನಿ ಮಧುವನ್ನು ಕಿರಣ್ ಎಂದುಕೊಂಡು ಗೊಂದಲಕ್ಕೀಡಾಗಿ, ಕೊನೆಗೆ ಅದು ತಿಳಿದರೂ, ಅನುವಿಗೆ ಅದೇ ಗೊಂದಲ ಉಳಿದು ಕಿರಣ್ ನನ್ನು ಮದುವೆಯಾಗುತ್ತಾಳೆ. ತನ್ನ ಸಹಪಾಠಿ ಕಿರಣ್ ಬೇರೆ ಎಂಬುದು ಹನಿಮೂನ್ ನಂತರ ಹೇಗೋ ತಿಳಿಯುತ್ತದೆ. ನಂತರ ಏನಾಗುತ್ತದೆ?

ಈ ರೀತಿ ಗೊಂದಲವಾಗಿ ಮತ್ತೊಬ್ಬನನ್ನು ಮದುವೆಯಾಗಿ, ನಂತರ ಎಲ್ಲವೂ ಸುಖಾಂತ್ಯ ಕಾಣುವ ಅಸಂಖ್ಯಾತ ಕಥೆಗಳು ಈಗಾಗಲೇ ಕಿರುತೆರೆಯಲ್ಲೂ, ಬೆಌತೆರಯಲ್ಲೂ ಧಾರಾಳವಾಗಿ ಮೂಡಿ ಬಂದಿವೆ. ಇಲ್ಲಿ ಫೇಸ್ಬುಕ್ ಮಾಧ್ಯಮ ಗೊಂದಲ ಮೂಡಿಸುತ್ತದೆ ಎಂಬುದನ್ನು ಬಿಟ್ಟರೆ ಅದೇ ಮಾಮೂಲಿ ಕಥೆ ಪ್ರೇಕ್ಷಕರಿಗೆ ಎಲ್ಲೂ ಗೊಂದಲಮೂಡಿಸದೆ ನಿದ್ದೆಗೆ ಜಾರಿಸುತ್ತದೆ. ಪ್ರತಿ ನಟನೂ ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಪೇಲವ ನಟನೆಯನ್ನು ಧಾರಾಳವಾಗಿ ನೀಡಿದ್ದಾರೆ. ಅದಕ್ಕೆ ಪೂರಕವಾದ ಸಂಭಾಷಣೆಯೂ ಚಿತ್ರದಲ್ಲಿದೆ. ಅಂಕೆಯಿಲ್ಲದ ಸಂಭಾಷಣೆ ಚಿತ್ರದುದ್ದಕ್ಕೂ ಕಿರಿಕಿರಿ ಉಂಟುಮಾಡುತ್ತದೆ. ಯಾವ ನಟನ ಅಭಿನಯದಲ್ಲೂ ಅರ್ಥಪೂರ್ಣ ಮುಖ ಭಾವನೆಗಳು ಮೂಡಿ ಬಂದಿಲ್ಲ. ಸುಮಾರು ೧೪ ನಿಮಿಷದ ಶಾರ್ಟ್ ಸಿನೆಮಾ ಮಾಡುವ ಕಥೆಯನ್ನು ಎರಡು ಕಾಲು ಘಂಟೆ ಧಾರಾವಾಹಿ ನಿರೂಪಣೆ ಶೈಲಿಯಲ್ಲೇ ಹಿಗ್ಗಿಸಿ ನಿರ್ದೇಶಕ ಪ್ರೇಕ್ಷಕರ ತಾಳ್ಮೆಯನ್ನು ಇನ್ನಿಲ್ಲದಂತೆ ಪರೀಕ್ಷಿಸುತ್ತಾರೆ. ಧಾರಾವಾಹಿ ರೀತಿಯ ಅಬ್ಬರದ ಅರ್ಥವಿಲ್ಲದ ನಿಸ್ತೇಜ ಹಿನ್ನಲೆ ಸಂಗೀತ ಪ್ರೇಕ್ಷಕರನ್ನು ಚಿತ್ರಮಂದಿರದಿಂದ ಬಡಿದೆಬ್ಬಿಸಿದರೆ ಆಶ್ಚರ್ಯವೇನಿಲ್ಲ. ಎಲ್ ಎನ್ ಶಾಸ್ತ್ರಿಯವರ ಸಂಗೀತ ಅತಿ ಸಾಧಾರಣ ಎನ್ನಬಹುದು. ಎಲ್ಲೋ ಕೇಳಿದ್ದೇವೆ ಎಂದೆನಿಸಿದರು ಒಂದೆರಡು ಹಾಡುಗಳನ್ನು ಸಹಿಸಿಕೊಳ್ಳಬಹುದು. ಛಾಯಾಗ್ರಹಣ ಕೂಡ ಧಾರಾವಾಹಿ ರೀತಿಯ ನಿರೂಪಣೆಗೆ ಪೂರಕವಾಗಿದ್ದು, ಇಡೀ ಫೇಸ್ಬುಕ್ ಪುಟವನ್ನೇ ಸ್ಕ್ರೀನ್ ಪೂರ್ತಿ ಹಲವಾರು ಬಾರಿ ತೋರಿಸಿರುವುದು ಕಿರಿಕಿರಿ ಉಂಟು ಮಾಡುತ್ತದೆ. ಸಂಕಲನಕಾರ ಮೊದಲಾರ್ಧದಲ್ಲಿ ಯಥೇಚ್ಛವಾಗಿ ಕತ್ತರಿ ಹಾಕಿ ಕೆಲವು ಸನ್ನಿವೇಶಗಳು ಅಪೂರ್ಣ ಎನ್ನಿಸುವಂತಿದ್ದರೆ, ದ್ವಿತೀಯಾರ್ಧದಲ್ಲಿ ಕೆಲವು ಸನ್ನಿವೇಶಗಳು ಘಂಟೆಗಟ್ಟಲೆ ಮುಗಿಯುವುದೇ ಇಲ್ಲವಲ್ಲ ಎನ್ನುವ ಮಟ್ಟಕ್ಕೆ ಕೈಚಳಕ ತೋರಿಸಿದ್ದಾರೆ. ಒಂದು ಹಾಡಿನಲ್ಲಿ ಬೀಚಿನಲ್ಲಿ ತೋರಿಸುವ ಮರಳಿನ(ಬಹುಶಃ) ಕಲಾ ಕೃತಿಗಳಷ್ಟೇ ಚಿತ್ರದಲ್ಲಿ ನೋಡಲು ಸಹ್ಯವೆನ್ನಿಸುವ ದೃಶ್ಯಗಳು. ಅದಕ್ಕೆ ಆ ಹಾಡಿನ ಕಲಾ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಲೇಬೇಕು.

ಇತ್ತೀಚಿನ ವರ್ಷಗಳ ಅತಿ ಹೆಚ್ಚಿನ ಸಶಕ್ತ ಮಾಧ್ಯಮ ಕಿರುತೆರೆ. ಅದರಲ್ಲಿಯೂ ಧಾರಾವಾಹಿಗಳು ಅತಿ ಹೆಚ್ಚು ಜನಪ್ರಿಯ. ಸಣ್ಣ ಕಥೆಯನ್ನು ಜಗ್ಗಿ ಜಗ್ಗಿ ಹೇಳುವ ಕಥೆಗಳು ವೀಕ್ಷಕರನ್ನು ವರ್ಷಾನುಗಟ್ಟಲೆ ಆವರಿಸಿಕೊಂಡುಬಿಡುತ್ತವೆ. ಕನ್ನಡ ಚಿತ್ರರಂಗದಲ್ಲಿ ಜನರು ಚಲನಚಿತ್ರಗಳನ್ನು ನೋಡುವುದೇ ಇಲ್ಲ ಎಂಬ ಕೂಗನ್ನು ನಿವಾರಿಸಲು ಜನಪ್ರಿಯ ಮಾಧ್ಯಮವಾದ ಧಾರಾವಾಹಿಯನ್ನು ನಂಜುಂಡ ಕೃಷ್ಣ ಬೆಳ್ಳಿತೆರೆಗೆ ಎಳೆದು ತಂದಿದ್ದಾರೆಯೇ ಎಂದೆನಿಸದೆ ಇರಲಾರದು. ಧಾರಾವಾಹಿ ರೀತಿಯ ಸಣ್ಣ ಕಥೆಯ ಎಳೆಯನ್ನು ಜಗ್ಗಿರುವುದು, ಧಾರಾವಾಹಿ ರೀತಿಯ ಅಬ್ಬರ ಹಿನ್ನಲೆ ಸಂಗೀತ, ಧಾರಾವಾಹಿ ರೀತಿಯ ಚಿತ್ರೀಕರಣ ಎಲ್ಲವೂ ಈ ಸಿನೆಮಾದಲ್ಲಿದೆ. ಧಾರಾವಾಹಿಗಳ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದು ತರುವುದಷ್ಟೇ ಚಾಲೆಂಜ್!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT